01532. ಕಾಲದ ಹಕ್ಕಿಗೆ..


01532. ಕಾಲದ ಹಕ್ಕಿಗೆ..

_______________________

ಹಕ್ಕೇನಿದೆ ನಿನ್ನ ದೂರಲು

ಹದಿನೇಳರ ಹರೆಯದ ಹಕ್ಕಿ?

ಹಕ್ಕಿಯಾಗಿ ಹಕ್ಕಿಗಾಗಿ ಹಾರಿದೆ

ಕತ್ತಲನಟ್ಟಿ, ಬೆಳಕ ಬೆನ್ನಟ್ಟಿ..||

ಕೂತಿದ್ದುಂಟು ದೇಕಿ ದಣಿದು

ಅನಿಸಿದ್ದುಂಟು ಬರಿ ಕಗ್ಗತ್ತಲು

ಕಾಡಿರಲಾರೊ ಪಾತಾಳ ಭೈರವಿ

ಹರಿದೆಲ್ಲಿಂದಲೊ ದ್ಯುತಿ ಪ್ರವಾಹ ! ||

ತಮ ದುರ್ಗಮದಲು ಕಿಡಿ ಕಿಂಡಿ

ಸೆಳೆ ತೆರೆದು ಕದ ನಿರಾಳ ತಂಗಾಳಿ

ತೇಪೆ ಹಚ್ಚಿದ ರಂಗು ಹೊಂಬಿಸಿಲು

ಹಚ್ಚಿ ಬೆಳಗಿದ ಜ್ಯೋತಿ ದಾರಿ ದೀಪ ||

ಕಾಲದ ಹಕ್ಕಿ ಹಾರಿ ಗಾಯ ಮಾಯ

ಮಾಯದ ಗುರುತಿಗೆ ಪ್ರೀತಿ ಲೇಪನ

ಬೆಸೆದ ಹೃದಯ ಸಂವಾದ ಸಾಂಗತ್ಯ

ನಿಂತ ನೀರಲ್ಲ ಬದುಕು ಭ್ರೂಣ ಬಾಲ ||

ದಾಟಿಲ್ಲವಿನ್ನು ಕಾನನ ಕಾಲು ದಾರಿ ಸ್ಪಷ್ಟ

ಅಭೇದ್ಯವಿತ್ತೆನಿಸಿದ ಸರಕೀಗ ಸಹನೀಯ

ಹದಿನೆಂಟರ ಹೊತ್ತಗೆ ಹೊತ್ತಂತೆ ಆಶಯ

ಪ್ರಖರ ಭರವಸೆ ಕಾಂತಿ ಹಕ್ಕಿ ಕಾಲುಂಗುರ ||

– ನಾಗೇಶ ಮೈಸೂರು

(Nagesha Mn)

(ಹೊಳೆನರಸೀಪುರ ಮಂಜುನಾಥ ರವರ ವಾರಾಂತ್ಯದ ಚಿತ್ರಕ್ಕೆ ಹೊಸೆದ ಕವನ..)

01531. ೧೭ಕೆ ನಿದ್ದೆ, ೧೮ಕೆ ಸನ್ನದ್ಧೆ !


01531. ೧೭ಕೆ ನಿದ್ದೆ, ೧೮ಕೆ ಸನ್ನದ್ಧೆ !

