01496. ಬಿಟ್ಟು ಬಿಡು ನಿನದಲ್ಲ..


01496. ಬಿಟ್ಟು ಬಿಡು ನಿನದಲ್ಲ..

____________________________

ಬಿಟ್ಟು ಬಿಡು, ಯಾವುದು ನಿನದಲ್ಲ

ಬಿಗಿ ಹಿಡಿದಿಡುವ, ಹಂಬಲ ಬೇಡ

ಹಂಬಲಿಸೆ, ಬೆಂಬಲಿಸದ ಬದುಕು

ಬೆಂಬಿಡದೆ ಕಾಡೆ, ದೂರ ಮನಸು ||

ಹಕ್ಕಿ ಹಾರೊ ಹೊತ್ತು ,ರೆಕ್ಕೆ ಬಲಿತು

ಕುತೂಹಲ ಅದಮ್ಯ, ಗತ್ತು ಹುರುಪು

ಅದರದರದೆ ಗುಟ್ಟು, ತನ್ನಿಚ್ಚೆ ಜುಟ್ಟು

ಹೆಜ್ಜೆಗಡ್ಡ ನಿಂತರು, ನಂಟ ಸಹಿಸದು ||

ಕಾಯುವಾತಂಕ ಕಟ್ಟೆ ರಕ್ಷಣೆ ಕೋಟೆ

ಸಿಟ್ಟು ಸೆಡವು ಅಸಹನೆ ಫಲಿತ ಮಂಕೆ

ಶತಸಿದ್ಧ ಒತ್ತಡವೆ ದೂಡುತ ಸೆಳೆಯದೆ

ಇಷ್ಟಿಷ್ಟೆ ದೂರಾಗಿಸಿ ನೋಡಲ್ಲಿ ಕಂದಕ ||

ಚಡಪಡಿಸುವುದು ಸ್ವಾತ್ಯಂತ್ರ ಕಟ್ಟಿಹಾಕೆ

ತಡವರಿಸುವುದು ಸ್ವೇಚ್ಛೆ ಕಟ್ಟದೇ ಬಿಚ್ಚಿಡೆ

ನಡುವಲೆಲ್ಲೊ ಮಧ್ಯೆ ಸುವರ್ಣ ಸೂತ್ರವೆ

ಕಟ್ಟಿಯೂ ಕಟ್ಟದ ಅದೃಶ್ಯ ಬಂಧ ಸೊಗಸು ||

ನಂಟಾವುದಾದರೇನು ಹೆತ್ತವರು ಮಕ್ಕಳು

ಕಟ್ಟಿಕೊಂಡವರು ಒಲವನೊಪ್ಪಿ ಅಪ್ಪಿದವರು

ಕೆಳೆ ಸಾಂಗತ್ಯ ಸಹೋದ್ಯೋಗಿ ಪರಿಚಿತ ಸಖ್ಯ

ನೆನಪಿರಲೆಲ್ಲೆಡೆ ಮರುಳೆ ಸಡಿಲ ಬಿಡು ತುಸು ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Facebook friends)

01495. ತುರಿಯುವ ಮಣೆ !


01495. ತುರಿಯುವ ಮಣೆ !

_________________________

ಯಾರೆ ಗಗನದ ಬಯಲಲಿ

ಹರಿತದ ತುರಿಮಣೆ ಇಟ್ಟವರು ?

