01463. ನೀರೆ ನೀರೆ ಜಲಧಾರೆ


01463. ನೀರೆ ನೀರೆ ಜಲಧಾರೆ
________________________
(ಕವಿತೆಯ ವಸ್ತು ಎಲ್ಲೆಲ್ಲೆ ಸುತ್ತಿದರು ಕವಿ ಮನಕೆ ಮುದ ಕೊಡುವುದು ನಿಸರ್ಗವೆ. ಅಂತದ್ದೊಂದು ಚಿತ್ರದ ಮೇಲಿನ ಸರಳ ಕವನ)

ನೀರೆ ನೀರೆ ಜಲಧಾರೆ
________________________


ನೀರೆ ನೀರೆ ನೀನೆ ನೀರೆ
ಸಲಿಲ ಜಲಲ ಜಲಧಾರೆ
ಹರಿ ಹರಿವ ಲಾಲಿತ್ಯ ನಿನ್ನ ಸಕಲ
ಪಾತ್ರಕೆ ಹೆಣೆದು ನಿನ್ನಾಕಾರ ಸ್ಥೂಲ ||

ಮೇಲಲ್ಲಿ ಹುಣ್ಣಿಮೆ ಚಂದ್ರ
ಕತ್ತಲೆ ಜಗಕೆ ಸೃಷ್ಟಿ ಲಾಂದ್ರ
ತುಂಡು ಬೆಳದಿಂಗಳಾಗಿ ಕರಗಿ ಬಿದ್ದ
ನೀರಾಗಿ ನೀರೆ ದಿರುಸುಟ್ಟು ಮೆರೆದಿದ್ದ ||

ನೋಡವನೆ ಬ್ರಹ್ಮನಾ ಅವಧೂತ
ಬೆರೆಸುತ್ತ ಹಸಿರಿಗೆ ಶ್ವೇತಮುಕುಟ
ನೀಲಿ ಬಾಣಲೆಯಲರೆಯುತ್ತ ಸರಕ
ಬಂಡೆಗಲ್ಲಿನೆದೆಯಲೆಬ್ಬಿಸಿಹ ಪುಳಕ ||

ನೋಡಿಲ್ಲಿ ಪ್ರಕೃತಿ ಕಾರ್ಖಾನೆ
ನಿಸರ್ಗ ನಿರಂತರ ಉತ್ಪಾದನೆ
ನೀರಿಂದ ಚಲನೆ ನೀರೆ ಸೃಷ್ಟಿಗರಮನೆ
ಚಕ್ರದಾವರಣದೆ ಎಲ್ಲಿ ಮೊದಲುಕೊನೆ ||

ಕುಣಿದು ನಲಿದು ಬಾ ಬಾರೆ
ನೀನೆ ತಾನೆ ನಿಸರ್ಗದ ಸೀರೆ
ಉಟ್ಟು ತೊಟ್ಟು ಬಳುಕಲೆದೆಗೆ ಆಹಾ!
ಕಾದ ರಸಿಕ ಮನ ಆಸ್ವಾದಿಸಿ ಸ್ವಾಹ ! ||

– ನಾಗೇಶ ಮೈಸೂರು
(Nagesha Mn)
(Picture source : Internet / social media (once again don’t know the real source) received via Muddu Dear – thanks madam 😍👌🙏👍😊)

01462. ವಾರಿಜವಿದೆ ನಾರಿ ನಿನಗೆ..


01462. ವಾರಿಜವಿದೆ ನಾರಿ ನಿನಗೆ..
_____________________________

(ಒಂದೆರಡು ದಿನದ ಹಿಂದೆ ಹೊಳೆನರಸಿಪುರ ಮಂಜುನಾಥರವರ ಪೋಸ್ಟೊಂದರಲ್ಲಿದ್ದ ಚಿತ್ರ ಮನಸೆಳೆದು ಅದಕ್ಕೊಂದು ಕವನ ಹೊಸೆದಿದ್ದೆ – ಅದೀಗ ನಿಮ್ಮ ಅವಗಾಹನೆಗೆ)

ವಾರಿಜವಿದೆ ನಾರಿ ನಿನಗೆ..
_____________________________


ತಡೆಯಬೇಡವೆ, ತಾಳೆ ಮುಡಿಸಿಯೆ ಬಿಡುವೆ
ಕಮಲವದನೆಗೊಂದು ಚಂದ ಕಮಲದ ಒಡವೆ
ತಡೆವ ಕರವ ತಡೆವ ಕರದಪ್ಪುಗೆಯಲಿರಲಿ ಹಸ್ತ
ಬೆಚ್ಚಗಿರಲಲ್ಲಿ ಮುಡಿಸುವೆ ಮುಡಿಗೆ ಹೂ ಪ್ರಶಸ್ತ ||

