01455. ಗುಂಡಿನ ಪದಗಳು (ಕುಡ್ಕರ ನಿಯ್ಯತ್ತು)


01455. ಗುಂಡಿನ ಪದಗಳು (ಕುಡ್ಕರ ನಿಯ್ಯತ್ತು)
______________________________________

ಅದೆಷ್ಟು ಭಾಷೆಗಳಲ್ಲಿ ‘ಗುಂಡಿಗೆ’ ಮೀಸಲಾದ ರತ್ನನ ಪದಗಳಂತ ಸಾಹಿತ್ಯ ಇದೆಯೊ ಗೊತ್ತಿಲ್ಲ . ಕನ್ನಡದಲ್ಲಿ ರಾಜರತ್ನಂರ ಇಡಿ ಪುಸ್ತಕಾನೆ ಇದೆ! ಅಂಥದ್ರಲ್ಲಿ ಈ ನಡುವೆ ಯಾಕೆ ಗುಂಡಿನ ಸಾಹಿತ್ಯ ಕಮ್ಮಿ ಅಂತ ಕೆಲವೊಮ್ಮೆ ಪ್ರಶ್ನೆ ಮೂಡುತ್ತಿತ್ತು . ಆಗನಿಸಿದ್ದು – ಬರೆಯಬಾರದೆನ್ನುವ ಮಡಿವಂತಿಕೆಗಿಂತ ಬರೆಯಬಹುದಾದ ಬಗೆಯನ್ನೆಲ್ಲ ನಮ್ಮ ಕನ್ನಡದ ದಿಗ್ಗಜಗಳು ಈಗಾಗಲೆ ಬರೆದು ಮುಗಿಸಿಬಿಟ್ಟಿದ್ದಾರೆ ಎಂದು. ಇದು ಗುಂಡಿನ ಸಾಹಿತ್ಯಕ್ಕೆ ಮಾತ್ರವಲ್ಲ – ಇತರ ಎಲ್ಲಾ ರೀತಿಯ ಸಾಹಿತ್ಯಕ್ಕು ಅನ್ವಯವಾಗುವಂತದ್ದು. ಹೀಗಾಗಿ ನಾವುಗಳೀಗ ಏನೇ ಬರೆದರು ಅವರು ಬರೆದು ಬಿಟ್ಟ ಸರಕು ಅಥವ ಅವರಿಂದ ಎರವಲು ಪಡೆದ ‘ಮೂಲ ಐಡಿಯಾ’ಗಳಷ್ಟೆ. ಆ ಅರಿವಿದ್ದೂ ಆ ಬಗೆಯಲ್ಲೆ ಬರೆಯುವ ಯತ್ನ ಕೇವಲ ಅವುಗಳ ನೆನಪನ್ನು ಮರುಕಳಿಸಲೆಂದಷ್ಟೆ. ಯಾಕೆಂದರೆ ನಾವೆಷ್ಟೆ ಬರೆದರು ಅವುಗಳ ಕಿಂಚಿತ್ ಸಮೀಪಕ್ಕೂ ಬರುವುದಿಲ್ಲ. ಜತೆಗೆ ಮಾಮೂಲಿ ಲಹರಿಯ ಕವಿತೆಯಿಂದ ವಿಭಿನ್ನವಾದ ಯತ್ನಗಳು ಆಗುತ್ತವೆಂಬ ಆಶಯ..! ಅಂತದ್ದೊಂದು ಯತ್ನ ‘ಗುಂಡು ಪ್ರಿಯರಿಗಾಗಿ‘

ಕುಡ್ಕರ ನಿಯ್ಯತ್ತು
_______________________


ನಾವ್ ಕುಡುಕರ್ ಮಧ್ಯೆ ನಿಯತ್ತು
ಹುಡ್ಕೊ ಮಾತೆ ಯಾಕೊ ಎಡ್ವಟ್ಟು
ನಾವಾಡೊದೆಲ್ಲ ನಾವಾಡೊ ಮಾತಲ್ಲ
ಒಳ್ಗಿರೊ ಪರ್ಮಾತ್ಮ ಗೋಲಿ ಆಡ್ತಾನಲ್ಲ ! ||

ಯಾರಿಗ್ ಹೇಳ್ಕಾಳಣ ನಮ್ಮೆದೆ ದುಃಖ
ಕಾಸ್ಕೊಟ್ರು ಕೇಳಲ್ಲ ಎಲ್ಲಾ ಅವ್ರವ್ರ ಲೆಕ್ಕ
ಹೊಟ್ಟೆಲಿರೊ ಕಷ್ಟ ಹೊರಗ್ಹಾಕೋ ತಿಕ್ಲು
ಹೆಂಡ ಸಾರಯ್ ಕುಡ್ದು ತಳ್ತಿವಾಚೆ ಕತ್ಲು ||

