01459. ಹೇಳೆ ಕನ್ನಡಿ


01459. ಹೇಳೆ ಕನ್ನಡಿ
_______________


ನೋಡೆ ಕನ್ನಡಿ
ನಾ ಸಿಂಗರಿಸಿಕೊಂಡೆ
ಹೇಳೆ ಕನ್ನಡಿ
ಅವನೊಪ್ಪುವನೇನೆ ? || ನೋಡೆ ||

ಗುಳಿ ಬಿದ್ದ ಕದಪಿಗೆ
ಮೆರುಗಿತ್ತೆ ಕಣೆ ಬಣ್ಣದಲಿ
ಮಿಕ್ಕರೆಕೊರೆ ಗುಳಿಯ
ಸರಿ ಮುಚ್ಚಿದವೇನೆ ಕನ್ನಡಿ ? || ನೋಡೆ ||

ತಿದ್ದಿ ತೀಡಿದೆ ಕಾಮನಾಬಿಲ್ಲು
ಸ್ಪುಟವಾದವೇನೆ ಕಣ್ಣಿನಾ ಹುಬ್ಬು ?
ನಾಸಿಕ ಮೇನೆ ಹೊತ್ತಂತೆ ತಾನೆ
ಗಾಂಭೀರ್ಯ ತಾನೆ ಹೇಳೆ ಕನ್ನಡಿ ? || ನೋಡೆ ||

ಹಣೆಗಿಟ್ಟೆ ಬೊಟ್ಟು ಚುಕ್ಕೆ ಚಂದ್ರ
ಮೆಚ್ಚಬಹುದೇನೆ ನನ್ನ ದೇವೇಂದ್ರ ?
ಬೈತಲೆ ಸಿಂಧೂರ ಹೂ ಜಡೆ ನಾಗರ
ಕಿವಿಗೋಲೆ ಜುಮುಕಿ ಸಾಕೇನೆ ಕನ್ನಡಿ? || ನೋಡೆ ||

ಮರೆತಿಲ್ಲ ತಾನೆ ಮತ್ತೇನ ಗೆಳತಿ
ಹೇಳಿಬಿಡು ಈಗಲೆ ನಾ ಅಚ್ಚ ಕನ್ನಡತಿ
ಮುಕುರದ ಮಾತಲ್ಲ ನನ್ನ ಪ್ರತಿಬಿಂಬ
ನಿನಾಗೆ ಆಯನ ಅವನ ಗೆಲ್ಲಬೇಕು ಸೊಗ || ನೋಡೆ ||


– ನಾಗೇಶ ಮೈಸೂರು
(Nagesha Mn)

(Picture source : Internet / social media: first one received via Suma Sreepada Rao, second one received via Madhu Smitha – thank you both 😍👌👍🙏😊)

01458. ನಿನ್ನ ನೆನೆಯೆ..


01458. ನಿನ್ನ ನೆನೆಯೆ.. 
__________________________

ನಿತ್ಯ ಕುಡುಕರ ಕವನವೂ ಸೇರಿದಂತೆ ಏನೇನೊ ಬಡಬಡಿಸುತ್ತ, ಕವನ ಬರೆಯುತ್ತ ಅದೆಷ್ಟು ಪಾಪ ಜಮೆಯಾಗುತ್ತದೆಯೊ ಗೊತ್ತಿಲ್ಲ. ಅದಕ್ಕೆ ಪಾಪ ಪರಿಹಾರಾರ್ಥ ಅಂತ ಆಗೊಂದು, ಹೀಗೊಂದು ದೇವ/ದೇವಿ ಕವನ ಬರೆಯೋದು ಹೌದು. ಅಂತದ್ದೊಂದು ಸರಳ ಪದ್ಯ – ದೇವಿ ಸ್ತುತಿ ಇದು. ಯಥಾರೀತಿ ಲಲಿತಾಸಹಸ್ರನಾಮದ ಶ್ರೀಧರಬಂಡ್ರಿಯವರ ದೆಸೆಯಿಂದ ದೇವಿ ಚಿತ್ರಕ್ಕೆ ಕೊರತೆಯೆ? ಅವರಿಗೊಂದು ನಮನದೊಡನೆ ದೇವಿಯ ನೆನಕೆ.