ಎದೆಗೊರಗಿ ಕಣ್ಮುಚ್ಚೆ ನಿರಾಳ ನಾನೀವೆ ವಚನ
ಮುತ್ತ ಕದಿಯುವುದಿಲ್ಲ ಗುಟ್ಟಾಗಿತ್ತು ಚುಂಬನ
ಬೊಡ್ಡೆಗೊರಗದೆ ಅಡ್ಡ ನಾನಾಗಿ ನಿನ್ನಪ್ಪುಗೆ ಖೆಡ್ಡ
ಹಂಸತೂಲಿಕಾ ತಲ್ಪ ತಂಗಾಳಿ ಬೆರೆಸಿ ಸಂಗಡ ||

ನಿದಿರೆಯಾಗಲಿ ಸುಂದರ ಕನಸ ತಾವರೆಗೊಳ
ಕಣ್ಮರೆಯಾಗಲಿ ಕಾಡುವ ಎದೆಯೊಳ ತಳಮಳ
ಬಂಧನವಲ್ಲ ಭರವಸೆ ಕೈ ಬಿಡದ ಭದ್ರತೆ ಹೆಣ್ಣೆ
ಭದ್ರನಾಗಿ ಕಾಯುವೆ ಮರೆತೆಲ್ಲ ಮಲಗಿಕೊ ಕಣ್ಣೆ ||

ಭಾವದಪ್ಪುಗೆ ಬೆಚ್ಚಗೆ ಹದ ಮೀರದಿರಲು ನೀರಿಗೆ
ಕಾಲನಿಟ್ಟು ಕೂತಿಹ ಪ್ರಾಯದೆಚ್ಚರಕಿಟ್ಟೆ ಮೆಚ್ಚುಗೆ
ಸುತ್ತುವರೆದಿರುವೆ ನಿನ್ನ ಸುತ್ತೇಳು ಸುತ್ತಿನ ಕೋಟೆ
ಮುತ್ತಿಗೆ ಹಾಕಲೆಲ್ಲಿ ಬಿಡು ಅರಿಯಲಾಗದೊಳಗುಟ್ಟೆ ||

ಬಳೆ ಕಂಕಣ ತಾಯಿತ ಮುಂಡಾಸು ಕಟ್ಟುಪಾಡು
ಬಿಚ್ಚಿದ ಜಡೆ ಸ್ವೇಚ್ಛೆ ಕಟ್ಟದಿದ್ದರು ಸೊಬಗ ಸೊಗಡು
ತಲ್ಲೀನ ಪರವಶ ಭಾವದ ಮುದ್ರೆಯಾಗಲಿ ಪ್ರೇಮ
ದೈವೀಕ ಗಳಿಗೆಯಿದುವೆ ಹೃದಯಗಳ ಸಭ್ಯ ಸಂಗಮ ||

– ನಾಗೇಶ ಮೈಸೂರು
(Nagesha Mn)
(Picture source : Internet / social media – taken from a post of ಹೊಳೆನರಸೀಪುರ ಮಂಜುನಾಥ – thanks Manju sir 😍🙏👌👍😊)

01461. ಯಾಕೀ ಪರಿ ತ್ಯಾಗ ?


