01479. ಕನಸಿನ ಲೋಕ..


01479. ಕನಸಿನ ಲೋಕ..

________________________________

ಕಾಣಬಾರದ ಚಂದ ಕನಸೊಂದ ನಾ ಕಂಡೆ

ಹೇಳಬಾರದ ಕೆಂಡದನುಭವವ ನಾನುಂಡೆ

ಮಾತಾಡಲೊಲ್ಲೆ ಮೌನದಲಿರಲೊಲ್ಲೆ ಕೇಳು

ಆ ಕಸಿವಿಸಿ ಭ್ರಾಂತಿ ಮುಚ್ಚಿಡಲೆಂತು ಹೇಳು? ||

ನಾನಿರುವೆ ನೋಡಿಲ್ಲಿ ಎಷ್ಟೊಂದು ಹಗುರ !

ನನ್ನಾಣೆ ಅರಿವಿರಲಿಲ್ಲ ಯೌವನದ ಕಡು ಭಾರ

ಹೊಸತಾದ ಪ್ರಾಯಕೆ ತತ್ತರಿಸುತಿದೆ ಕನ್ಯಾಸೆರೆ

ತಡೆಯಲೆಂತೊ ಅದರ ಮೇಲಿರಿಸೆ ಕನಸ ಹೊರೆ ? ||

ತಟ್ಟನುದಿಸಿತಲ್ಲೊ ಸುತ್ತ ನನ್ನದೇ ಪ್ರಪಂಚ

ಮರೆಸುತೆಲ್ಲ ವಾಸ್ತವ ಲಟ್ಟಿಸಿ ಕಲ್ಪನೆ ಮಂಚ

ನನ್ನ ಜಗ ಜಗಮಗ ಕುಣಿಸಿರೆ ನನ್ನಾಗಿಸುತ ರಾಣಿ

ಇಹದ ಪರಿವೆ ಮರೆಸಿ ವಯಸ ಧೂಪ ಸಾಂಭ್ರಾಣಿ ||

ಹೊಳೆಹೊಳೆವ ಬಂಗಾರದ ಬೆಳಕ ಪ್ರಭೆ ಜ್ವಾಲೆ

ಎದ್ದು ಕಾಣುವ ಹಂಬಲ ನಾ ಕತ್ತಲಿನ ಕರಿ ಶಿಲೆ

ಫಳಫಳ ಮುತ್ತು ರತ್ನ ಪಚ್ಚೆ ಹವಳ ವಜ್ರ ವೈಡೂರ್ಯ

ಗಾಜಿನ ಗೋಳದ ಮೇಳ ನಶೆ ಕೈಗೆಟುಕದ ಐಶ್ವರ್ಯ ||

ಹೇಗೊ ಕುಣಿಸಿದೆ ಕನಸು ನನಸಂತೆ ದಿರುಸುಟ್ಟು

ನಿಜವೊ ಭ್ರಮೆಯೊ ಗದ್ದಲ ಅರಿಯಬಿಡದೆ ಗುಟ್ಟು

ತಾಳಮೇಳವಿರಲಿ ಬಿಡಲಿ ಕುಣಿಸುವ ಮನ್ಮಥನಾಟ

ಕನಸನ್ಹೊಡೆದು ನನಸಲ್ಹಡೆವ ಬದುಕೇನೀ ಹುಡುಗಾಟ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01478. ನಾನು ಜಿಗಿವೆ, ನೀನು ಜಿಗಿಯೆ!


01478. ನಾನು ಜಿಗಿವೆ, ನೀನು ಜಿಗಿಯೆ!

_____________________________________

ನೋಡು ನಮ್ಮ ನಡುವೆ ಎಷ್ಟು

ಅಂತರ ಪ್ರಿಯೆ, ಅಭ್ಯಂತರ!?

ಮಧ್ಯೆ ಕಂದಕ ಕೈಗೆಟುಕದ ಕಾಯ

ಕತ್ತಲಲಿಡೆ ಹವಣಿಸುತಿಹ ಸೂರ್ಯ ||

ಬರದು ಜಿಗಿತ, ಬರದಲ್ಲ ನೆಗೆತ

ಬರಲೆಂತೊ ಹಾರಿ ನಿನ್ನ ಹತ್ತಿರ ?

ಹತ್ತಿರ ಗಗನದಲಿದ್ದು ಆಕಾಶಬುಟ್ಟಿ

ನೋಡಲಷ್ಟೆ ಕೈಗೆ ಸಿಗದಲ್ಲ ಆಧಾರ ||

ನಡುವಲಿ ಆಳ ಕಿರುಗಾಲುವೆ ನೀರು

ಬರಲೆಂತೆ ಸೇರೆ, ಈಜು ಬರದಲ್ಲ ?

ಗುಡ್ಡ ಹತ್ತಿಳಿದೆ ಮುಳುಗೆ ಗತಿಯೇನು?

ಎದುರಲ್ಲೆ ನೀನು, ಸೇರಲೆಷ್ಟು ಕಾನೂನು! ||

ತುಸು ಬೆಳಕಿದೆ ರವಿ ಕರಗೊ ಮುನ್ನ

ಮಾಡಬಾರದೆ ಏನಾದರು ಪ್ರಿಯತಮ ?

ಕತ್ತಲ ರಾಜ್ಯ ಕಂಗೆಡಿಸೊ ಸಾಮ್ರಾಜ್ಯ

ಹೇಗಾದರು ಹುಡುಕೊ ದಾರಿ ಸೇರಿಸೆ ನಮ್ಮ ! ||

ನಾನು ಜಿಗಿವೆ, ನೀನು ಜಿಗಿಯೆ

ಸಿಕ್ಕರೆ ಸಿಗಲಿ ಕೈಗೆ ಪುಷ್ಪಕ ವಿಮಾನ

ಬಿದ್ದರು ನೀರಿಗೆ ಒಟ್ಟಾಗಿ ತೇಲೋಣ

ಮುಳುಗೊ ಮುನ್ನ ದೇಕುತ ಸಿಕ್ಕಿದ ತೀರ ||

– ನಾಗೇಶ ಮೈಸೂರು

(Nagesha Mn)

(Picture source : Internet / social media, sent by Muddu Dear – thanks madam 😍👌🙏👍😊)