01467. ಮರೆತುಬಿಡು ಮಿಕ್ಕೆಲ್ಲ..


01467. ಮರೆತುಬಿಡು ಮಿಕ್ಕೆಲ್ಲ..

_______________________________

ಮರೆತುಬಿಡು ಮಿಕ್ಕೆಲ್ಲ

ಈ ಗಳಿಗೆಯಷ್ಟೆ ಶಾಶ್ವತ

ತನ್ಮಯತೆಯಲಿ ಅನುಭವಿಸು

ಕಣ್ಮುಚ್ಚಿಕೊಂಡೆ ಮನಸಾ ||

ನೂರೆಂಟಿವೆ ಕಾಡಲು

ತೆರೆದ ಕಣ್ಣು ಮರೆಮಾಚದು

ಮುಚ್ಚಿದರೆಗಳಿಗೆ ಭ್ರಾಮಕ

ಲೋಕದಲಿದ್ದರು ಕಿರುಗಳಿಕೆ ||

ಯಾರಿಗಿಲ್ಲಿದೆ ಸಮಯ ?

ಸರಿ ತಪ್ಪು ಒಪ್ಪು ಸಂವಾದ

ಸರಿ ಸರಿ ಎನ್ನುವವರದೆ ಜಗ

ಸರಿಯದೆ ನೋಡೀಗ ನಮ್ಮದೆ ||

ಬೇಡ ಚುಕ್ಕಿ ಚಂದ್ರಮ ಲೆಕ್ಕ

ಕೃತಕ ಸೃಷ್ಟಿಯದು ಅಸಹನೆ

ಮುಚ್ಚಿದ ಕಣ್ಣೊಳಗಿದೆ ನಡಿಗೆ

ಬಿಚ್ಚದೆ ಗಳಿಗೆ ಹೊಕ್ಕು ನೋಡುವ ||

ಬಿಡು ಯಾವುದಿಲ್ಲ ನಿಯಮ

ಮನ ತೋಚಿದ್ದು ಮಾಡಲಿ

ಧರ್ಮ ಕರ್ಮ ಶ್ರದ್ಧೆ ಪರಿಣಿತಿ

ಎಲ್ಲ ಕಲಿಕೆ ತಪ್ಪಿನ ಬಯಲಿಲ್ಲಿ ||

– ನಾಗೇಶ ಮೈಸೂರು

(Nagesha Mn)

(Picture source internet / social media)

01466. ಕಾದ ಬದುಕಿನ ಕಥೆ


01466. ಕಾದ ಬದುಕಿನ ಕಥೆ
___________________
(೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೨ಕ್ಕೆ ಬರೆದ ಕವನ)


ಯಾರಿಟ್ಟರಿಲ್ಲಿ ಬಂದು,
ಹೋದವರ ಲೆಕ್ಕ ?
ದಿನದ ಕೊನೆಯ ಶೂನ್ಯ
ಬರಿ ಖಾಲಿ ಖಾಲಿ…||

ಮಿಕ್ಕಿದ್ದು ಬರಿ ಭೂತಗಳೆ
ಪಂಚಭೂತದ ಶುದ್ಧ;
ಬೆಳಗೆದ್ದ ನಡಿಗೆಯಲಿ
ಪರಿಶುದ್ಧ ಭವಿತದ ಕಾಲ..||

ಕರೆದು ಬಂದಾರೆ ಬಾರಣ್ಣ
ಕುಂದರೆ ಕೂತು ಗಳಿಗೆ..
ನೋಡೆ ವಿಶಾಲ ಶರಧಿ ಗಗನ
ಕಾಡೆ ಕಪ್ಪುಬಿಳಿಯಾದ ಹಸಿರು..||

ನೆನಪುಗಳ ಗರಿಕೆ ಚಿಗುರು
ಎಲೆ ಚಿಗುರಿ ರೆಂಬೆ ಕೊಂಬೆ..
ಮುದಾಮುದ ಅಹವಾಲು
ಸಲ್ಲಿಸುವ ಹೊತ್ತ ತಂಗಾಳಿ..||

ಬಂದರು ಹೋದರು ಅಮಿತ
ಬಂದು ಹೋಗುವ ಅನಂತ..
ಬರುವೆಯೊ ಬಾರೆಯೊ ಅನಿಶ್ಚಿತ
ಬಂದ ಮೇಲೆ ಕೂತಾಡದೆ ವಿಧಿಯಿಲ್ಲ ||

– ನಾಗೇಶ ಮೈಸೂರು
(Nagesha Mn)

(೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೨ಕ್ಕೆ ಬರೆದ ಕವನ – ಚಿತ್ರ ೩ಕೆ ಬಳಗದ್ದು)