01461. ಯಾಕೀ ಪರಿ ತ್ಯಾಗ ?
______________________

ನಮ್ಮಲ್ಲಿ ಸಾಧಾರಣ ಕಂಡುಬರುವ ಒಂದು ಸಹಜ ಗುಣ ತ್ಯಾಗ. ಹೊಣೆಗಾರಿಕೆ ಹೊತ್ತುಕೊಂಡು ಅದನ್ನು ನಿಸ್ವಾರ್ಥದಿಂದ ಅಕ್ಷರಶಃ ಪಾಲಿಸಹೊರಟವರಲ್ಲಿ ಇದು ಎದ್ದು ಕಾಣುವ ಸ್ವಭಾವ. ತಂದೆ ತಾಯಿಗಳಿಗೆಂದು ಮಕ್ಕಳೊ, ಮಕ್ಕಳಿಗೆಂದು ಹೆತ್ತವರೊ, ಒಡಹುಟ್ಟಿದವರ ಸಲುವಾಗಿ ಅಣ್ಣನೊ, ತಮ್ಮನೊ, ಅಕ್ಕನೊ, ತಂಗಿಯೊ – ಕೆಲವೊಮ್ಮೆ ಗೆಳೆಯರ ಸಲುವಾಗಿ ಕೂಡ ತ್ಯಾಗದ ಸೆರಗ್ಹಿಡಿದು ನಡೆವ ಜನರಿದ್ದಾರೆ. ಅವರನ್ನು ಗುರುತಿಸಲಿ ಬಿಡಲಿ – ತಮ್ಮ ಕರ್ತವ್ಯವೆಂದು ಮಾಡಿಕೊಂಡು ಹೋಗುವ ಸ್ವಭಾವ ಇವರದು. ಎಷ್ಟೋ ಬಾರಿ ಇತರರ ಸಲುವಾಗಿ ತಮ್ಮ ಸುಖ ಸಂತೋಷಕ್ಕು ಬೇಲಿ ಹಾಕಿಕೊಳುವುದು ಅಪರೂಪವೇನಲ್ಲ.

ಆದರೆ ವಾಸ್ತವದಲ್ಲಿ ಅಂತಹವರ ತ್ಯಾಗವನ್ನು ದೌರ್ಬಲ್ಯದಂತೆ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುವ ಜನರೇನು ಕಮ್ಮಿಯಿಲ್ಲ. ವಿಪರ್ಯಾಸವೆಂದರೆ ಯಾರಿಗಾಗಿ ತ್ಯಾಗ ಮಾಡಿಕೊಂಡು ಹೆಣಗಾಡುತ್ತಿರುತ್ತಾರೊ ಅವರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳೂ ಆಗಿರುತ್ತಾರೆ. ಯಾರಿಗಾಗಿ ಯಾತನೆ, ಕಷ್ಟ, ತೊಡಕುಗಳನ್ನು ಅನುಭವಿಸುತ್ತಾರೊ ಅವರೆ ಅದನ್ನು ನಿರ್ಲಕ್ಷಿಸುವಾಗ – ‘ಯಾಕಾದರು ಬೇಕಿತ್ತು ಈ ಪಾಡು?’ ಎನಿಸಿದರು, ಹುಟ್ಟುಗುಣದಂತೆ ಆ ಪ್ರವೃತ್ತಿಯನ್ನು ಬಿಡಲಾಗದೆ ಮೌನದಲ್ಲಿ ನುಂಗಿಕೊಂಡು ಹೋಗುತ್ತಾರೆ.

ಅಂತದ್ದೊಂದು ಚಿತ್ರಣ ಈ ಕವನದಲ್ಲಿ. ಸಂಸಾರದ ಒಳಿತಿಗಾಗಿ ಬೇರೆ ಇರಬೇಕಾದ ಅನಿವಾರ್ಯತೆ, ಆ ಒಳಿತೆಂದುಕೊಂಡಿದ್ದನ್ನು ಪಡೆಯಲಾಗದ ಅಸಹಾಯಕತೆ, ಆ ತ್ಯಾಗವನ್ನು ಲೆಕ್ಕಿಸದ ಪರಿಸರ – ಕೊನೆಗೆ ಸುಖದ ಬೆನ್ನಟ್ಟಿ ಹೊರಟ ಪ್ರಕ್ರಿಯೆಯೆ ಅಸುಖ, ಅಶಾಂತಿಯ ಮೂಲವಾಗುವ ವಿಚಿತ್ರ ಪರಿಸ್ಥಿತಿ ಮತ್ತಷ್ಟು ಗೊಂದಲ, ಅಸಹಾಯಕತೆಯತ್ತ ತಳ್ಳಿದಾಗಿನ ವಿಹ್ವಲ ಸ್ಥಿತಿ – ಇಲ್ಲಿನ ಹಿನ್ನಲೆ.

