01430. ಕದ್ದುಬಿಟ್ಟನೆ…


01430. ಕದ್ದುಬಿಟ್ಟನೆ…
______________________

(#೦೩:ಫೇಸ್ಬುಕ್ ಬಳಗದ ಗೆಳೆಯರೊಬ್ಬರು ಒಂದು ಸಂಧರ್ಭವನ್ನು ವಿವರಿಸಿ ಅದಕ್ಕೆ ಹೊಂದುವ ಹಾಡು ಬರೆಯಲು ಕೇಳಿದ್ದರು. ಆ ಯತ್ನದಲ್ಲಿ ನಾಲ್ಕೈದು ಗೀತೆಗಳನ್ನು ರಚಿಸಿದ್ದೆ. ಅದರಲ್ಲಿ ಮೂರನೆಯದು ಈ ಹಾಡು. @ Madhu Smitha ಕಳಿಸಿದ್ದ ಚಿತ್ರವೊಂದನ್ನು ನೋಡಿದಾಗ ಅದು ಈ ಹಾಡಿಗೆ ಹೊಂದಿಕೆಯಾಗುತ್ತದೆ ಅನಿಸಿತು – ಆ ಫಲಿತವೆ ಈ ಪೋಸ್ಟ್..)

ಕದ್ದುಬಿಟ್ಟನೆ…
______________________


ಕದ್ದುಬಿಟ್ಟನೆ ಮನಸಾ
ಕಳ್ಳನಲ್ಲ, ನಾನೇ ಕೊಟ್ಟೆನೆ !
ಮಳ್ಳನಲ್ಲ ಮನಸಿನ ಹುಡುಗ
ಎದೆ ಸೇರಿಕೊಂಡು ಬೀಗ ಹಾಕಿದನೆ || ಕದ್ದುಬಿಟ್ಟನೆ ||

ನನ್ನ ಪಾಡಿಗಿದ್ದೆ ನಾನು
ಎಲ್ಲಿಂದಲೊ ಬಂದು ಬಿಟ್ಟನೆ
ಊರೂ ಕೇರಿ ಒಂದೂ ಹೇಳದೆ
ನನ್ಹೆಸರ ಕೇಳಿ ಪ್ರೀತಿ ಗಿಡವ ನೆಟ್ಟನೆ || ಕದ್ದುಬಿಟ್ಟನೆ ||

ಮಂತ್ರದಂಡ ಇಲ್ಲದೇನೇ
ಏನೊ ಮೋಡಿ ಮಾಡಿಬಿಟ್ಟನೆ
ನಿನ್ನೆ ಮೊನ್ನೆ ಪರಿಚಯಾ ಅಪರಿಚಿತ
ಜನ್ಮಜನ್ಮಾಂತರ ಚಿರಪರಿಚಿತ ಭಾವನೆ || ಕದ್ದುಬಿಟ್ಟನೆ ||

ನನ್ನ ತುಂಬ ಅವನೇ ಈಗ
ಮಿಕ್ಕೆಲ್ಲಾ ಜಗವ ಮರೆಸಿಬಿಟ್ಟನೆ
ಗೂಡು ತೊರೆದು ಹಾರಲು ಹಕ್ಕಿಗೆ
ಜೋಡಿಹಕ್ಕಿಯಾಗೊ ಕನಸ ಬರೆದನೆ || ಕದ್ದುಬಿಟ್ಟನೆ ||

ಇದೇನಿದು, ನಾನೇ ನಾನಲ್ಲ !
ಅವನಿಲ್ಲದೆ ನಾನಿಲ್ಲದ ಭಾವನೆ ?
ಕೇಳದೆ ಕೊಟ್ಟ ನಿನ್ನ ಪ್ರೀತಿ ನೌಕರಿಗೆ
ಬಾ ಗೆಳೆಯ ಕೊಡುವೆ ನನ್ನೆ ಸಂಭಾವನೆ || ಕದ್ದುಬಿಟ್ಟನೆ ||

– ನಾಗೇಶ ಮೈಸೂರು
(Nagesha Mn)
(Picture source : Internet / social media received via Madhu Smitha – thank you 😍👌👍🙏😊)

01429. ತುತ್ತಿಗರಸಿ, ಹೊತ್ತಿಗೆ ಗರತಿ


01429. ತುತ್ತಿಗರಸಿ, ಹೊತ್ತಿಗೆ ಗರತಿ
_____________________________


ತುಟಿಯಲೊಂದು ತುತ್ತು ಕಂದಗು
ಅದೆ ತುಟಿಯಲಿ ಮುತ್ತು ಇಬ್ಬರಿಗು
ಕೊಟ್ಟಳವಳು ಕಟ್ಟಿ ಹಾಕೆ ಮಾತಲಿ
ತಪ್ಪೇನಿದೆ ಅವಳಲ್ಲವೆ ವನಿತೆ ? ||

