01482. ಕದ್ದನಲ್ಲ ಕಳ್ಳ..


01482. ಕದ್ದನಲ್ಲ ಕಳ್ಳ..

________________________

ಗಂಗೆ ಗೌರಿ ಕೃಷ್ಣೆ ಕಾವೇರಿ

ಬನ್ನಿರೆಲ್ಲ ಗುಟ್ಟ ಹೇಳುವ ಬಾರಿ

ಗೊತ್ತೇನವನು ಚಿತ್ತಾಪಹಾರಿ ?

ಕದ್ದ ಮನಸ ಹುಡುಕೆ ಪತ್ತೇದಾರಿ ||

ಕಳ್ಳನವನು ಮಳ್ಳನವನು

ಹೇಳಕೇಳದೆ ಧಾಳಿಯಿಟ್ಟವನು

ಬೆಳ್ಳನೆ ಹಾಲ ಹುಡುಗಿ ಚಿತ್ತ

ಕಣ್ಬಿಡುವುದರಲಿ ಕಳುವಾಗಿತ್ತ ! ||

ಕದ್ದೆನೆಂದು ಒಪ್ಪಿಕೊಳ್ಳನು

ಕದ್ದ ಮಾಲನೆಲ್ಲೊ ಬಚ್ಚಿಟ್ಟವನು

ಒಬ್ಬಂಟಿ ನಾ ಅಮಾಯಕಿ

ವಾಸನೆ ಹಿಡಿದು ಬನ್ನಿರೆ ಹುಡುಕಿ ||

ಶುದ್ಧ ಚಿತ್ತ ಕೆಡಿಸಿಬಿಡುವ

ಚಂಚಲವಾಗಿಸಿ ವರಿಸಿಬಿಡುವ

ನಾನಾದರೆ ಅವನ ಖೈದಿ

ಕಾಯುವರಾರೆ ನಿಮ್ಮ ಸನ್ನಿಧಿ? ||

ನನದಲ್ಲ ಪ್ರಶ್ನೆ ನಿಮ್ಮದಿದೆ

ನಾ ಬೇಕೆಂದರೆ ಹುಡುಕಬೇಕಿದೆ

ಹುಡುಕಿಕೊಟ್ಟರೆ ಜತೆಗುಳಿವೆ

ಸಿಗದಿದ್ದರೆ ನಿಮ್ಮಾ ಜತೆಗೊಯ್ಯುವೆ ||

– ನಾಗೇಶ ಮೈಸೂರು

(Nagesha Mn)

(Picture: ಹೊಳೆನರಸೀಪುರ ಮಂಜುನಾಥರ ವಾರಾಂತ್ಯದ ವಿಶೇಷ ಕವನ ಮಾಲಿಕೆಗೆ ಬರೆದ ಕವನ – ೧೬.೧೨.೨೦೧೭)

01481. ಮುಳ್ಳೊತ್ತಿದೆ


01481. ಮುಳ್ಳೊತ್ತಿದೆ

___________________

ಹುಸಿ ಮುಳ್ಳೊತ್ತಿದೆ ಪಾದಕೆ

ತುಸು ಕಾಲೆತ್ತಿದೆ ನೆಪಕೆ

ಭುಜವಿತ್ತ ಸಖಿಯಾಸರೆ

ಕಟ್ಟಲವಳ ಓಡಬಿಡದೆ ! ||

ತಿರುಗಿ ನೋಡುವ ಹಂಬಲ

ತಿರುತಿರುಗಿ ಅವನತ್ತ ಜಾಲ

ನೋಟಕೆ ಸಿಗದವನ ತಡುಕಿ

ಚಹರೆ ಕಟ್ಟಿಕೊಳ್ಳೇ ಹವಣಿಕೆ ||

ನಕ್ಕರೆ ನಗಲೇಳು ಸಖಿಗಳು

ಗೊತ್ತಾಗಲಿ ಹುನ್ನಾರ ತಾಳು

ಬಾಯಾಡುವ ನೆಪ ಸಟೆ ನಿಜ

ಅರಿತು ಛೇಡಿಸೊ ಅವರಾಟ ||

ಕಾನನದ ಹಾದಿ ದುರ್ಗಮ

ದಿಕ್ಕು ತಪ್ಪದ ನಡಿಗೆ ಸುಗಮ

ಯಾಕೊ ಚಿತ್ತಕವನೇಕೊ ಮರೆವು

ಎಷ್ಟು ನೋಡಲಿ ಮರೆವ ಮೊಗ ||

ಯೌವನ ಕೋಟೆ ಬೆಚ್ಚಗಿನ ತಾಣ

ಸುತ್ತುವರೆದವರದೆ ಧೈರ್ಯ ಘನ

ಕಾಲಧರ್ಮದಲಿದೆ ಎಲ್ಲಾ ಚಳಕ

ಸಂಯಮ ಸಂಹಿತೆ ಹಿನ್ನಲೆಗೌಣ ||

– ನಾಗೇಶ ಮೈಸೂರು

(Nagesha Mn)

(Picture source : Internet / social media – not sure – Raaja Ravi Varma painting?)

01480. ಕಿನ್ನರಿ ಕನ್ನಿಕೆ (ಮಕ್ಕಳಿಗೆ)


01480. ಕಿನ್ನರಿ ಕನ್ನಿಕೆ (ಮಕ್ಕಳಿಗೆ)

____________________

ಕಿನ್ನರಿ ನಾ ಕಿನ್ನರಿ

ಕಿನ್ನರ ಲೋಕದ ಪುತ್ಥಳಿ

ಹಾರುತ ಬರುತಿರುವೆ

ಗಂಧರ್ವ ಲೋಕವ ದಾಟಿ ||

ರೂಪದಿ ನಾ ಅಪ್ಸರೆ

ಕುಂದಿರದ ತೊಗಲ ಬಣ್ಣ

ಗುಲಾಬಿ ನವಿನವಿರು

ಹೊಳೆವ ಕಾಂತಿ ಅಪರಂಜಿ ||

ನನ್ನ ನಡಿಗೆ ಮೃದುಲ

ಗಾಳಿಯಲಿ ತೇಲುವ ಪರಿ

ನೀರಾ ಮೇಲಿನ ಹೆಜ್ಜೆ

ಮುಳುಗದ ಪಾದದ ಜಾಲ! ||

ಗಾಳಿಗು ಹಗುರ ವಸ್ತ್ರ

ಪಾರದರ್ಶಕ ಅಪಾರ ಹೊಳಪು

ಮಿರಮಿರನೆ ಮಿನುಗಾಟ

ತಾರೆಯ ಬೆಳಕ ನೂಲಲಿ ನೇಯ್ಗೆ ||

ಬಣ್ಣಿಸಲಾಗದ ಲೋಕ

ನಿಸರ್ಗ ತೊಟ್ಟ ರೂಪ ಅಪರೂಪ

ಸೌಂದರ್ಯ ಸಂಪದವೆಲ್ಲ

ಅನುಭೂತಿಯಾಚೆಯ ಸಿರಿ ಸೊಗಡು ||

– ನಾಗೇಶ ಮೈಸೂರು

(Nagesha Mn)

(Picture source from Internet / social media received via Yamunab Bsy – thank you 😍🙏👍😊👌)