ಜುಮ್ಜುಮ್ಗುಟ್ಟೊ ಜ್ಯೂಸು ವಾಸ್ನೆಲೆ ಗಬ್ಬು
ಕೈಕೈಯಾಗಿದ್ರುನು ಮೂಗ್ ಮುಚ್ಚಿ ದಬ್ಬು
ಸೀದಾ ಘಾಟಲ್ಲೆ ತೆಗ್ಸುತ್ತೆ ಗಂಟ್ಲಲ್ಲಿ ಗೇಟು
ಕೊಳಬೆ ನುಗ್ಹೋಯ್ತಂದ್ರೆ ಹೊಟ್ಟೆಗೆ ನೀಟು ! ||

ಅಲ್ ಒಳಗ್ಯಾರೊ ಕೂತ್ಮೇಲೆ ಪಟ್ಟಾಭಿಷೇಕ
ದೊರೆಗಳ್ ಸಾಮ್ರಾಜ್ಯದಲಿ ನಮ್ದ್ಯಾವ ಲೆಕ್ಕ ?
ಅವರಂದಂಗೆ ಮಾಡ್ತೀವಿ ಹಾಡಾಡ್ತ ಕುಣ್ತ
ಮತ್ತಿಳ್ದಾಗ ನಾವ್ಮಾತ್ರ ನೆನ್ನೆ ಮರ್ತೋಯ್ತಾ ! ||

ಕುಡ್ದಾಗ ಕೊಟ್ಮಾತು ಯಾವ್ಲೆಕ್ಕ ಬಿಡ್ರಪ್ಪಾ
ಕುಡ್ಕನ ಭಾಸೆ ವಚ್ನ ಕುಡ್ದಷ್ಟೊತ್ತು ಕೇಳ್ರಪ್ಪ
ಅದ್ ಗೊತ್ತಿದ್ದು ನಿಯ್ಯತ್ತು ಇಲ್ಲಾಂದ್ರೆ ಮಕ್ಳ
ಕುಡ್ಕೊಂಡ್ಬಂದ್ ಇಕ್ತೀವಿ ಹರಿಯಂಗೆ ಚಕ್ಳ ! ||

– ನಾಗೇಶ ಮೈಸೂರು
(Nagesha Mn)
(Picture source internet / social media – guess received via Yamunab Bsy? – thanks 😍👌🙏👍😊 )

01454. ನಮ್ಮ ನಡುವಿನ ಪುಳಕ


01454. ನಮ್ಮ ನಡುವಿನ ಪುಳಕ
__________________________


ಎಲ್ಲಿ ಮಾಯವಾಯ್ತೆ ಸಖಿ
ನಮ್ಮ ನಡುವಿನ ಪುಳಕ ?
ಪ್ರತಿ ಗಳಿಗೆ ರೋಮಾಂಚನ
ಹೇಗಾಯ್ತೀಗ ಭ್ರಮಾಲೋಕ? || ಎಲ್ಲಿ ||

ಸ್ಪರ್ಶದಲಿತ್ತಲ್ಲೆ ಮಿಂಚಿನಾಟ
ವಿದ್ಯುಲ್ಲತೆ ನೀ ವಿದ್ಯುತ್ಪ್ರವಾಹ
ಮಿಂಚಂತೆ ನೀನೆಂದು ಅರಿವ ಮುನ್ನ
ಮಾಯವಾದೆ ನೀಡಿ ವಿದ್ಯುದಾಘಾತ || ಎಲ್ಲಿ ||

ಎಷ್ಟಿತ್ತು ಕಾತರ ಕಾಣುವ ತವಕ !
ಎಷ್ಟೊಂದು ಮುನಿಸು ವಿನಾಕಾರಣ !
ಯಾಕೆಲ್ಲಾ ಕದನ ಮೌನದ ಸೆರಗಲ್ಲಿ ?
ಕಾಡುತ್ತಿದ್ದ ನಿನ್ನಾ ಕಂಗಳ ಬೆರಗೆಲ್ಲಿ ? || ಎಲ್ಲಿ ||

ಭ್ರಮ ನಿರಸನ ನಿಜವಿರಬಹುದು
ಮನ ನಿರಶನ ಆದೀತೆ ಸರಹದ್ದು ?
ಎಲ್ಲೊ ಬಿದ್ದ ಗಳಿಗೆ ಹೆಕ್ಕಿ ಹುಡುಕದೆ
ಸದ್ದಿಲ್ಲದೆ ಬಿಕ್ಕಿ ಬಾಳಲೆಷ್ಟು ದಿನವೆ ? || ಎಲ್ಲಿ ||

