01503. ಬಾ, ಸುತ್ತಾಡಿ ಬರುವ.. (ಶಿಶು ಗೀತೆ)


01503. ಬಾ, ಸುತ್ತಾಡಿ ಬರುವ.. (ಶಿಶು ಗೀತೆ)

_________________________________________

(‘೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೩’ ಕ್ಕೆ ಬರೆದ ಕವನ 2 : ಶಿಶು ಗೀತೆ)

ಬಾ, ಸುತ್ತಾಡಿ ಬರುವ.. (ಶಿಶು ಗೀತೆ)

________________________________

ನೀನು ಮರಿ

ನಾನೂ ಮರಿ

ಖಾಲಿ ಬಯಲಿದೆ ಕುದುರಿ

ನೀನೊಬ್ಬಂಟಿ

ನಾ ತುಸು ತುಂಟಿ

ಮಾಡಿಸೆಯ ಬೆನ್ನಲಿ ಸವಾರಿ? ||

ನಿನಗು ಹೊಸದು

ನನಗು ಹೊಸತು

ಗೊತ್ತಿಲ್ಲ ಇಬ್ಬರಿಗೂ ದಾರಿ

ನನಗೂ ಕೌತುಕ

ನಿನಗೂ ಪುಳಕ

ಕತ್ತ ಗಂಟೆಯಿದೆ ತಪ್ಪೆ ದಾರಿ ||

ಯಾರಿಲ್ಲ ಸುತ್ತ

ಕಾರ್ಯ ಪ್ರವೃತ್ತ

ನೋಡಿಗಲೆ ಸುಸಮಯ ಸರಿ

ಇಲ್ಲಿಲ್ಲ ನಿನ್ನಮ್ಮ

ಕಾಣಳು ನನ್ನಮ್ಮ

ಬರುವ ಮೊದಲೆ ಬಾ ಪರಾರಿ! ||

ಸುತ್ತಾಡುವ ಬಾಹತ್ತಿಳಿಯುವ ಬಾ

ಬೆಟ್ಟಗುಡ್ದ ಕಾನನದ ಹಸಿರು

ಶರವೇಗ ಮುಗಿಸಿ

ಮತ್ತಿಲ್ಲಿಗೆ ವಾಪಸಿ

ಏನರಿಯದ ಗುಮ್ಮ ನಾವಿಬ್ಬರು! ||

– ನಾಗೇಶ ಮೈಸೂರು

೨೩.೧೨.೨೦೧೭

01502. ಹೇ, ಭೀಮಕಾಯ


01502. ಹೇ, ಭೀಮಕಾಯ !

________________________

ಹೇ, ಭೀಮಕಾಯ

ನಾ ನಿಸ್ಸಹಾಯಕಿ

ಭಯದಲಿರುವ ನಿರ್ಭಯ..

ನಾ ಅಸಹಾಯಕಿ

ಹೊಸಕಲು ಆಹುತಿ

ನೀಡುವರುಂಟೆ ಅಭಯ ? ||

ನಿಜ ನಿನ ನೆರಳಿದೆ

ಗಂಟೆಯ ಕೊರಳಿದೆ

ಸೊಂಡಿಲಿನದೆ ತಡೆ ಗೋಡೆ..

ಗಾಳಿಯ ಸದರ

ಬಿರುಕಿನ ಪರಿಸರ

ಕಬಳಿಸೆ, ಇಹುದೆಲ್ಲಿ ತಡೆ ? ||

ಕೂಸಾದರೇನು ಬಿಡರು

ತುಂಬು ಪ್ರಾಯಕು ಖಳರು

ಯಾರಿಗಿಲ್ಲಿ ಯಾರು ಸಖರು?

ಯಾರ ನಂಬಿ ಯಾರಿರುವರು?

ತೋರೊ ದಿಕ್ಕು ಗಜರಾಯನೆ

ನಿನ ಶಕ್ತಿಗಿಲ್ಲ ಮೊದಲು ಕೊನೆ ! ||

ನೀ, ಸೂರ್ಯನೆದುರ ಹಣತೆ

ನಿನ ನೆರಳಾಗಿ ನಾನೆ ನಿಂತೆ..!

ಜೊತೆ ಜೊತೆಗೀವೆ ಎಚ್ಚರಿಕೆಯ ಗಂಟೆ..!

ಬೆಳೆದು ಬೆಳಗು ಇದರೊಳಗೆ

ಬೆಳೆಸಿಕೊ ನಿನ್ನೆ ನೀಸಲಹೊ ಬಗೆ

ಹೇ ನಿರ್ಭಯ, ನೀ ನೀನಗಾಗು ಅಭಯ ! ||

– ನಾಗೇಶ ಮೈಸೂರು

(Nagesha Mn)

(Picture: ‘೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೩’ ಕ್ಕೆ ಬರೆದ ಕವನ)

01501. ನಳ, ನಾನೀಗ ಖಳ !


01501. ನಳ, ನಾನೀಗ ಖಳ !