ನಿನ್ನ ನೆನೆಯೆ..
__________________________


ಹೊತ್ತೇನು ಗೊತ್ತೇನು ?
ನಿನ್ನ ಸುತ್ತ ಸುತ್ತೇನು
ತಾಯಿ, ನೀನಲ್ಲವೆ ಜಗಜ್ಜನನಿ ?
ಮನಸ ನಿಲಿಸೆ ಮನಸಾ ಹಾಡಲಿ ||

ಬೇಡಲೇನೆ? ನೀಡೆ ನೀನೆ
ನಿನಗರಿವಿಲ್ಲವೆ ಒಳಿತು ಕೆಡಕು
ಬೇಡೆ ನಾನು ಬೇಟೆಗಾರ
ಬೇಡೆನ್ನದೆ ಎಲ್ಲ ಬೇಕೆನ್ನುವ ಹುಂಬ ||

ಹಗಲಿದ್ದರೇನೆ ರವಿ ದೀಪ
ನೆರಳು ತಾಯೆ ನಿನ್ನಯ ಕರುಣೆ
ಇರುಳಿದ್ದರೇನು ತಮ ತತ್ತರ
ನೀನಿಹೆ ಬೆಳಕಾಗಿ ಜಗದುದ್ದಗಲಕು ||

ಮಾಡಿದ್ದರೇನೆ ಲೌಕಿಕ ಕರ್ಮ
ನೆನೆಯಲೆಂದೇ ಮನ ಸಮಾಂತರ
ಮಾಡೆ ಸ್ಮರಣೆ ಅಪರಿಪೂರ್ಣ
ಮನ್ನಿಸಮ್ಮ ತಾಯೆ ನಿಕೃಷ್ಟ ಸಹಜ ||

ಇಟ್ಟಾಗ ಗಳಿಗೆ ಪೂಜೆಗೆ ಹೊತ್ತು
ಕೈ ಬಿಡಬೇಡವೆ ಮನ ಮರ್ಕಟ ಶುದ್ಧ
ಆ ಹೊತ್ತಾಗಲಿ ನಿನದೇ ಪೂರ್ತಿ
ತಪ್ಪಿಲ್ಲದಂತೆ ಜಪಿಸಲಿ ಮನ ಏಕಾಗ್ರ ||


– ನಾಗೇಶ ಮೈಸೂರು
(Nagesha Mn)
(Picture source internet / social media : taken from one of the lalitha sahasra naama post of Sridhar Bandri – thank you 😍🙏😊)

01457. ಸಂವಾದ


01457. ಸಂವಾದ
_________________

ನಮ್ಮ ಫೇಸ್ಬುಕ್ ಸ್ನೇಹ ಬಳಗದಿಂದ ನಿಯಮಿತವಾಗಿ ಚಂದದ ಚಿತ್ರಗಳು ಬರುತ್ತವೆ – ಕವನವಾಗಿಸುವ ಕೋರಿಕೆಯೊಡನೆ. ಬಹುತೇಕ, ಕವನಗಳಾಗಿ ಫೇಸ್ಬುಕ್ಕಿನಲ್ಲಿ ರಾರಾಜಿಸುತ್ತವೆ ಕೂಡ. ಆಗೆಲ್ಲ ನನ್ನನ್ನು ಕಾಡುವ ಭಾವ – ಆ ಚಿತ್ರದ ಮೂಲ ಕತೃ ಯಾರೆಂದು ಗೊತ್ತಿದ್ದರೆ ಒಂದು ಪೋಟೊ ಕ್ರೆಡಿಟ್ ಆದರು ಕೊಡಬಹುದಿತ್ತಲ್ಲ ಎಂದು. ಆದರೆ ಅಂತರ್ಜಾಲದ ಈ ವಿಸ್ಮಯ ಜಗದಲ್ಲಿ ಲಕ್ಷಾಂತರ ಕೈದಾಟಿ ಬರುವ ಆ ಚಿತ್ರಮೂಲದ ಹುಡುಕಾಟ – ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದ ಹಾಗೆ. ಅದಕ್ಕೆ ಚಿತ್ರಮೂಲ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಎಂದು ಸುಮ್ಮನಾಗಬೇಕಾಗುತ್ತದೆ. ಕೆಲವೆಡೆ ಚಿತ್ರದ ಮೇಲೆ ಮೂಲವಿದ್ದರೆ (ಕನಿಷ್ಠ ಹಸ್ತಾಕ್ಷರ) ಅಷ್ಟರಮಟ್ಟಿಗೆ ಸಮಾಧಾನ. ಅಂತದ್ದೊಂದು ಹಸ್ತಾಕ್ಷರವಿರುವ ಅಪರೂಪದ ಚಿತ್ರವಿದು – ಅವರಿಗೊಂದು ನಮನ !

ಸದ್ಯ, ಚಿತ್ರ ಕಳಿಸಿದವರು ಗೊತ್ತಿರುವುದರಿಂದ ಅವರಿಗೊಂದು ಧನ್ಯವಾದ ಹೇಳಬಹುದು. ಚಿತ್ರದ ನೈಜ ‘ಕಾಪಿರೈಟ್’ ಒಡೆಯರಾದ ಮೂಲದ ಆ ಅದೃಶ್ಯ ಕಲಾವಿದರಿಗೆಲ್ಲ ಇದೋ ಹೃತ್ಪೂರ್ವಕ ನಮನ!!