ಯಾಕೀ ಪರಿ ತ್ಯಾಗ ?
___________________


ನಿನ್ನಳಲು ಅರಿವಾಗಿದೆ
ನಿನ್ನೊಳಗು ಬರಿ ನೋವಿದೆ
ಕಣ್ಣೊರೆಸುವ ಕೈಯಿದೆ ದೂರ
ಒರಗೊ ಹೆಗಲಿಲ್ಲದೆ ಎದೆ ಭಾರ ! ||

ಏನೊ ಮಾಡಲು ಹೋದೆ
ಯಾವ ಗುರಿಗೊ ದೂರಾದೆ
ಗುರಿಯೆ ಗುರಿ ತಪ್ಪಿದ ಘೋರ
ಕಾಡುವ ಮೊದಲಾಗೆಯ ಹತ್ತಿರ ? ||

ನೋಡೀಗ ನಡುವೆ ಜಾಲ
ಅತ್ತಲು ಇಲ್ಲ ಇತ್ತಲು ಸಲ್ಲ
ಸಲ್ಲದ ಮಾತಾಗುವುದೆ ಉತ್ತರ
ಹೇಳು ಏರುವುದೆಂತು ಗುರಿಯೆತ್ತರ ? ||

ಬೇಕೇನು ಇಷ್ಟು ತ್ಯಾಗ
ಇದಲ್ಲ ಲೆಕ್ಕ ಇಡುವ ಜಗ
ಬೆಳೆವ ತನಕ ಮಕ್ಕಳೆ ಮುಕುಟ
ರೆಕ್ಕೆ ಬಲಿತ ಮೇಲವರೆಲ್ಲೊ ಹಾರಾಟ ||

ಅವರ ಒಳಿತಿಗೆ ನೋಡಿ
ದೂರವಿದ್ದೆ ಆಗಿದ್ದೂ ಜೋಡಿ
ಏನಿದೇನು ಈ ಕಾಲದ ಮೋಡಿ ?
ಸುಖಕು ಖೋತ ಸುಖ ಸಂಸಾರದ ಹೆಸರಡಿ! ||

– ನಾಗೇಶ ಮೈಸೂರು
(Nagesha Mn)
(Picture source internet / social media)

01460. ಸಾಕಪ್ಪ ಸಾಕು ಅಡಿಗೆ


01460. ಸಾಕಪ್ಪ ಸಾಕು ಅಡಿಗೆ
_______________________


ಅಡಿಗೆ ಅಡಿಗೆ ಅಡಿಗೆ
ಮಾಡಬೇಕು ಅಡಿಗಡಿಗೆ
ಸಿಕ್ಕಿದರೆ ಕಂಡು ಹಿಡಿದವನ
ಮಾಡಬೇಕು ಸಾಷ್ಟಾಂಗ ನಮನ ||

ಬೆಳಗೆದ್ದು ಬಿಸಿ ಪೇಯ
ಬೇಕೆಲ್ಲರಿಗು ಮಹನೀಯ
ಇದ್ದರೇನು ಚಳಿಮಳೆಬಿಸಿಲು
ತಿಂಡಿ ಜತೆ ಮತ್ತೊಮ್ಮೆ ಫಸಲು ||

ಸಾಲಾಗಿ ಮನೆ ಮಂದಿ
ಮಾಡಿ ಹಂಚಬೇಕು ಬುದ್ಧಿ
ಮಾಡಿದ್ದು ಮುಗಿವ ಮೊದಲೆ
ತಿನ್ನದಿರೆ ಉಪವಾಸದ ಕೋಟಲೆ ||

ಮುಗಿಯಿತಪ್ಪ ಉಸ್ಸಪ್ಪ
ಸರಿ ಪಾತ್ರೆ ತೊಳೆದೆತ್ತಿಟ್ಟಪ್ಪ
ಉಸಿರಾಡಲಿಲ್ಲವೆ ಪುರುಸೊತ್ತು
ಮಧ್ಯಾಹ್ನದಡಿಗೆ ಊಟದ ಹೊತ್ತು ! ||

ಮತ್ತದೆ ಹಳೆ ರಾಮಾಯಣ
ಸಾಯಂಕಾಲ ಚಹಾಪುರಾಣ
ರಾತ್ರಿಯಡಿಗೆ ಮಾಡಲೇನ ಶಿವನೆ
ನಿಂತು ಪಾತ್ರೆ ತೊಳೆದು ಬೆನ್ನಿನ ಬೇನೆ ||

ಸಾಲದ್ದಕ್ಕೆ ಟೀವಿ ಪುರಾಣ
ಅಕ್ಕಪಕ್ಕ ಗುಸುಗುಟ್ಟೊ ಧ್ಯಾನ
ಮಡಿ ಮಜ್ಜನ ಪೂಜೆ ಪುನಸ್ಕಾರ
ಸಾಕಪ್ಪಾ ಸಾಕು ಹಾಳು ಸಂಸಾರ ||


– ನಾಗೇಶ ಮೈಸೂರು
(Nagesha Mn)

(Picture source : internet / social media)