01473. ನನ್ನ ಪಾಡಿಗೆ ನಾನು


01473. ನನ್ನ ಪಾಡಿಗೆ ನಾನು

_______________________

ನಾ ಕಾದು ಕೂತಿಲ್ಲ ಯಾರಿಗು

ಕವಿ ಬರೆಯಬೇಡವೊ ಹುಸಿಗವನ

ನಾನು ನಾನಾಗಿ ಕೂತ ಹೊತ್ತು

ಬಿಟ್ಟುಬಿಡು ನನ ಪಾಡಿಗೆ ನನ್ನ ! ||

ಸಾಕು ಬಣ್ಣನೆ ಹಸಿರು ಸಿರಿ ಪ್ರಕೃತಿ

ನಿಸರ್ಗವೆ ಅವಳೆಂದಾ ಭ್ರಮಾಲೋಕ

ನಯನ ನಾಸಿಕ ಹಣೆ ಗಲ್ಲ ಕುರುಳ

ಬಣ್ಣಿಸಿ ನಿಜದ ನನ್ನೆ ಮರೆಸುವೀ ಕುಹಕ ||

ನಾನೆತ್ತಲೊ ನೆಟ್ಟ ನೋಟ ಅವನಲ್ಲ

ಒಳಗೊಳಗಿನ ಕಾರಣ ಎಟುಕುವುದಿಲ್ಲ

ನಾನಲ್ಲಿಹೆ ಪ್ರಪುಲ್ಲೆ ವಿಚಲಿತೆ ಚಕಿತೆ

ನನ್ನನರಿವ ಗೊಂದಲ ಬಿಡೆನಗಿರಲಿ ಎಲ್ಲ ||

ಬಯಸಿದೇಕಾಂತ ಕಾನನ ಪ್ರಕ್ಷುಬ್ಧ

ನಿಶ್ಯಬ್ಧದಲೆ ಹುಡುಕಿರುವೆ ಮೌನದ ಸದ್ದ

ಜಗದಾಚೆಯೆಲ್ಲೊ ಬ್ರಹ್ಮಾಂಡ ಮೂಲೆ

ಅಲೆದಲೆದು ಚಂಚಲ ಮನವಾಗಿಲ್ಲ ಸನ್ನದ್ಧ ||

ನೋಡೀ ಬೇಡಿಯು ಮತ್ತದೆ ಮಾಯಾಜಾಲ

ಬಿಡದೆ ಕಾಡುವ ಲೌಕಿಕ ಐಹಿಕ ಬರಿ ಗದ್ದಲಗಳು

ನಾ ಹುಡುಕಿಲ್ಲ ಪರಮಾರ್ಥ ಅಂತಿಮ ಸತ್ಯ

ಕೇವಲ ನಾನಾಗೆ ಕುಳಿತಿರುವೆ ಕವನವಾಗಿಸದಿರು ||

– ನಾಗೇಶ ಮೈಸೂರು

(Nagesha Mn)

(pictrue source internet / social media received via Muddu Dear – thanks madam 😍👌🙏👍😊)

01472. ದೂರವಿರು ಕನಸೆ, ವಾಸ್ತವದಿಂದ..


01472. ದೂರವಿರು ಕನಸೆ, ವಾಸ್ತವದಿಂದ..

_________________________________________

ಥೂ! ಹಾಳು ಸುಂದರ ಕನಸಿನಾ ಬದುಕೆ

ದೂರ ಸರಿ ತೆರೆಯಾಚೆ ವಾಸ್ತವದಲಿರಬೇಕಿದೆ

ನೀನೊಂದು ಚಿತ್ರಪಟ ತೆರೆದಿಡುವ ಸ್ವರ್ಗ

ಬರಿ ಕನಸಿನಾ ಲೋಕ ನನಸಲಿ ಸಿಕ್ಕದು ಅಗ್ಗ ||

ಬಣ್ಣಬಣ್ಣದ ವರ್ಣನೆ ಮಾಡುಮಹಡಿಮನೆ

ಮೋಡದ ನಡುವೆ ಅರಮನೆ ಜೋಡಿಸಿದಂತೆ

ಯಕ್ಷ ಕಿನ್ನರ ಗಂಧರ್ವಲೋಕದ ಸೊಗಡು

ಗಾಳಿಮೋಡದೆ ತೇಲುವ ನಾವೆ ಸೊಗವೀಡು ||

ಅಲ್ಲರಳಿದ ಘಮಗಮ ಇಲ್ಲಿಗು ಪಸರಿಸುತ

ಪ್ರಲೋಭನೆಯೊಡ್ಡುತ ಪ್ರಚೋದಿಸಿಹ ಭಾವನೆ

ಮನಸೋಲುತ ಬೆಕ್ಕಸ ಬೆರಗಾಗದಿರಲುಂಟೆ

ದಿಟಜಗದಾ ಕುಣಿಕೆ ಅರೆಗಳಿಗೆ ಜಾರುತ ತಂಟೆ ||

ನೋಡುಡಿಸಿಹೆ ನಿನ್ನ ದಿರುಸು ನಗ್ನ ವಾಸ್ತವಕೆ

ಬಚ್ಚಿಡಲೆಲ್ಲ ನೈಜ ಕಪಟ ಲೋಕದ ಅವತರಣಿಕೆ

ನಿನ್ನಂತೆ ಕಾಣುವ ಬಯಕೆ ಅಂತರಂಗದಲಿ

ಅದಕೆಂದೆ ಬಚ್ಚಿಟ್ಟಿದೆ ವಾಸ್ತವವ ಚಂದ ದಿರುಸಲ್ಲಿ ||

ನಡೆನಡೆ ದೂರಕೆ ಕನಸೆ ದೂರವಿರು ಕಾಣುತ

ದೂರದಿರು ದೂರುವುದಿಲ್ಲ ಚಿತ್ತ ನಡಿಗೆ ನಿನ್ನಾ ಸುತ್ತ

ಬೆರೆಸಬೇಕು ನಿಜಜೀವನ ರಸ ರಹಿತ ಸಾಹಿತ್ಯ

ರೋಚಕವಿರಿಸಲು ಬೇಕಲ್ಲ ನಿನ್ನ ರಸವತ್ತಾದ ಸಾಂಗತ್ಯ ||

– ನಾಗೇಶ ಮೈಸೂರು

(Nagesha Mn)

(Picture source internet / social media sent by Muddu Dear – thank you madam 😍👍🙏👌😊)