01470. ನೆಮ್ಮದಿಯ ನಿದಿರೆ..


01470. ನೆಮ್ಮದಿಯ ನಿದಿರೆ..

_________________________

ತಾವರೆಯೆಲೆ ಹಾಸಿಗೆ

ಕಟ್ಟಿದ ಕನಸಿನ ಜೋಳಿಗೆ

ತೂಗುತಿದೆ ಜಲದಲೆ ತರಂಗ

ಮೈಮರೆತ ಲಲನೆ ನಿದಿರೆ ಪ್ರಸಂಗ ||

ಕಾವಲಿವೆ ತಾವರೆ ಸುತ್ತ

ತಾರೆ ಮೊಗದವಳ ಕಾಯುತ್ತ

ತೂಗಿ ಮುಟ್ಟಲವಳ ಮೊಗದಾವರೆ

ನಾಚಿದವಳ ಮೊಗವಾಗಿದೆ ಕೆಂದಾವರೆ ||

ಪಡೆಯುತ ಸ್ವಪ್ನದೆ ಆಸರೆ

ಹಡೆಯುತ ಜೀವದ ಜಗಧಾರೆ

ಜಲದಿಂದುದ್ಭವಿಸಿದ ಜೀವ ವಿಕಾಸ

ಪ್ರಕೃತಿ ಪುರುಷಗಳೆರಡು ಅವಳದೆ ಖಾಸ ||

ಜಲಚರ ಪತಂಗವಿಟ್ಟ ಕಚಗುಳಿ

ಕೈಕಟ್ಟಿದ ತಲ್ಲೀನತೆ ಬಿಡಿಸಿ ಮೈಚಳಿ

ಕನಸಿನೊಳಗೊಂದು ಕನಸಾಗುತ ಸಾಕಾರ

ಜಗ ನೆಮ್ಮದಿ ನಿದಿರೆಯಲಿ ಲಲನೆಯ ಸಂಸ್ಕಾರ ||

ಮಲಗು ಮಲಗು ಜಗದಾ ಸೃಷ್ಟಿ

ತುಸು ವಿಶ್ರಮಿಸು ಕಾಯಲಿ ಸಮಷ್ಟಿ

ನಿನ್ನೊಡಲಲೊಡಮೂಡಲಿ ಕಲ್ಪನೆ ಮೂರ್ತ

ನಮಗರಿವಾಗಲಿ ಬಿಡಲಿ ಪಾಲಿಸುವ ಅನವರತ ||

– ನಾಗೇಶ ಮೈಸೂರು

(Nagesha Mn)

(Picture source from Internet / social media , received via Uma Odayar – thanks madam 😍🙏👌👍😊)

01469. ಆಳ ಆಳ ಪಾತಾಳ


01469. ಆಳ ಆಳ ಪಾತಾಳ

____________________________

ಆಳ ಆಳ ಪಾತಾಳ

ಇಳಿದರೆ ಕೈಗೆ ಸಿಕ್ಕುವಳಾ ?

ಸಿಕ್ಕುವಳವಳಲ್ಲವೆ ಗಂಗೆ

ಸಿಗದಿರಲಾಗುವಳೆಂತು ಅಂಬೆ ? || ಆಳ ||

ಜೋತು ಬಿದ್ದ ಸಂಸಾರ

ಆಳಕಿಳಿದಷ್ಟು ಉದ್ದುದ್ದದ ಹಗ್ಗ

ಎಟುಕಲಿಷ್ಟೆ ಗುಟುಕು ನೀರು

ನೇಣಾಗೆ ಕುಣಿಕೆ ಕಾಯುವರಾರು ? || ಆಳ ||

ಕೆತ್ತಲೆಷ್ಟು ಮೆಟ್ಟಿಲ ದೊರೆ

ಬತ್ತಿ ಬತ್ತಿ ಯಾಕಿಷ್ಟು ಒಳಗಿಳಿವೆ ?