_______________________________

ಮಲಗಿರು ಏಳದೆ ಭದ್ರೆ

ನನ್ನ ಸಖ್ಯವೀಗಲ್ಲ ಸುಭದ್ರ

ನಿನಗಿನ್ನೆಲಿಯದೆ ನೆಮ್ಮದಿ?

ರಾಜ್ಯ ಕೋಶವೆಲ್ಲ ಕಳೆದೆ ! ||

ಬರಿ ಕಳುವಾಯ್ತೇನು ಸಂಪದ

ಅಡವಿಯಲು ಬಿಡಲಿಲ್ಲ ದುರ್ವಿಧಿ

ಕಳೆಯದೆ ಬಿಟ್ಟರೂ ನಿನ್ನಾ ಮಾನ

ಬಿಡಲಿಲ್ಲ ನಮ್ಮ ಮೈಯೊಡವೆ ವಸ್ತ್ರ ||

ಸದ್ಯ! ಉಳಿಸಿದರೊಂದೀ ಅರಿವೆ

ಹಾಸಿ ಹೊದ್ದೆವಲ್ಲ ಇರುಳೆ ಯಾತನೆ

ಎಷ್ಟೆಂದು ತಡೆವೆ ಸುಕೋಮಲೆ ?

ಕಾನನ ವಾಸ ನಿನಗಲ್ಲ ದಮಯಂತಿ ||

ಬರುವಂತಿದೆ ಯಾತ್ರಿಕ ಗುಂಪೊಂದು

ನಿನ್ನ ಕರೆದೊಯ್ಯಲವರೆ ಸರಿ ನಂಟು

ಕ್ಷಮಿಸು ದೂರಾಗಲಲ್ಲ ದೂರಬೇಡ

ಕಷ್ಟವು ಹರಿದಾಗ ಮತ್ತೆ ಸೇರುವ ಕಾಲ ||

ಹರಿಯದೆ ವಿಧಿಯಿಲ್ಲ ನೀನುಟ್ಟ ಸೀರೆ

ತುಂಡದನೆ ಉಟ್ಟು ನಡೆವೆ ಮರೆಯಾಗೆ

ದುಃಖದೆ ಬಿಕ್ಕಿದರು ನಡೆ ತವರಿನ ಕಡೆ

ಕಾಲಚಕ್ರ ಸರಿಯಲಿ ಕಾದು ಬಿಡುಗಡೆಗೆ ||

– ನಾಗೇಶ ಮೈಸೂರು

(Nagesha Mn)

(Picture source : internet / social media , received via Nandini Krishnakumar -thank you 😊👍🙏)

01500. ಕೂಸೆ ಕೂಸೆ ಕೂಸೆ..


01500. ಕೂಸೆ ಕೂಸೆ ಕೂಸೆ..

_________________________

ಕೂಸೆ ಕೂಸೆ ಹಸುಗೂಸೆ

ಯಾರಿಗಿಲ್ಲ ನಿನ ಮೇಲಾಸೆ ?

ನೀ ನಕ್ಕರೆ ಚಂದ ಕಂದ

ಬೊಚ್ಚಲಿ ಅಂದ ಬಂತೆಲ್ಲಿಂದ ? ||

ಕೂಸೆ ನೀನತ್ತರೆ ಮುದ್ದು

ಮುಚ್ಚಿದ ಕಣ್ಣಿನಲೆಲ್ಲಾ ದೂರು

ಹಿಂಡಿದ ಕೆನ್ನೆ ಮುನಿಸಾಟ

ಯಾರ ಜತೆಗಪ್ಪ ಈ ಸೆಣೆಸಾಟ? ||

ಕೂಸೆ ಬೀಸಣಿಗೆ ನೀನಂತೆ

ತಂಗಾಳಿ ಸುಳಿದಾಡುತ ಬೀಸಿದ್ದೆ

ಕಿಲಕಿಲ ಸದ್ದಲಿ ಗಿಲಗಿಲಕಿ

ನಿನಗ್ಯಾಕೆ ಬೇಕು ಇನ್ನೊಂದಾಟಿಕೆ ? ||

ಕೂಸೆ ನಕ್ಷತ್ರಕು ನೋಡಾಸೆ

ಸೇರಿ ಮಿಂಚಿದೆ ನಿನ್ನಾ ಕಣ್ಣೊಳಗೆ

ಚಂದಿರನೇನು ತಾನೆ ಕಡಿಮೆ?

ಕಪ್ಪು ತೆಪ್ಪದ ಹಾಗೆ ತೇಲಾಟ ಕಣ್ಣಲ್ಲೆ ||

ಕೂಸೆ ಬಡಿದಾಡೆ ಕೈ ಕಾಲೆ

ಜೀವದ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದವೆ

ಎದೆಯ ಕದ ತೆರೆಸುತ ಕಂದ

ಎಲ್ಲರ ಹೃದಯ ಗೆಲುವಾ ಗುಟ್ಟೇನು ? ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Facebook friends)