01492. ಕನ್ನಡ ನಾಡು


01492. ಕನ್ನಡ ನಾಡು

___________________________

ಕನ್ನಡ ನಾಡಿಗೆ ಕನ್ನಡವೆ ಗಾರುಡಿ

ಧಮನಿ ಧಮನಿ ಹರಿದಾಡುವ ಹೊನ್ನುಡಿ

ನೆತ್ತರ ಕಣಕಣ ಬರೆದ ಮುನ್ನುಡಿ

ನರ ನಾಡಿಗಳಲಿ ಅನುರಣಿತ ಜೇನ ನುಡಿ || ಕನ್ನಡ ||

ಭುವನೇಶ್ವರಿ ತಾನಾಡುವ ಭಾಷೆ

ಕವಿಕಾವ್ಯ ಲಹರಿಯಲಿ ಮೆರೆದು ಪರಿಷೆ

ಆಡು ಮಾತೇನು ಬೌದ್ಧಿಕತೆ ಶುದ್ಧ

ಮಿಕ್ಕಿ ಮೂರು ಸಾವಿರ ವರ್ಷ ಪಕ್ವ ಪ್ರಬುದ್ಧ || ಕನ್ನಡ ||

ನಾಡೋಜರಾಳಿದ ಸಾಹಿತ್ಯಲೋಕ

ಪೀಳಿಗೆಯಿಂದ ಪೀಳಿಗೆಗೆ ದಾಟಿಸಿ ಬೆಳಕ

ನಿಂತ ನೀರಲ್ಲ ನಿರಂತರ ಹರಿವು

ಹಳೆ ನಡು ಹೊಸತಲಿ ಕನ್ನಡತನ ಗೆಲುವು || ಕನ್ನಡ ||

ಲಿಪಿಗಳಾ ರಾಣಿ ಮುತ್ತ ಜೋಡಿಸಿತೆ

ದುಂಡುಮಲ್ಲೆ ದಂಡೆ ಸಾಲಾಗಿ ರಾರಾಜಿಸಿತೆ

ಪೋಣಿಸಿ ಕನ್ನಡಿಗರ ಹೃದಯ ಭವ್ಯ

ಕನ್ನಡನಾಡಾಯ್ತೆ ಕನ್ನಡಿಗರೆದೆ ಬರೆದಾ ಕಾವ್ಯ || ಕನ್ನಡ ||

ನಾಡಭಾಷೆ ನಾಡು ಕಟ್ಟಿದ ಚಂದ

ಬೇಧ ಭಾವ ಮರೆಸಿ ಒಗ್ಗೂಡಿಸಿದ ಆನಂದ

ಕರುನಾಡ ಸೀಮೆ ಬೆಸೆದಾಯ್ತು ಏಕ

ಕನ್ನಡಮ್ಮನ ತೇರು ಎಳೆದಾಯ್ತು ಕರ್ನಾಟಕ || ಕನ್ನಡ ||

– ನಾಗೇಶ ಮೈಸೂರು

೨೦.೧೨.೨೦೧೭

01491. ಸೃಷ್ಟಿ ಗಡಿಯಾರದ ಕೀಲಿ


01491. ಸೃಷ್ಟಿ ಗಡಿಯಾರದ ಕೀಲಿ

_________________________________

ಅದ್ಭುತದೊಳಗೊಂದದ್ಭುತ

ಪ್ರಕೃತಿಯೊಳಗೊಂದಾಕೃತಿ

ಕೃತಕವಲ್ಲ ನೈಸರ್ಗಿಕ ರೀತಿ

ಜೈವಿಕ ಗಡಿಯಾರದ ಗಣಕ ||

ಅಣಕವಲ್ಲ ಸುಂದರ ಗಣಿತ

ವಾರ ಮಾಸ ನಿಖರತೆ ಲೆಕ್ಕ

ತಪ್ಪಿಲ್ಲದ ಕಾಗುಣಿತ ಗಣನೆ

ಕಂದ ಅಮ್ಮನ ಅನುಕರಣೆ ||

ನಂಟಿನ ಸಂಕೋಲೆ ಗಟ್ಟಿ

ಜಟ್ಟಿ ಕತ್ತಲಲು ಚಾಲಾಕಿ

ಲೆಕ್ಕವಿಡೊ ಕಿಲಾಡಿ ಕೂಸು

ಅನುಕರಿಸಿ ಅಮ್ಮನ ಗೀಟು ||

ಯಾರಿಗಿಲ್ಲಿ ಯಾರು ಗುರು ?

ಯಾರೊಳಗೆ ಯಾರಿರುವರು ?

ಯಾರ ಪ್ರಪಂಚ ಯಾರೆನ್ನೋಣ ?