(ಅಂದಹಾಗೆ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿಲ್ಲವಾದರು ನಾವು ಕ್ರೆಡಿಟ್ ಕೊಟ್ಟು ಬಳಸುವುದು ಸರಿಯಾದ ವಿಧಾನ)

ಸಂವಾದ
_________________


ಶ್ವೇತ ಗುಲಾಬಿ
ನೀನಂತರಂಗ
ನಿನಗೇಕೆ ಬೇಕೆ
ಬಾಹ್ಯದ ಸಂಗ ? ||

ಉಸಿರು ಕಟ್ಟಿತೆ
ಒಳಗಿನ ಘೋರ ?
ಬೇಕಿತ್ತೆ ಹಸಿರಲ್ಲಿ
ಉಳಿವಿನಾ ದಾಯ ? ||

ಕತ್ತಲಿತ್ತೆ ಒಳಗೆ
ಕಾರ್ಮೋಡ ಧೂರ್ತ
ದಬ್ಬಿತೇನು ಹೊರಗೆ
ಕೊಳಕಾಗಿ ಸ್ವಾರ್ಥ ? ||

ಹಕ್ಕಿ ಜೀವ ನಾವು
ಚಿಲಿಪಿಲಿಗೆ ಒಲವು
ನೀನಿಲ್ಲದೆ ಒಳಗೆ
ಹೇಗೆ ತಾನೆ ಹಾಡೇವು ? ||

ನೀ ಅಂತರಾತ್ಮ
ಅಂತರಂಗದ ಸತ್ವ
ನೀನಿಲ್ಲ ಹೊಳಪು
ಬರಿ ಕಪ್ಪು ಬಿಳುಪು ||

ನೀನೆಲ್ಲೊ ಹಸಿರಾಗೆ
ನಿಂತುಹೋದೀತು ಸೂಲು
ಬಾ ಅಂತರಂಗಕೆ
ಹಾಡು ಜೀವ ಸರಿಗಮ ||

– ನಾಗೇಶ ಮೈಸೂರು
(Nagesha Mn)

(Picture source : Internet / social media – refer to Picture ; photo received via Suma B R – thank you madam 😍👌🙏👍😊)

01456. ಪಾದೋತ್ಸಾಹ..


01456. ಪಾದೋತ್ಸಾಹ..
_____________________


ಗೆಜ್ಜೆ ಗೆಜ್ಜೆ ಸದ್ದಲಿ
ಹೆಜ್ಜೆ ನೀರಲ್ಲದ್ದಲಿ
ಗಿಲಿಗಿಲಿ ಗೆಜ್ಜೆಗೆ ಸದ್ದಿನ ಮಜ್ಜನ
ತರುಣಿ ಹೆಜ್ಜೆಗೆ ತುಂತುರು ಸ್ನಾನ ! ||

ಧಾರೆ ಧಾರೆ ಖುದ್ದು
ಟಪಟಪ ಹನಿ ಬಿದ್ದು
ಪಾದದಲೆಬ್ಬಿಸಿತೇನೊ ಭಾವ
ಜುಳುಜುಳು ಎದೆಗು ಅನುಭವ! ||

ತುದಿ ಹೆಬ್ಬೆರಳಲೆ ಆಟ
ಪಾದಪೂರ ನೆಲ ಮುಟ್ಟಾ
ಎಚ್ಚರ ತುಳಿದೀಯಾ ಕುಸುಮ
ನಿನ್ನೆ ನೀನೆ ತುಳಿದಂತೆ ಅಸಮ ||

ಗಂಗೆ ಇಳಿದು ಬಂದಾಗ
ಜಟೆಯನೊಡ್ಡಿದ ಶಿವನಾಗ
ಚಿಮ್ಮಿಸಿದೆ ಒಡ್ಡಿದ ನಿನ್ನಾ ಪಾದ
ತುಂತುರು ಸಿಂಪಡಿಕೆ ಆಹ್ಲಾದ ||

ಸೆರಗಂಚಿನ ಮೆರುಗು
ರಕ್ಷಾಕವಚದ ಬೆರಗು
ನೋಡಲ್ಲಿ ಸಾಂಕೇತಿಕ ಸಮೃಧ್ಧ
ಗಾಂಭೀರ್ಯ ಮಡಿಲ ನಗೆ ಶುದ್ಧ ||

– ನಾಗೇಶ ಮೈಸೂರು
(Nagesha Mn)

(picture source: Internet / social media shared via Muddu Dear – thanks madam 😍👌👍🙏😊)