__________________________________

ದೇಗುಲ ಘಂಟಾನಾದದ ಜೋಗುಳ

ಬಡಿದೆಬ್ಬಿಸಲೆಮ್ಮ ಅಂತರಾಳ

ತುದಿಗುರುಳಿದ ಹದಿನೇಳರ ಬಂಡಿ

ಹದಿನೆಂಟರ ಪುಳಕದ ಹೊಸಿಲಲಿ ||

ಸುತ್ತು ಸುತ್ತು ಸುತ್ತಿ ಮತ್ತದೆ ಸುತ್ತು

ಹೆಜ್ಜೆ ಮೇಲ್ಹೆಜ್ಜೆ ಇಟ್ಟಡಿ ಮೇಲಡಿ

ದಿನ ವಾರ ತಿಂಗಳ ದೂಡಿದ ವರ್ಷ

ಮರಳಿ ಚಕ್ರ ಮೊದಲ ಬಿಂದು ಸ್ಪರ್ಶಿಸಿ.. ||

ಪುನರಾರಂಭ ಲೆಕ್ಕ ಮೊದಲಿಂದ

ಕಳೆದುದೆಲ್ಲ ಕೊಡವಿ ಹೊಸತು ಗಣನೆ

ಮತ್ತದೆ ಸುರುಳಿ ಋತುವಂತೆ ಮರಳಿ

ಬಿಚ್ಚಿಡಲಿದೆ ಕಾಲ ತಾನಡಗಿಸಿಟ್ಟ ನಿಗೂಢ ||

ವಿದಾಯದ ಹೊತ್ತಲೊಂದು ಘಳಿಗೆ

ಸಾಲು ಜೋಡಿಸಿಟ್ಟ ಲೀಲೆ ಹಳೆ ಸರಕು

ಚಿಗುರ್ಹಣ್ಣೆಲೆಗೆಲ್ಲ ಮರುಕಳಿಸಲದೆ ಜಾಲ

ಚೆಲ್ಲಿದೆ ಜಗದಗಲ, ಸೆರೆ ಹಿಡಿ ಕೈಮೇಲೆ ! ||

ಮುಗಿದ ಕಥೆಯ ಚಿತ್ರಪಟ ಚೌಕಟ್ಟಲಿ

ಸಮೀಕರಿಸೆ ಬರಲಿಹ ದಿನ ಬೆಸುಗೆ

ಬರುವ ವರುಷದ ಮತ್ತದೆ ಅನುರಣದೆ

ಮರುಕಳಿಸಿ ಹಾರೈಕೆ ವ್ರತ ಗದ್ದಲ ಸದ್ದು ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01530. ಅಂತರಾಳದ ಖೂಳ


01530. ಅಂತರಾಳದ ಖೂಳ

____________________________________

ಅಂತರಾಳದಲೆಲ್ಲೊ ಅಡಗಿಹಾ ಅದಮ್ಯ

ಹುಡುಕುತಿಹೆನೆಲ್ಲೆಡೆ ಎಲ್ಲಿ ನೆಲೆಸಿರುವೆ ?

ಶಿರದಲೊ? ಹೃದಯದಲೊ? ಕರದಲೊ? ಕರ್ಮದಲೊ?

ಎಲ್ಲಿದೆ ನಿನ್ನ ನೆಲೆ ? ಯಾವುದು ನಿನ್ನ ವಿಳಾಸ ? ||

ನೀ ತಾಳುವಾಕಾರ ಅನಂತಾನಂತ ಸ್ವರೂಪ

ತುದಿ ಮೊದಲಿಲ್ಲದ ಚಿಂತನೆ ಏನೇನೆಲ್ಲ ಸ್ವಗತ

ನೀ ಸಂತ, ನೀ ಸಾಧು, ನೀ ಕ್ರೂರಿ, ಕೊಲೆಗಡುಕ

ಮಥನದಲೆ ಮಾಡೆಲ್ಲ ತಣ್ಣಗಿಹ ಪರಿ ನೀನಿಹುದೆಲ್ಲಿ ? ||

ನೀ ಬಿತ್ತುವ ಬೀಜ ಬೆಳೆ ಸ್ವಾರ್ಥ ಲಾಲಸೆ ಕುಟಿಲ

ನಿನ್ನದೇ ಫಸಲಲ್ಲಿ ಕರುಣೆ, ದಯೆ, ದಾಕ್ಷಿಣ್ಯ, ಮಮತೆ

ನೀ ಹುಟ್ಟು ಹಾಕುವೆ ಕಾಮನೆ, ಮನ್ಮಥ ಚಿತ್ತವಿಕಾರ

ಕಾಣದಾಕಾರ ಸಾಕಾರ, ಕೃತಿಯಾಗಿ ಸಕ್ರಿಯ ದೈತ್ಯ ||

ನಿನ್ನರಿವ ಹೊಲಬು ಕಾಣದೆ ಕಂಗಾಲು ಬಡ ಜೀವ

ನನ್ನೊಳಗಿದ್ದು ನನ್ನೊಳಗ-ಹೊರಗನಾಡಿಸೊ ಸಂಜೀವ

ನಿನ್ನರಿವ ಬಲ ಬೇಡ ನಿನ್ನಿರುವಿಕೆಯ ತೋರಿಕೊ ಭ್ರೂಣ

ಮೊದಲಾಗಲಲ್ಲಿಂದ ಅಂಬೆಗಾಲಿಟ್ಟು ಅರಿವಿನೆಡೆ ಪಯಣ ||

– ನಾಗೇಶ ಮೈಸೂರು

(Nagesha Mn)