ನೀರಲ್ಲ ನೂರು ಕೆಸರ ರಾಡಿ

ನೀರಿಗು ಸಾಹಸ ನೀರೆಯ ಕಾಡಿ || ಆಳ ||

ಸರತಿ ಸಾಲು ಕಾದ ಕರ್ಮ

ಸಿಕ್ಕವರ ಪಾಲು ಸಿಗದಲ್ಲ ಸಮ

ಕೆಳಗಿಳಿದರು ಹತ್ತಿದರೆಷ್ಟೊ

ಇಳಿಯದೆ ಹತ್ತದೆ ಬಾಳಿದವರಷ್ಟು || ಆಳ ||

ಗಂಗೆ ಗಂಗೆ ಪಾತಾಳ ಗಂಗೆ

ಜೀವ ಹಿಡಿದಿಡಲು ನಿನ್ನಾ ಹಂಗಿದೆ

ನೀನೆ ತುಸು ತುಸುವೆ ಮೇಲೇರೆ

ನೀರಾಡಿ ಕಣ್ಣಾಲಿ ನಿನ್ನಾ ಪೂಜಿಪರೆ || ಆಳ ||

– ನಾಗೇಶ ಮೈಸೂರು

೦೮.೧೨.೨೦೧೭

01468. ಬಹನೇನೆ ?


01468. ಬಹನೇನೆ ?

__________________________

ಕೊರಳಲಿಹ ಮಾಲೆ ಬಾಡುವ ಮೊದಲೆ

ನೇಸರನ ಹಾದಿ ಮಸುಕ ಮಬ್ಬಾಗಬಿಡದೆ

ಕಾದು ಬೇಸತ್ತ ಮನವ ಇಬ್ಬಾಗವಾಗಿಸದೆ

ಸದ್ದುಗದ್ದಲವಿರದೆಡೆ ಸಂಭ್ರಮಿಸೆ ಬಹನೇನೆ ? ||

ಕಂಕಣ ಕಟ್ಟುವ ಕೈಲಿ ಕುಸುಮದ ದಂಡೆ

ನನ್ನೊಲವ ಭಾವ ಬರೆಯೆ ಎಲೆಯೆ ಓಲೆ

ಚಿಗುರ ಕಡ್ಡಿಯೆ ಲೇಖನಿ ಮೀರಿ ಮನದೆಲ್ಲೆ

ಸ್ಪುರಿಸಿಹ ಸೊಗದ ವರ್ಷಧಾರೆಗೆ ಬಹನೇನೆ ? ||

ನೋಡೆ ಸುತ್ತೆಲ್ಲ ಕವಿಯುತಿದೆ ಮೋಡ ಗಾಢ

ಮುತ್ತಿ ಆವರಿಸಿ ಕಾಡಲು ನಿಭಿಡಾ ನಿಗೂಡ

ಕಲ್ಲು ಮನದವಳೆಂದು ಕರಗಿಸೆ ವರ್ಷಧಾರೆ

ಸುರಿಸಿ ಶರಣಾಗಿಸುವ ಮೊದಲೆ ಬಹನೇನೆ ? ||

ನಾ ಬರೆದಿರುವೆ ಕವನ ಅವನ ನೆನೆಯುತ್ತ

ಕಾವ್ಯದೋಲೆಯ ತುಂಬ ಅವನದೇ ಗಣಿತ

ಕಳಿಸಿರುವೆ ಅವಿರತ ಅಗಣಿತ ಮೇಘಸಂದೇಶ

ಮೇಘದೂತನ ಕೋರಿಕೆ ಮನ್ನಿಸಿ ಬಹನೇನೆ ? ||

ಜಗದ ಪರಿವೆಯಿಲ್ಲ ಅರಿವೆ ಜಾರಿದರಿವಿಲ್ಲ

ಪ್ರಾಯದ ಪಾರ್ಶ್ವ ಬಯಲಿಗೆ ತೋರಿದರಿವಿಲ್ಲ

ಅವನೊಂದು ನೆಪವಾಗಿ ಅವನೆ ಸಖ ನೆನಪಾಗಿ

ಬರಿ ಕಾಡದೆ ತಡಕಾಡಿಸದೆ ಓಡೋಡಿ ಬಹನೇನೆ ? ||

– ನಾಗೇಶ ಮೈಸೂರು

(Nagesha Mn)

(ರವಿವರ್ಮರ ಈ ಚಿತ್ರ ಹೊಳೆನರಸೀಪುರ ಮಂಜುನಾಥರ ಪೋಸ್ಟಿನಿಂದ ಎರವಲು ಪಡೆದಿದ್ದು. ಅವರ ಪೋಸ್ಟಿನ ಕೋರಿಕೆಯನುಸಾರ ಬರೆದ ಕವನವಿದು)