ಯಾಕೀತರ ಕ್ಷಣಕ್ಷಣವು ಯುಗವೆ
ನೆಪ ಹುಡುಕಿ ದೂರಾಗುವ ಪರಿವೆ
ಹುಡುಕಿಕೊಟ್ಟವಳು ಏನೆಲ್ಲಾ ನೀನೆ
ನೀನೆ ಕಳುವಾಗೆ ಎಲ್ಲೆಂದು ಹುಡುಕಲಿ ? || ಎಲ್ಲಿ ||

– ನಾಗೇಶ ಮೈಸೂರು
(Nagesha Mn)
(Picture source internet / social media)

01453. ನಗುವ ಪ್ರಬುದ್ಧತೆ


01453. ನಗುವ ಪ್ರಬುದ್ಧತೆ
__________________________

ಪ್ರತಿಯೊಬ್ಬರ ಬದುಕಲು ಕಷ್ಟಸುಖಗಳ ನಿರಂತರ ಸಮ್ಮೇಳನವಿದ್ದರು ಯಾರಿಗೆ ಯಾವುದರ ಪಾಲು ಹೆಚ್ಚು ಎನ್ನುವುದಷ್ಟೆ ವಿಭಿನ್ನ. ಸುಖಕ್ಕೆ ದೂರದ ಮನಸು ಕಷ್ಟಕ್ಕೆ ಮಾತ್ರ ಕೊರಗುವುದು, ದೂಷಿಸುವುದು ಮಾನವ ಸಹಜ ಪ್ರವೃತ್ತಿ. ಕಷ್ಟಗಳ ಪರಂಪರೆ ಎದುರಾದಾಗಲಂತು ಬಳಲಿ ಕಂಗೆಟ್ಟು ಸೋತುಹೋಗುವವರೆ ಹೆಚ್ಚು. ಸೋಲುತಿದ್ದರು ಬಿಡದೆ ಹೋರಾಟ ನಡೆಸುತಿರಬೇಕೆನ್ನುವ ಅನಿವಾರ್ಯತೆ, ಛಲ ಈ ಕವನದ ಮುಖ್ಯ ಭಾವ.

ನಗುವ ಪ್ರಬುದ್ಧತೆ
__________________________


ನಕ್ಕು ಸುಮ್ಮನಾಗು ಮನಸಾ
ತೀರದೆನಿಸಿದಾಗ ಸಂಕಷ್ಟ
ನಗೆ ಬಾಣಲಿಯಿಂದ ಬೆಂಕಿಗೆ
ಬಿದ್ದು ಪುಟವಾಗು ಸ್ಪುಟವಾಗುತ ! ||

ಯಾರಿಗಿಲ್ಲ ತಾಪತ್ರಯ ಕರ್ಮ ?
ಕರುಣಿಸಿ ವಿಧಿಯ ಅಭಿಮಾನ
ನರಳಿ ನರಳಿ ನೆನಪಿಡುವಂತೆ
ಕಾಯುವ ಪರಿ ಅತೀ ಸೋಜಿಗ ||

ಬಿಕ್ಕಿಬಿಕ್ಕಿ ಅಳುವ ಸಮಯ
ಬಿದ್ದುಬಿದ್ದು ನಗುವೆ ಫ್ರಭುವೆ
ಸೋಲಿಸಿದ ಹೆಮ್ಮೆ ನಿನಗೆ
ಬಿಡದ ಗೆಲ್ಲುವಾ ಛಲ ನನಗೆ ||

ಯಾಕೆಂದು ಕೇಳುವುದಿಲ್ಲ
ನಾನೆ ಬೇಕಿತ್ತೆ ಎನ್ನುವುದಿಲ್ಲ
ನೀನಿಟ್ಟ ಪಂಥದೆ ಓಡುವೆ
ಓಡದಿದ್ದರೆ ನಿನಗವಮಾನ ||

ಅಚ್ಚರಿ ಗೋಳಿಡುತಿದ್ದ ಹೃದಯ
ಸಂತೈಸಿಕೊಂಡಿತೆಂತೊ ಕಾಣೆ
ನಿನ್ನಾ ವರ ಶಾಪಗಳಲ್ಲ ಅಸಮ
ಸಮಚಿತ್ತದಲರಳುವ ಸಪಕ್ವತೆ ||

– ನಾಗೇಶ ಮೈಸೂರು
(Nagesha Mn)

(picture source internet / social media received via : FB friend – thank you!😊👍🙏👌)