01475. ಸುಕ್ಕಿನ ಮುಖದ ಹಿಂದೆ


01475. ಸುಕ್ಕಿನ ಮುಖದ ಹಿಂದೆ

_____________________________

ಯಾಕೊ ಕಾಣಿಸುತಿದೆ ಬರಿ ಸುಕ್ಕು

ವರುಷಗಳಾದಂತಿದೆ ಆಕೆ ನಕ್ಕು…

ಗೆರೆಗೆರೆ ಭೈರಿಗೆ ಹಣೆ ಬರಹ ಸಾಲಾಗಿ

ಕಥೆ ಹೇಳಿದೆ ದಣಿಸಿದ ಬಾಳ ಶೋಷಣೆ ||

ಯಾರಲ್ಲ? ಯಾರೆಲ್ಲ? ಯಾರಾಕೆ ಈಗ

ಪ್ರಶ್ನೆಯದಲ್ಲ ಮೊತ್ತ ಯಾರಿಹರಾಕೇಗೀಗ ?

ನಡುಗುವ ಕೈ ತೊದಲಿಸಿ ತುಟಿಯದುರು

ಲೆಕ್ಕಿಸದೆ ನೀಡಿದ್ದೆಷ್ಟೆಂದು ನೆನೆನೆನೆದು ಕಣ್ಣೀರು ||

ನರೆತಿವೆ ಬಲಿತಿವೆ ಕೂದಲು ಬಿಳಿ ಸಮೃದ್ಧ

ಒತ್ತೊತ್ತಾಗಿದ್ದ ಪೊದೆಯಲು ಖಾಲಿ ಉದ್ದುದ್ದ

ಗಂಟಿನ ನಂಟ ಹಿಡಿದು ಹೊರಟಿಹ ಫಸಲು

ತಿಕ್ಕಿ ತೀಡಿ ಬಾಚಿ ಸಿಂಗರಿಸಲೆಲ್ಲಿ ಜನರಿಹರು ? ||

ಕೃಶಕಾಯ ಅಸಹಾಯ ಇನ್ನೆಲ್ಲಿ ಗತ್ತಿನ ಹೆಜ್ಜೆ ?

ಕೋಲ್ಹಿಡಿದು ನಡೆಯೆ ಬಿಗುಮಾನ ತಹ ಲಜ್ಜೆ

ಬಿದ್ದೇ ಬಿಡುವ ಭೀತಿ ಗೋಡೆಗಾತು ನಡೆವ ರೀತಿ

ಕೂತಲ್ಲೆ ಕೂರಲೆಷ್ಟು ಹೊತ್ತು, ದೈನಂದಿನ ಸಂಗತಿ ||

ನಗುತ್ತಾಳೆ ಸುಮ್ಮನೆ ಒಳಗತ್ತರು ಹೊರಗೆ ಅತ್ತರು

ಬರಿ ಚಂದದ ಮಾತಾಡುತ ಸಂತೈಸುವ ಕರುಳು

ಎಲ್ಲೊ ಹೇಗೊ ಬದುಕಿಕೊ ಸುಖವಾಗಿ ಎನ್ನುವ ಸದ್ದು

ಮರೆಮಾಚಿದ ಬಿಕ್ಕಳಿಕೆ ನಿಟ್ಟುಸಿರು ಕಣ್ಣಲ್ಲಿ ಏದುಸಿರು ||

– ನಾಗೇಶ ಮೈಸೂರು

(Nagesha Mn)

(Picture source internet / social media – sent Yamunab Bsy – thank you 😍🙏👍😊)

01474. ಮಾನಿನಿ, ಮದಿರೆ, ಕವನ, ಗಾಯನ..


01474. ಮಾನಿನಿ, ಮದಿರೆ, ಕವನ, ಗಾಯನ..

_________________________________________

ಮಾನಿನಿ ಮದಿರೆ ಮಧುರ

ಕಾವ್ಯದ ಜತೆ ಗಾಯನ ಕುದುರೆ

ನವಿರೇಳುತ ಮತ್ತಲಿ ತೂಗಾಟ

ಮತ್ತವಳದೊ? ಮದಿರೆಯದೊ ? ||

ನುಡಿಸುತ ವಾದನ ಮದನಾರಿ

ಇಣುಕು ನೋಟದೆ ಕೆಣಕುವ ಸ್ವರ

ಮತ್ತಿನ ಕಣ್ಣವಳ ಸಖ್ಯ ಮತ್ತೇರಿಸಿದೆ

ತೇಲುವ ಕಣ್ಣಾಲಿ ತಡಕಾಡಿಸಿ ಪದವ ||

ಬಿಡು ಚಿಂತೆ ಖಾಲಿಯಾಗದು ಮದಿರೆ

ನೋಡಲ್ಲಿ ಸುರೆ ಕರೆವ ಗೋವಳ ಚಂದ್ರ

ತುಂಬಿಸಿ ಹರಿಸಿಹನಲ್ಲ ಅಮೃತ ಧಾರೆ !

ನೀರೆ ನೀರಾ ಮೊಗೆಯಲಿಲ್ಲವೆ ಅವಸರ ! ||

ನನಗಾತಂಕ ಮದಿರೆಯದಲ್ಲ ಚದುರೆ

ಕರಗಿ ಹೋಗೊ ಯೌವನ ಹಿಡಿವವರಾರೆ?

ತನುವಾಗಲಿ ಮದಿರೆ ತೊಟ್ಟಿಕ್ಕಲಿ ವಿಸ್ಮೃತಿ

ಹೀರುವ ಭಾವಗಳಾಗಲಿ ಮಧುರಾನುಭೂತಿ ||

ಹಾಡಿರುವುದು ನಾನೊ, ನೀನೊ ಇಲ್ಲಾ ಪರಿವೆ

ಯಾರಿಗೆ ಬೇಕು? ಮನ ಉಲ್ಲಾಸ ಲೋಕದಲಿರೆ

ಮೈ ಮರೆಯಲಿ ಮದಿರೆಯ ಕುಡಿಸು ನಿಸರ್ಗಕು

ತೂಗೊ ತೊಟ್ಟಿಲಲಿ ತೂಗಾಡಲೆಮ್ಮ ಹಸುಗೂಸು ||

– ನಾಗೇಶಮೈಸೂರು

(Nagesha Mn)

(ಈ ಅದ್ಭುತ ಚಿತ್ರ, ಮತ್ತಷ್ಟೇ ಮತ್ತೇರಿಸುವ ಕವನ ಗುಚ್ಚದ ಜೊತೆ ಕವಿ ರಾಜ್ ಆಚಾರ್ಯ ಅವರ ಪೋಸ್ಟಿನಲ್ಲಿ ರಾರಾಜಿಸುತ್ತಿತ್ತು . ಚಿತ್ರದ ಪ್ರಚೋದನೆ ಮತ್ತು ಪ್ರಲೋಭನೆಗೆ ಸೋತು ನಾನೂ ಒಂದಷ್ಟು ಸಾಲು ಗೀಚಿದ್ದರ ಫಲ ಈ ಕವಿತೆ. ಧನ್ಯವಾದಗಳು ರಾಜ್ ಆಚಾರ್ಯ ಸಾರ್!😍👌👍🙏😊)