01484. ಗುಂಡಿಗೆಯವರಾರಿಲ್ಲಿ?


01484. ಗುಂಡಿಗೆಯವರಾರಿಲ್ಲಿ?

________________________________

ಶಾಕಿನಿ ಡಾಕಿನಿ ಮೋಹಿನಿ

ವಿಷಾಚಿ ಪಿಶಾಚಿ ಪ್ರೇತಾತ್ಮ

ಶಾಪ ವಿಮೋಚನೆ ಸಲುವೆ

ಮಂತ್ರದ ಸೇಬ ಹಿಡಿದಿರುವೆ ||

ಹಣ್ಣೇನೊ ಕೈ ಸೇರಿದೆ ಸ್ವಸ್ಥ

ನಡೆ ವಿಧಿವಿಧಾನ ಅಸ್ತವ್ಯಸ್ತ

ಅರಿವಿಲ್ಲ ಮಂತ್ರಬೀಜಾಕ್ಷರ

ಬರಬೇಕಂತಲ್ಲ ರಾಜಕುಮಾರ ! ||

ನಾ ಹೇಳಬಾರದಂತೆ ಗುಟ್ಟು

ನನ್ನ ಪೂರ್ವಾಶ್ರಮದ ಒಗಟು

ನುಡಿದರೆ ನಿಜವ ರಾಜಕುಮಾರಿ

ಮತ್ತಿಲ್ಲವಂತೆ ವಿಮೋಚನೆ ದಾರಿ ||

ಕಾದು ಕುಳಿತಿಹೆನದಕೆ ಹಿಡಿದು

ಬರಲೊಬ್ಬ ರಾಜಕುಮಾರನೆಂದು

ಕಚ್ಚಿ ತಿನ್ನಬೇಕು ಹಣ್ಣ ಹಸಿದವರಂತೆ

ಹೆದರದೆ ಅಪ್ಪೆ ಈ ಶಾಪ ಕಳೆವುದಂತೆ ||

ನೀನಾ? ನೀನಾ? ಅವನಾ?

ಯಾರಾಗುವಿರಿ ಸಾಹಸಿ ಶೂರ ಘನ!

ದಕ್ಕುವ ಫಲ ಸಿಕ್ಕುವ ಸಂಪದ ಅಪಾರ

ಗುಂಡಿಗೆಯವರು ಬಂದೆನ್ನಾ ಅಪ್ಪುವಿರಾ? ||

– ನಾಗೇಶ ಮೈಸೂರು

೧೭.೧೨.೨೦೧೭

(Picture : muddu?)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