(ಚಿತ್ರಕೃಪೆ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಗೆಳೆಯರಿಂದ ಸಂಗ್ರಹಿತ/ರವಾನಿತ ; ಮೊದಲನೆಯ ಚಿತ್ರ ಶ್ರೀಧರ ಬಂಡ್ರಿಯವರ Sridhar Bandri ಲಲಿತಸಹಸ್ರನಾಮ ಪೋಸ್ಟಿನಿಂದ ಎರವಲು ಪಡೆದಿದ್ದು)

01529. ರಾಧೆಗೊಂದೆ, ಮಾಧವಗೆ ನೂರೊಂದೆ..!


01529. ರಾಧೆಗೊಂದೆ, ಮಾಧವಗೆ ನೂರೊಂದೆ..!

____________________________________________

ಕಟ್ಟಲೇನೆ ಕಾಲಗೆಜ್ಜೆ ?

ಇಡುವೆ ತಾನೆ ಜತೆಗ್ಹೆಜ್ಜೆ ?

ತಂದಿರುವೆನಲ್ಲೆ ಒಡವೆ ಪೆಟ್ಟಿಗೆ

ನಿನ್ನ ಸಿಂಗರಿಸೆ ಕುಣಿಯಲೊಟ್ಟಿಗೆ ||

ಕಟ್ಟೊ ನಿನ್ನಿಚ್ಚೆ ಮಾಧವ

ಕಣ್ಣಲಿದೆ ಆರಾಧನ ಭಾವ

ಬಚ್ಚಿಡಲಿದೆ ಕದ್ದು ಅರವಿಂದಾ

ಅವಸರಿಸದಿರು ನೀ ಕಟ್ಟಿರೆ ಚೆಂದ ||

ನೀನದೆ ಬದಲಾಗದ ರಾಧೆ

ಎಷ್ಟು ನೋಡಿದರೇನು ನಾನದೆ

ನೀನೆ ನೋಡಿ ನೀನೆ ನಿವಾಳಿಸುವೆ

ಹೊತ್ತಾಗೆ ಮುನಿವ ಯಮುನೆ ದಡವೆ ||

ಮೊದಲಟ್ಟಿಬಿಡು ಗೋವಲ್ಲಿ

ನಮ್ಮ ಬರುವಿಕೆಯ ಕಾದಿರಿಸಲಿ

ನೀನಾವರಿಸೆನ್ನ ತೊಡಿಸೊಂದೊಂದೆ

ಕ್ಷಣ ಯುಗವಾಗಲಿ ಮುಗಿಯದ ಧಂಧೆ ! ||

ನಿನ ಪರವಶತೆಗೇನೆನ್ನಲಿ ?

ನಾನೊಬ್ಬನೆ ನೆಲೆ ನಿನ್ನ ಮನದಲ್ಲಿ

ನಿನ್ನ ಬದ್ಧತೆ ನಿನಗೊಂದೆ ಹೆಸರು ರಾಧೆ

ನಿನ್ನಂತಾಗದ ನನಗೆ ನೋಡು ನೂರಾರಿದೆ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via Madhu Smitha – thank you 🙏👍😊)

01528. ಮೊದಲ ಪತ್ರ


01528. ಮೊದಲ ಪತ್ರ

___________________________

ಅಮ್ಮಾ ಹೇಳೆ ಬರೆಯಲೇನ ?

ಪತಿಗಿದುವೆ ಮೊದಲ ಪತ್ರ..

ಬರೆಯಲೇನು ತೋಚುತಿಲ್ಲವೆ

ಹೇಳಿಕೊಡರೆ ಯಾರು ಸೂತ್ರ ||

ಯಾಕೆ ಪೆದ್ದು ಮೇಲ್ಪುಟದ ಮಧ್ಯ

ಆರಂಭಿಸು ‘ಶ್ರೀ’ ಬರಹ ಸುಸೂತ್ರ

ಎಡತುದಿಗೆ ಹಾಕೆ ‘ಕ್ಷೇಮ’ ಸಾಕಾರ

ಬಲತುದಿಯಲಿಟ್ಟು ತೇದಿ ಜತೆಗೂರ ||

ಅಯ್ಯೊ ಅಮ್ಮ ಇದು ಪ್ರೇಮಪತ್ರ

ಬರೆಯಲೆಂತೆ ಲಗ್ನ ಪತ್ರಿಕೆ ತರಹ?