ಉಸಿರ ಕಂದಗೆ ತುಂಬಿದವಳು
ಬೀಜ ಬಸಿರಲಿಟ್ಟು ಹಡೆದವಳು
ಅಧಿಕಾರವಿಡೆ ಜಡೆ ಎರಡೂ ಕಡೆ
ತಪ್ಪೇನಿದೆ ಅವಳಲ್ಲವೆ ವನಿತೆ ? ||

ನಾಸಿಕ ತೀಡಿ ನಗಿಸುತ ಕಂದನ
ಆ ನಾಸಿಕದೇದುಸಿರಲಿ ರಮಣನ
ಕಚಗುಳಿಯಿಟ್ಟವಳ ನಗೆಯ ನಿರೀಕ್ಷೆ
ತಪ್ಪೇನಿದೆ ಅವಳಲ್ಲವೆ ವನಿತೆ ? ||

ಕಣ್ಣಲ್ಲಿ ತುತ್ತಿಟ್ಟವರಾರಿಲ್ಲಿ ಕಂದಗು
ಅದೆ ತುತ್ತಿಟ್ಟಿನಿಯನ ಸೆಳೆದ ಸೋಗು
ಕಣ್ರೆಪ್ಪೆಯಂತೆ ಕಾಪಿಡಲೆಂದಾಶಿಸಿರೆ
ತಪ್ಪೇನಿದೆ ಅವಳಲ್ಲವೆ ವನಿತೆ ? ||

ತುಟಿ ಹಕ್ಕಿಯಾಗಿ ತುತ್ತು ಮುತ್ತು
ನಾಸಿಕದ ಹಕ್ಕಿ ವಾಸನೆಯ ಸುತ್ತು
ಕಣ್ಣಿನ ಹಕ್ಕಿಗೆ ದೂರ ಹಾರುವಾಸೆ
ತಪ್ಪೇನಿದೆ ಅವಳಲ್ಲವೆ ವನಿತೆ ? ||

– ನಾಗೇಶ ಮೈಸೂರು
(Nagesha Mn)
(Picture source internet / social media received via Yamunab Bsy – thank you !😍👌🙏👍😊)

01428. ನದಿಯ ತಟ..


01428. ನದಿಯ ತಟ..
_________________________


ನದಿಯ ತಟದಲೊಂದು ದಿನ
ಕುಣಿಯುತಿತ್ತು ತಂಗಾಳಿ ಮೌನ
ಒಂದನೊಂದು ನುಂಗುತಿತ್ತು
ಸಂಗಾತಿ ಸಂಗತಿ ಅರುಹುತಿತ್ತು ||

ನುಡಿಸುತಿತ್ತು ನದಿಯ ಮುರಳಿ
ಕದಿಯುತಲಿ ಕುಳಿರ್ಗಾಳಿ ಸುರುಳಿ
ಜುಳುಜುಳು ನೀರ ಕುಡಿವ ಕಾಲ
ಕಚ್ಚಿ ತಿನ್ನುತಿತ್ತು ಮೀನಿನ ಜೋಗುಳ ||

ದೂರದಲೆಲ್ಲೊ ಬೆಟ್ಟದ ಮೇಲೆ
ದನಿಸುತಿತ್ತು ಗಂಟೆ ಮಾತಲೆ
ದಣಿವರಿಯದ ಪ್ರತಿಧ್ವನಿಯಾಟ
ಹರಿವ ನೀರ ಸುಳಿಯಾಗಿ ಸುತ್ತುತ ||

ದಡದ ಸಾಲು ದಂಡೆಯ ಜಾಲ
ಬಂಡೆಗಲ್ಲಿನ ಕಾವ್ಯ ಕೆಸರ ಮಲ
ಕಮಲ ಮನಕೆ ಕುಸುರಿ ತುಂತುರ
ಸಿಂಚನದಲೆ ರೋಮಾಂಚನ ಭರ ||

ಎಂಥ ಮೋಹಕ ಕದಿಯುವಾಟ
ನಿಸರ್ಗ ಸಹಜ ಸೊಗ ಕದಿವ ಚಟ
ಮೊಗೆಮೊಗೆದರು ಬರಿದಾಗದಲ್ಲ
ಕೊಟ್ಟು ಖಾಲಿಯಾಗದ ಪ್ರಕೃತಿ ಜಾಲ ||

– ನಾಗೇಶ ಮೈಸೂರು
(Nagesha Mn)
(Picture source : Internet / social media)