ಬಿಳಿಮೋಡದ ಕಾಯ ಸವರಿ

ತುಂತುರು ಹನಿ ತುರಿದವರು ? ||

ಕಾಣದ ತುರಿಮಣೆ ಮೇಘವ ಕಂಡಾಗ

ಬಿಸಿಲ ದೆಸೆಗೆ ತುರಿವ ಬಾಯಿಗೆ ಬೀಗ

ತುರಿತುರಿದು ರವಿ ತೊಗಲಲ್ಲಿ ಬಿಸಿಲ

ಹನಿಹನಿ ವರ್ಷಧಾರೆ ಬೆವರಾಗಿ ಸಲಿಲ ||

ಕಂಡರು ಕಣ್ಣಿಗೆ ತುರಿಗೆ ಸಿಗುವ ಮುನ್ನ

ಗಾಳಿಯೆಂಬೊ ಕಾಣದ ಚೋರನ ಕನ್ನ

ಎತ್ತೆತ್ತಲೊ ಹಾರಿದ ಮೋಡಕೆ ಬದಲು

ತುರಿತುರಿದ ಗಾಳಿ ಚಳಿಯಾಗಿ ಹೆಗಲು ||

ನಡುವಲೊಮ್ಮೊಮ್ಮೆ ಸಖ್ಯ ಸಿಕ್ಕಾಗ ಹರ್ಷ

ತುರಿಮಣಿ ಹುಚ್ಚೆದ್ದು ತುರಿದಾಗ ಸುರಿವರ್ಷ

ತುಂತುರಲ್ಲ ಮುಸಲಧಾರೆ ಇಳೆಗಿಳಿದ ಪಾಕ

ಹಸಿರುಡುಗೆತೊಡುಗೆ ತೊಟ್ಟ ಧಾರಿಣಿ ಲೋಕ ||

ನಿಸರ್ಗದಲಿದೆ ತುರಿಮಣೆ ತುರಿದು ಕಲ್ಪವೃಕ್ಷ

ನೀಡುತಿದೆ ತರತರ ತುಂತುರಲೆ ರಸ ದ್ರಾಕ್ಷ

ಅಮಾಯಕ ಕಾಯವೀ ಕಾಯಾದರೆ ಸಹಜ

ತುರಿದೀತು ಬದುಕಿಗೆ ತುಂತುರು ಖುಷಿ ಖನಿಜ ||

– ನಾಗೇಶ ಮೈಸೂರು

(Nagesha Mn)

(Picture source: 1&2 Internet / social media received via Facebook friends; 3,4,5 – self )

01494. ಯಾಕೆ ಸಿಡಿಮಿಡಿ ?


01494. ಯಾಕೆ ಸಿಡಿಮಿಡಿ ?

________________________

ಯಾಕೆ ಹೀಗೆ ಸಿಡಿಮಿಡಿಗುಟ್ಟುವೆ ?

ಪ್ರತಿ ಮಾತಲಿ ಯಾಕೀ ಅಸಹನೆ?

ಪೂರ್ತಿಯಾದರು ಕೇಳಬಾರದೆ?

ಚಿಂತಿಸದೆ ನುಡಿವ ಹವ್ಯಾಸವೇಕೆ ? ||

ನಾನಿನ್ನೂ ಮುಗಿಸಿಲ್ಲ ಮಾತಿನುದ್ದ

ಮುನ್ನವೆ ನುಡಿಯಬೇಕೆ ಏನೊ ಅಪದ್ಧ ?

ಮಾತಿನರ್ಥ ಅರಿವಿಗು ಬೇಕು ಬಿಡುವು

ನೀಡದೆ ಅರ್ಥೈಸೆ ಚೆಲ್ಲಾಪಿಲ್ಲಿ ಸಂಗತಿ ||

ಯಾಕಂದುಕೊಳ್ಳಬೇಕು ಎಲ್ಲಾ ಮೊದಲೆ ?

ತರವಲ್ಲದ ಅನಿಸಿಕೆ ಯಾವತ್ತೂ ಮುಜುಗರವೆ!

ತೊಟ್ಟ ಬಾಣ ಆಡಿದ ಮಾತು ತಗ್ಗದ ವೇಗ

ಎದೆ ಸೀಳಿದ ಗಾಯಕೆ ಮದ್ದಿಲ್ಲದ ಬೇಗೆ ಬೇನೆ ||

ಇದ್ದರೇನು ನಿಕೃಷ್ಟ ಭಾವ ಮನದಲ್ಲಿ

ನಿರ್ಲಕ್ಷ್ಯ ತರವಲ್ಲ ಗೊಣಗಾಟ ಸಾಕು

ಹೇಳುವುದನೆ ನೇರ ಬಿಚ್ಚಿ ಹೇಳೆ ಅಹವಾಲು

ಸ್ಪಷ್ಟ ಸ್ವಚ್ಚ ಪ್ರಾಮಾಣಿಕ ಮಾತಿಗಿಲ್ಲ ಸೋಲು ||

ಬಂಧವೊ ಸಂಬಂಧವೊ ನಂಟಿನ ಗಂಟು

ಜತೆಗ್ಹೊತ್ತುಕೊಂಡು ಹೋಗರಿಲ್ಲಿ ಕೊನೆಗ್ಯಾರು

ಹೊತ್ತು ನಡೆವ ಹೊತ್ತಲಿ ಬೇಕೆ ಹೆಣ ಭಾರ ?

ಸಿಡಿಮಿಡಿಗುಟ್ಟದೆ ನಡೆಸು ಮಾತಿನ ವ್ಯಾಪಾರ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media)