01483. ಯಾಕೆ ಹೀಗೆ ಕಾಡುವೆ?


01483. ಯಾಕೆ ಹೀಗೆ ಕಾಡುವೆ?

______________________________

ಕೆಲವೊಮ್ಮೆ ಹಳಸಿದ ಸಂಬಂಧಗಳು ಎಷ್ಟು ದೂರ ಮತ್ತು ಆಳಕ್ಕೆ ಹೋಗಿಬಿಟ್ಟಿರುತ್ತವೆಯೆಂದರೆ ಅದನ್ನು ಮತ್ತೆ ದುರಸ್ತಿ ಮಾಡಲಾಗದಷ್ಟು. ಆದರೂ ಬದುಕಿನ ಅನಿವಾರ್ಯತೆಯಿಂದಲೊ, ಸಾಮಾಜಿಕ ಒತ್ತಡದ ಅಸಹಾಯಕತೆಯಿಂದಲೊ ಬೇರಾಗದೆ ಒಟ್ಟಿಗೆ ಇದ್ದು ನೆಮದಿಯಿಲ್ಲದ ಹಿಂಸೆ ಅನುಭವಿಸಿತ್ತ ಬಾಳು ಸಾಗಿಸುವವರುಂಟು. ಆ ಹೊತ್ತಿನಲ್ಲಿ ಅನಿಸುವ ಅನಿಸಿಕೆಯ ಒಂದು ಲಹರಿ ಇದು..

ಯಾಕೆ ಹೀಗೆ ಕಾಡುವೆ?

_________________________

ಯಾಕೆ ಹೀಗೆ ಕಾಡುವೆ ನನ್ನ

ದೂರವಾಗಿ ಹೋಗದೆ ?

ಶ್ರುತಿಯಿಲ್ಲದ ಹಾಡ ಜತೆಗೆ

ಇನ್ನೆಷ್ಟು ದಿನ ಏಗುವೆ ? ||

ಕೊಳವೆ ಬಿದಿರೆಲ್ಲ ಕೊಳಲಾಗದು

ಎಷ್ಟು ನುಡಿಸಿದರೇನು ?

ನುಡಿಸ ಬರದಾಗ ಕೊಳಲಿದ್ದೇನು

ಊದೆವಲ್ಲ ನಾನು ನೀನು ? ||

ಅಂದಿತ್ತು ನಿಜವೆ ಹಿಗ್ಗು ಸುಗ್ಗಿ

ಹುಮ್ಮಸ್ಸು ಮರೆಸಿತ್ತೆಲ್ಲ ಅಂಕುಶ

ಹೊಂದಿಕೊಳ್ಳದ ಕ್ಷುಲ್ಲಕಗಳೆ

ಇಂದಾಳುತಿವೆ ನಮ್ಮ ನಿರಂಕುಶ ||

ಎಷ್ಟು ಕಾಲ, ಇನ್ನೆಷ್ಟು ಯುಗ

ನಡೆಸಬೇಕೆ ಈ ನಾಟಕ ?

ಇರುವುದೊಂದೆ ಬದುಕಷ್ಟನು

ಅಡವಿಟ್ಟು ನುಂಗುತ್ತ ದುಃಖ ? ||

ದೂರು ಸಲ್ಲ ದೂರಾಗದಲ್ಲ

ನಾವಾಗಲಿಲ್ಲ ಪ್ರಶ್ನೆಗೆ ಉತ್ತರ

ಬಿಟ್ಟು ಪ್ರಶ್ನೋತ್ತರ ಆಗೋಣ ದೂರ

ಆದೀತಾಗ ಬದುಕಿಬ್ಬರದು ಹಗುರ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