ಚಡಪಡಿಕೆ ದೂರ ಬಿಟ್ಟಿರದ ವಿರಹ

ಕ್ಷೇಮ ಸಮಾಚಾರವಲ್ಲವೆ ಸರಸ ||

ಗೊತ್ತೆ ಹುಡುಗಿ ನಾನಾಗಿದ್ದೆ ಒಮ್ಮೆ

ಅನುಕರಿಸೆ ಚೆನ್ನವೆ ಸಂಪ್ರದಾಯ

ನಡುವಲೆಲ್ಲ ನಿನ ವಿರಹ ಬರಹ

ತುಂಬೆಲ್ಲ ಪ್ರೀತಿ ಪ್ರೇಮದ ಕಾವ್ಯ ||

ಗೊಡ್ಡೆಂದಿದ್ದೆ ನೀ ಚಾಲಾಕಿ ಅಮ್ಮ

ಹೌದಲ್ಲ ಹೇಗೆ ಬರೆದರು ಅವ ನಲ್ಲ

ಬಿಡಿನ್ನು ಸಾಕು ಎನ್ನರಸ ಚೆನ್ನರಸ

ಎಂದಾರಂಭಿಸುವೆ ಮೊದಲ ಸಾಲು ||

ತುಂಬಿಸು ಮಗಳೆ ನಿನ್ನ ಪ್ರೀತಿಯಲ್ಲಿ

ನಡುನಡುವೆಯಿರಲಿ ವಾಸ್ತವದರಿವು

ಪತ್ರವಲ್ಲ ಕೇವಲ ಅಕ್ಷರದ ಭಾರ ಮಗು

ಜೀವನದ ಹೊಣೆ ಭರಿಸಲದೆ ಅಸ್ತಿಭಾರ ||

– ನಾಗೇಶ ಮೈಸೂರು

(Nagesha Mn)

(Picture source: Internet / social media received via FB friends – thank you ! can’t remember who sent it – just raise your hand in comments 😊🙏👍)

01527. ಗರಿ ಬಿಚ್ಚಿದ ಮಯೂರ..!


01527. ಗರಿ ಬಿಚ್ಚಿದ ಮಯೂರ..!

________________________________

ಕವಿ ಕತ್ತಲೆ ಮುಗಿಲ್ಮೋಡ

ಗಾಢ ಸೆಳೆತ ಮಳೆಯಾಗದೆ ಬಿಡ

ಬಿಸಿ ತಾಪವೊ ತಪನೆಯೊ ಕುದುರಿ

ಹೊದ್ದಿರಲಾಗದೆ ಗರಿ ಬಿಚ್ಚಿದನೆ ಮಯೂರ ||

ಒಳಗೆಂತದೊ ಪುಳುಪುಳಕ

ನವಿರೇಳಿಸಿತ್ತೆ ಮಾಡೇನೊ ಜಳಕ

ನಿಮಿರಿಸುತ್ತ ನೆತ್ತರು ಗರಿಗರಿ ಸಲಿಗೆ

ಕಣ್ಣ ತೆರೆಯುತಿತ್ತ ಕದ ಒಂದೊಂದಾಗೆ ||

ಕಣ್ಣೋ! ಕಣ್ಣೊಳಗಿಟ್ಟ ಕಣ್ಣೊ

ಗರಿಗರಿ ನೇಯುತ ಬೆಸೆದ ಹೆಣ್ಣೊ

ಕನಸಿನ ಲೋಕವೊ ಗಲಿರು ಗಲಿರ್ಹೆಜ್ಜೆ

ನಡಿಗೆಯ ನಾಟ್ಯಕೆ ತುಂತುರ ಹನಿಯೆ ಗೆಜ್ಜೆ ||

ಅಮರಾವತಿ ಭೂಮಿಯ ಸರದಿ ಮಯೂರ ತಾನೆ ದೇವರಾಜ ಸನ್ನಿಧಿ ಹುಬ್ಬು ರೆಪ್ಪೆ ಪಾಪೆ ನೇತ್ರ ನೇಯ್ಗೆಯ ದಾರ ದಳದಳ ಬಿಚ್ಚುವ ಹೂವಂತೆ ನವಿಲೆ ಸರದಾರ ||
ಕುಣಿದಾಡುವ ಪರಿ ಚಾಮರವೆ

