01488. ಕೊಡು ನಿನ್ನೆ , ಕೊಡು ನಾಳೆ !


01488. ಕೊಡು ನಿನ್ನೆ , ಕೊಡು ನಾಳೆ !

____________________________________

ಅವಳಾರೊ ಅಲ್ಲೊಬ್ಬಳು

ಕೇಳಿದ್ದೆಲ್ಲ ಕೊಡುವ ಕಾಮಧೇನು

ಬೇಕೇನು ಕೇಳು ಕೇಳೆಂದಳು

ಕೇಳಲೇನ? ಕಂಗಾಲು ನಾನು.. ||

ಕೇಳಲೇನೇನೊ ಒಳಗ್ಹವಣಿಕೆ

ಏನೆಂದು ಅರಿವಾಗದ ಗೊಂದಲ

ಕೇಳಲಿದ್ದರೇನು ಸಾವಿರ ತರ

ಭೀತಿಯ ಗೆದ್ದವರಾರು ಪ್ರಾಂಜಲ ||

ನಂದಿನಿ ತೀರಿಸಬಲ್ಲಳು ಕಾಮನೆ

ಯಾವುದಸಾಧ್ಯ ಅವಳು ಮನಸು ಮಾಡೆ

ಜಮದಗ್ನಿಯ ಕಾದವಳವಳೆ ತಾನೆ ?

ಕೋರಿದ್ದನು ಕೊಡುವಳು ಕೋರಿಕೆ ನೀಡೆ ||

ಕೋರಲೇನು ತೋಚದಲ್ಲ ಭೌತಿಕ

ಬಯಸುವುದೆಲ್ಲ ಮನ ಭಾವುಕ ಸೆಳೆತ

ಬಯಕೆಯಾಗೆ ಕಾರ್ತ್ಯವೀರಾರ್ಜುನ

ಬಲಿ ಹಾಕದಿರುವುದೆ ಗುಟುರಿನ ಸೈನ್ಯ ? ||

ಬಯಕೆಯೆ ಹಾಗೆ ಬಯಸೆಲ್ಲ ಮೊತ್ತ

ಬೇಕೆನ್ನುತ ಆವರಿಸುವ ಚಿತ್ತ ಪ್ರಲೋಭನೆ

ಬೇಕೆಲ್ಲ ನಿನದೆಲ್ಲ ನನಗೆನ್ನುವ ಸ್ವಾರ್ಥ

ಹೋರಾಟದಿ ಮನ ಕಳುವಾಗದಿರಲಿ ಸಖ್ಯ ||

– ನಾಗೇಶ ಮೈಸೂರು

(Nagesha Mn)

(Photo / Picture Source : Internet / social media received via FB friends Madhu Smitha,Yamunab BsyMuddu Dear – thank you all ! 😍🙏👍😊👌)

01487. ಮಾರ್ಜಾಲ ಮನ


01487. ಮಾರ್ಜಾಲ ಮನ

_________________________

ಬೆಕ್ಕೆ ಬೆಕ್ಕೆ ಬೆಕ್ಕೆ

ಮಳ್ಳ ಮಳ್ಳ ನಗೆ ನಕ್ಕೆ

ಮನಸೆಂಬ ಕಳ್ಳ ಬೆಕ್ಕೆ

ಈ ಕಳ್ಳಾಟ ನಿನಗೇತಕ್ಕೆ ? || ಬೆಕ್ಕೆ ||

ಮೆಳ್ಳಗಣ್ಣ ನೋಟ ಸಿಕ್ಕೆ

ಸಾಧು ಸನ್ಯಾಸಿ ತರ ತೆಕ್ಕೆ

ಕ್ರೂರತೆ ದಿಟ್ಟಿಸೊ ಚೆಲುವು

ನಿನ್ನಾಟ ಮಾತ್ರ ಹಾಲಹಾಲವು! || ಬೆಕ್ಕೆ ||

ತಪದಲ್ಲಿ ಕೂತ ಜೋಗಿ

ಕಣ್ಮುಚ್ಚಿ ಮುದ್ರೆ ಹಠಯೋಗಿ

ಮಾರ್ಜಾಲ ಮನಸೆ ನೀ ಠಕ್ಕಗುರು

ಬಿಡು ನಿನ್ನಾಟದೆ ನಿನ್ನ ಗೆಲ್ಲುವರಾರು || ಬೆಕ್ಕೆ ||

ಕಣ್ಮುಚ್ಚಿ ಕುಡಿದೆ ಹಾಲು

ಇನಿತಾಗಲಿಲ್ಲವೆ ಕಂಗಾಲು

ನೋಡಲಿ ಬಿಡು ನೋಡೊ ಜಗ

ನೀ ಕುಡಿದು ಖಾಲಿ ಮಾಡುತ ಜಾಗ || ಬೆಕ್ಕೆ ||

ಅಂಥ ಬೆಕ್ಕೊಂದು ಮನದೆ

ಕೂತಾಗಿದೆ ಜನುಮಜನುಮದೆ

ಕುಣಿದಾಡಲೇನು ಕುಣಿತ ನೂರಾಟ

ಕುಣಿಕೆಯವನದೆ ಕೊನೆ ಗಂಟ ಹಾಕುತ || ಬೆಕ್ಕೆ ||

– ನಾಗೇಶ ಮೈಸೂರು

(Nagesha Mn)

(Photos: received via friend)