01499. ಕವಿತೆ ಇದ್ದರೆ ಸಾಕು..


01499. ಕವಿತೆ ಇದ್ದರೆ ಸಾಕು..

_____________________________

ಕವಿತೆ ಇದ್ದರೆ ಸಾಕು

ಕವಿಗಿನ್ನೇನು ಬೇಕು ?

ಧಾರಾಕಾರ ಕವಿತೆಗಳು

ಕವಿ ತೆಗಳ ಓದದಿದ್ದರು ! ||

ಕವಿತೆ ಅವಳಿದ್ದರೆ ಸಾಕು

ಕವಿಗಿನ್ನೇನು ಜತೆ ಬೇಕು ?

ಮನಭಾವದ ಮಿಲನೋತ್ಸವ

ಶಿಶುವಿನಂತೆ ಪ್ರಸವ ಕಾವ್ಯ ||

ಕವಿತೆ ಕವಿಯುಟ್ಟಂತೆ ಸೀರೆ

ಹೊಕ್ಕವಳೊಳಗಾಗುವ ತದ್ಭವ

ತಂಗಾಳಿ ಸೆರಗು ಮುಂಗುರುಳಲೆ

ಜೊಂಪೆ ಜೊಂಪೆ ತತ್ಸಮ ಕವಿತೆ ||

ಕ’ವಿ’ತೆಯೊಳಗವಿತಿಹನೆ ಕತೆ

ನಡು ‘ವಿ’ಸ್ಮಯ ಹೊರದೂಡೆ

ಕತೆಯಾಗಲಲ್ಲಿ ಕವಿ ನಿರುಪಾಯ

ವಿದಾಯ ಗೀತೆ ಬರೆವಾ ಸಮಯ ||

ಕವಿತೆ ಲೋಕದ ಕನ್ನಡಿ

ಬಿಚ್ಚಿಡೆ ನೈಜ ಕಲ್ಪನೆ ಲಹರಿ

ತನ್ನಂದ ತಾನೆ ಕಾಣದ ನೀರೆ

ಚಂದ ಕವಿತೆ ಕಾಣದು ತನ್ನನ್ನೆ ||

ಕವಿಗಿಲ್ಲ ಸುಖ ದುಃಖ

ಭಾವನೆ ಪುಂಖಾನುಪುಂಖ

ಸಂಭಾವನೆ ಆಸ್ವಾದಿಸೆ ಘನತೆ

ಅಭಾವದಲು ಸೃಜಿಸುವ ಕವಿತೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media / Creative Commons)

01498. ಪಾಪುವಿನ ರೋಪು..!


01498. ಪಾಪುವಿನ ರೋಪು..!

_______________________________

ಪುಟ್ಟದೊಂದು ಪಾಪ

ಹಾಕಿತೊಂದು ರೋಪ

ಹೊತ್ತುಕೊಳದಿರೆ ತೆಕ್ಕೆಗೆ

ಅತ್ತು ಚೀರಾಡುವ ಶಾಪ ! || ಪುಟ್ಟ ||

ಹೊತ್ತರೆ ಸಾಲದು ಮತ್ತೆ

ಸುತ್ತಬೇಕು ನನ್ನ ಹೊತ್ತೆ

ಕಿಲಕಿಲ ನಗುವಿರಬೇಕು

ನಗಿಸದಿರೆ ಅಳಲಷ್ಟೆ ಗೊತ್ತೆ ! || ಪುಟ್ಟ ||

ಸುತ್ತುವಾಗಲೆ ಸಿಕ್ಕಿದ್ದೆಲ್ಲ

ಕೈಗೆಟುಕಿಸಿದರೆ ಸಾಕಲ್ಲ

ಬಾಯಿಗಿಟ್ಟು ರುಚಿ ನೋಡಿ

ವಸಡಿಗೊತ್ತಿ ಸಂತೈಸಲೆಲ್ಲ || ಪುಟ್ಟ ||

ಜಾರುವೆನು ನಡು ನಡುವೆ

ಬೇಕವರಿವರದೆಲ್ಲ ಗೊಡವೆ

ಅಂಬೆಗಾಲ ಸುರುಸುರು ಬತ್ತಿ

ಓಡಿ ಬಂದರಷ್ಟೆ ಕೈಗೆ ಸಿಗುವೆ || ಪುಟ್ಟ ||

ಸುಂಕ ಬೇಡದ ಸುಖ ನನದು

ಹೊಟ್ಟೆಗಿಷ್ಟು ಬಿದ್ದರಾಯ್ತು ಗಡದ್ದು

ಮುಕ್ಕಾಲು ದಿನ ನಿದಿರೆ ಗುಂಗು

ಮಿಕ್ಕ ಹೊತ್ತು ಬರಿ ನನದೆ ಸದ್ದು || ಪುಟ್ಟ ||

– ನಾಗೇಶ ಮೈಸೂರು

(Nagesha Mn)

(Picture source1: https://goo.gl/images/JaezFJ)

01497. ಮನದ ಗದ್ದಲ..


01497. ಮನದ ಗದ್ದಲ..

__________________________

ಸದ್ದಿಲ್ಲ ಸುಳಿವಿಲ್ಲ

ಇದ್ದಕ್ಕಿದ್ದಂತೆ ಮಾಯ

ಮಾತಿಲ್ಲ ಕಥೆಯಿಲ್ಲ

ಏನಿದು ಅನ್ಯಾಯ? ||

ಮಾತಿದ್ದಾಗ ಬೇಸರ

ಇಲ್ಲದಿರಲು ಘೋರ

ಬಳಿಯಿದ್ದಾಗ ಸದರ

ಇರದಿರೆ ನೂರವತಾರ ||

ಬೇಕೇ ಬೇಕೆನ್ನೊ ಹಠ

ಅದು ಹತ್ತಿರವಿರದಾಗ

ಎದ್ದು ಬಿದ್ದು ಪಡೆದಾಯ್ತು

ಮೂಲೆಗಿಟ್ಟು ಪೂಜೆ ಯೋಗ ||

ಗಮನವಿಡದೆ ನಿರ್ಲಕ್ಷ್ಯ

ಇದೆಯೆಂದಲಕ್ಷಿಸುತ

ಬಿದ್ದರಲ್ಲಿ ಯಾರದೊ ಕಣ್ಣು

ಮತ್ತಲ್ಲಿ ತಟ್ಟನೆ ಗಮನ ಸುತ್ತ ||

ವಿಚಿತ್ರವಿದು ಮನ ಮಾಯೆ

ಬಯಸುತೆಲ್ಲವ ತನ್ನದಲ್ಲ

ತಿಳಿದೂ ಪರರದು ಬಯಸಿತಲ್ಲ

ಮಾಯಾವಿ ಮನಸ ಅರಿತವರಿಲ್ಲ ||

– ನಾಗೇಶ ಮೈಸೂರು

(Nagesha Mn)

(Picture source internet / social media received via FB friends)