ಬಿಚ್ಚಿದಂತಿದೆ ಬೆನ್ನಲಿ ಐರಾವತವೆ

ವೈಭೋಗವದು ಉದಿಸುತ ನೀ ನಿಂತಲ್ಲೆ

ಎಣಿಸುತಲಿದೆ ನಡಿಗೆ ನಾಟ್ಯಕೆ ಹೊಂದಿಸಲೆ! ||

ಬಣ್ಣನೆ ವ್ಯರ್ಥ ಬಣ್ಣಿಸದೆಲ್ಲಾ ಸೊಗ

ಗರಿ ಕಣ್ಣ ಸುತ್ತ ಚದುರಿದೆಳೆಗೂ ಬೆರಗ

ಹೇಳಲೇನು ಬಿಡು ಅವನಿತ್ತಾಗಿದೆ ಮುಕುಟ

ಕತ್ತನೆ
ರ್ಯಕಿಟ್ಟ ಮುಹೂರ್ತ ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via Muddu Dear,Yamunab Bsy thank you both 😊🙏👍)

01526. ಗಂಡು ನವಿಲೆ ದೇವರಾಜ..!


01526. ಗಂಡು ನವಿಲೆ ದೇವರಾಜ..!

_________________________________

ಗೌತಮನಿತ್ತ ಶಾಪ ಇಂದ್ರಗೆ

ಸಹಸ್ರ ಯೋನಿ ಮೈಯೊಳಗೆ

ಕರುಣಿಸೆಂದಾ ಕರುಣಾಜನಕ

ಮೈಯೆಲ್ಲಾ ಕಣ್ಣಾದ ಸಹಸ್ರಾಕ್ಷ ||

ಬಲು ಚಿಂತಿತನಾ ದೇವರಾಜ

ಕೊರಗುತಿದ್ದ ಆಗಲೆಂತು ಪ್ರಕಟ?

ಅಡ್ಡಾಡುತಿತ್ತಲ್ಲೊಂದು ಗರಿ ಹಕ್ಕಿ

ಬಣ್ಣವಿಲ್ಲದ ಬರಿ ಹೊದಿಕೆ ತೂಗಿ ||

ತಟ್ಟನೊಂದು ಚಿಂತನೆ ತಾ ಸಿದ್ಧ

ಕರೆದನದನು ಮುದ್ದಿಸಿ ಸಮೃದ್ಧ

ಕಣ್ಣಾಗೊ ಬಯಕೆ ನಿನ್ನ ಗರಿ ತುಂಬ

ಚೆಂದ ನೆಲೆಸಲೇನು ಹೆಚ್ಚಿಸಿ ನಿನ್ನಂದ? ||

ಹೆಣ್ಣು ನಾನೊಲ್ಲೆ ನೀ ಗಂಡೆಂದಿತು

ಚಂದವೊ ಕುಂದೊ ಸಂಶಯವಿತ್ತು !

ಕಣ್ಣಿಗೆ ಬಿತ್ತಾಗ ಅಡ್ಡಾಡಿತ್ತಲ್ಲೆ ಗಂಡು

ಬೇಡಿದ ನೀಡಲೆ ನಿನಗಿಲ್ಲದ ಸೊಗಡು? ||

ಹಿರಿ ಹಿರಿ ಹಿಗ್ಗಲಿ ಕುಣಿಯಿತಾ ಪಕ್ಷಿ

ಕಿತ್ತೊಂದೊಂದನೆ ಅಂಟಿಸಲಲ್ಲೆ ಅಕ್ಷಿ

ಬಗೆಬಗೆ ಬಣ್ಣ ಕೋರೈಸುವ ಗರಿ ಕಣ್ಣು

ಗರಿ ಬಿಚ್ಚೆ ಸೋತು ಶರಣಾದಳು ಹೆಣ್ಣು ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Muddu Dear,Yamunab Bsy – thank you very much ! 🙏😊👍)