ಯಾರ ಕುಂಚ ಇವರೆಂದರೆ ಚನ್ನ ? ||

ಬಿಟ್ಟುಬಿಡುವ ಅವರ ಪಾಲಿಗೆ

ಸೃಷ್ಟಿ ಜಗದ ನಿಗೂಢತೆಯಡಿ

ಆಡಿಕೊಳ್ಳಲಿ ಅವರಿಚ್ಛೆಯಾಟ

ಬೇಸತ್ತಾಗ ಬಿಚ್ಚಿಕೊಳ್ಳಲಿ ಜಗಕೆ ||

– ನಾಗೇಶ ಮೈಸೂರು

೧೯.೧೨.೨೦೧೭

(Picture source : Internet / social media received via Mohan Kumar D M – thank you sir 😍👌🙏👍😊)

01490. ಎಟುಕದೇಕೆ ಅವನ ಚಿತ್ರ?


01490. ಎಟುಕದೇಕೆ ಅವನ ಚಿತ್ರ?

________________________________

ಯಾಕೊ ಮತ್ತೆ ಮತ್ತೆ ಮರೆತು

ಹೋಗುತಿರುವುದವನ ಮುಖ

ನೆನೆದು ನೆನಪಲಿಟ್ಟರು ಚಹರೆ

ಯಾಕೊ ಕಾಣೆ ಮಸುಕು ಕಣೆ ||

ನೋಡಿದ್ದೆ ಗೊತ್ತಾ ಕದ್ದು ಕದ್ದೂ

ಮೂಗು ಕಣ್ಣು ಬಾಯಿ ಕಿವಿ ಗಲ್ಲ

ಒಂದಾದರು ಎಟುಕಿಗೆ ನಿಲುಕೆ

ಮೊಗದ ಚಿತ್ರ ಬರೆದೀತು ಮನ ||

ಏನೋ ಅಸ್ಪಷ್ಟ ಆಕಾರ ರೂಪ

ಆಜಾನುಬಾಹು ಸಾಕಾರ ಘನ

ಭುಜದ ಮೇಲಿಟ್ಟ ಶಿರವೇ ಗೌಣ

ಕಲಸುತೆಲ್ಲ ಮರೆಮಾಚಿ ಅವನನು ||

ಮೆಚ್ಚಿ ನೆಚ್ಚಿ ಹತ್ತಿರವಾದ ಸಖನೆ

ಅದೆಷ್ಟೊ ಬಾರಿ ಮಾತಾಡಿ ಜೊತೆ

ಕಳೆದ ಕಾಲ ಪರಿಚಿತ ಅನವರತ

ಅಪರಿಚಿತನಂತೆ ಯಾಕೆ ಕಾಡುವ ? ||

ಬಯಸಿ ಪಡೆದ ಪ್ರೀತಿಯ ಪರಿಯೆ ?

ಸಾಲದೆನುವ ಅದಮ್ಯತೆ ಕುರುಹೆ ?

ಅಪರಿಮಿತತೆ ಅವನಾದನೆ ಅಮೇಯ?

ಮೇಯವಾಗದೆ ಮನ ಚಡಪಡಿಕೆ ಪ್ರಾಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via one of the FB friend some time before – sorry forgotten the name 😊🙏👌)

01489. ಮನಸಿದ್ದಂತೆ ಮಹದೇವ


01489. ಮನಸಿದ್ದಂತೆ ಮಹದೇವ

_________________________________

ಇದ್ದೇವಾ? ಇಲ್ಲವಾ?

ಯಾರಿಗೆ ಗೊತ್ತು..

ಇದ್ದರು ಇಲ್ಲದ ಹಾಗೆ

ಇಲ್ಲದೆ ಇದ್ದರು ಸೋಗೆ ||

ಅವನಿಗೆ ಮಾತ್ರ ಗೊತ್ತು

ಅಂದೊರು ಸಾವಿರ

ಅವನಾರು ಗೊತ್ತಾಗದು

ಹೊರಗಿಲ್ಲ ಒಳಗಿನ ಖುದ್ದು ||

ಎದುರಾದವರಲ್ಲಿ ರೂಪ

ಕಾಣುವ ತುಸುವೆ

ಕಂಡೀತಾದರೆ ಪೂರ್ತಿ

ಅವರಲ್ಲಿ ಒಲವಾಗಿ ಸ್ಪೂರ್ತಿ ||

ಇರುವೆ ಗೊತ್ತಾಗದಂತೆ

ಏಕಾಂಗಿ ಜಗದಲಿ..

ವೈರಾಗ್ಯವೆಲ್ಲ ಮಾಯ

ಅವನೆದುರಾದ ಸಮಯ ||

ಇದ್ದೇವೆನ್ನುವ ಸಮಯ

ಮಾಯಾಲೋಕ ಸುತ್ತ..

ಬಾಳಲ್ಲೇನೆಲ್ಲ ಆಡಿಸುವ

ಮನಸಿದ್ದಂತೆ ಮಹದೇವ..! ||

– ನಾಗೇಶ ಮೈಸೂರು

(Nagesha Mn)

(Picture source : Internet / social media via Sridhar Bandri posts – thank you 😍🙏👍😊👌)