01508. ಬರೆಯಲೇಕೆ ಕವಿ, ಕವಿತೆ?


01508. ಬರೆಯಲೇಕೆ ಕವಿ, ಕವಿತೆ?

________________________________

ಕವಿಯೊಬ್ಬನ ಕವಿತೆ

ಜೀವಕೋಶದ ಮಾತೆ

ಮಾತಾಗಿ ಸೇರಿದ ಮಾತೆ

ಯಾರೊ ಕಾಣೆ ಹರಸುತೆ ||

ಪದ ಲಾಸ್ಯ ತುಸು ಹಾಸ್ಯ

ಜೀವಂತಿಕೆ ಭಾವದ ಮೋಹ

ಕೋಶದುತ್ಪನ್ನ ಜೀವದ ರಸ

ನಿಲದೇ ಹರಿದೆಲ್ಲೆಡೆ ತುಂಬುತ್ತ ||

ಬರೆಯದಿರಲೆಂತು ಕವಿಗೆ ?

ಬಿಗಿದು ಕಟ್ಟಲು ಅನಾಹುತ

ಓದಲಿ ಬಿಡಲಿ ಸಾರಸ್ವತರು

ಎದೆ ಹಗುರ ಮಾತಾಗೆ ಮೂರ್ತ ||

ಮೆಚ್ಚಿಸಲಲ್ಲ ಪದಕ ಪದವಿಗೆ

ಬರುವ ಪದದಲಿಲ್ಲ ಪಗಾರ

ಉಸಿರಾಡುವ ಪರಿ ಪದಗಾರಿಕೆ

ಹೈನುಗಾರಿಕೆ ಪದವೇ ಬೇಸಾಯ ||

ಸ್ರವಿಸುವ ತನಕ ಜೀವಕೋಶ

ತುಂಬುತಲಿ ಕವಿ ಭಾವಕೋಶ

ಬರೆಯುವ ತನಗಾಗಿಯೆ ಖುದ್ಧು

ತಾನಾಗದಿರೆ ತನದೇ ಸರಹದ್ದು ||

– ನಾಗೇಶ ಮೈಸೂರು

೨೪.೧೨.೨೦೧೭

01507. ಪರಾಕಾಷ್ಠೆ


01507. ಪರಾಕಾಷ್ಠೆ

_____________________

ತಲುಪಬೇಕಿದೆ ನಾ

ತೀವ್ರತೆಯ ಪರಾಕಾಷ್ಠೆ

ಕರೆದೊಯ್ಯುವೆಯಾ ಅಲ್ಲಿಗೆ ?

ಬರಬಹುದೆ ನಿನ್ನಾ ಜೊತೆಗೆ ? ||

ತಲುಪೆ ದಾರಿ ನೂರು

ಬಲ್ಲವರಾರು ಸ್ಪಷ್ಟ ನಿಖರ?

ಭೌತಿಕವೆ? ಲೌಕಿಕವೆ? ಪಯಣ

ಹೇಳು ನಿನಗಾವುದರತ್ತ ನಡಿಗೆ ಚಿತ್ತ? ||

ಮೋಕ್ಷವೆ? ಸುಭೀಕ್ಷವೆ?

ಬಂಧಿ ದ್ವಂದ್ವಗಳಡಿ ಮನಸು

ಬೇಡವೆನ್ನಲೆಂತು ಐಹಿಕ ಕೊರಮ

ಧರ್ಮಕಿದೆಯೆ ಸುಗಮ ದಾರಿ ಅಲ್ಲಿಂದ? ||

ಕರ್ಮ ನಿನ್ನದವನ ಮರ್ಮ

ಮನ ಸೋಲೊ ಗೆಲುವೊ ಭ್ರಮೆ

ಶರಣಾದರೊಂದು ಆಗಿದಿರಲೊಂದು

ಪಥವದನೇಕ ನಿನದೇನಿದೆ ಹುಡುಕಾಟ? ||

ಗುರುವೆ ಶರಣಾಗಿಬಿಡುವೆ

ತೋಚಿದ ದಾರಿಗೆ ಇಡುವೆ ಹೆಜ್ಜೆ

ತನುವನುಭವಿಸಲಿ ತೀವ್ರತೆ ಪರಾಕಾಷ್ಠೆ

ದಾಟಿಸಲಲ್ಲಿಂದಲೆ ಚಿತ್ತ ಮೊತ್ತದೆ ಎಲ್ಲಾ ನಿನ್ನಿಚ್ಛೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01506. ಅದೃಶ್ಯವಾದವೊ..


01506. ಅದೃಶ್ಯವಾದವೊ..

______________________

ಯಾಕೊ ನಡೆವ ಹಾದಿಯಲ್ಲಿ

ಮಲ್ಲಿಗೆ ಘಮವಿಲ್ಲ

ಯಾಕೊ ಕಾಣೆ ಯಾವ ಹೆಣ್ಣು

ಮಲ್ಲಿಗೆಯನೆ ಮುಡಿದಿಲ್ಲ ! ||

ಯಾಕೆಂದೆನ್ನಲಿ ಎದುರಾದಾಗ

ಘಮಘಮ ಸದ್ದುಗಳು

ಗಂಡೊ ಹೆಣ್ಣೊ ಅವಿತದರೊಳಗೆ

ಅತ್ತರು ಅಗುಳಗುಳು ! ||

ಹೂವೆ ಇಲ್ಲದ ವಾಸನೆಯೆಂತೊ

ಗ್ರಹಿಕೆಗಷ್ಟೆ ಬರಿ ಸಾದೃಶ್ಯ

ಅದೆ ಹೂವನೆ ಚಚ್ಚಿ ತೇದು ಮಿಶ್ರ

ಗಿಡದ ಹೂವಂತು ಅದೃಶ್ಯ ! ||

ಹೂವಾಗಿತ್ತು ಮುಡಿ ತುಂಬ ದೃಶ್ಯ

ಮುಚ್ಚೆಲ್ಲ ಬಿರುಕು ಸಂದಿ

ಜಡೆ ನಾಗರ ಹಿಗ್ಗು ಮೊಗ್ಗಿನಾ ಜಡೆ

ಛಾಯಚಿತ್ರಕಷ್ಟೆ ಬಂಧಿ ! ||

ಎಲ್ಲಿ ಮಾಯವಾದವೊ ಎಲ್ಲ ಜಾದು

ಉಡುಗೆ ತೊಡುಗೆ ಸಹಿತ?

ಎಲ್ಲಿ ಮಾಯವಾದರೊ ಅರಸೊ ಮಂದಿ

ಮಾರುಕಟ್ಟೆಯಿರದೆ ಸರಕಿಲ್ಲ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01505. ಕುಸುಮಗಳದೀ ಪಿಸುಮಾತು..


01505. ಕುಸುಮಗಳದೀ ಪಿಸುಮಾತು..

____________________________

ಜೋಡಿ ಕುಸುಮ ಸಮಾಗಮ

ಕಾದಂತಿದೆ ಯಾರಪ್ಪಣೆಗೊ?

ವಿರಹ ಧೂರ್ತ ವಿಹಾರ ಸ್ವಸ್ಥ

ಪರಾಗ ಸ್ಪರ್ಶ ಚೆಲ್ಲಾಟಕೆ ಬಾ ! ||

ಕುಸುಮ ಜಗದಲೆಲ್ಲಿದೆ ಅಸಮ?

ವಂಶಾಭಿವೃದ್ಧಿ ನಿರಂತರ ಸಮರ

ಇದ್ದರಾಯ್ತು ಪುರುಷ ಶಲಾಕಾಗ್ರ

ಪ್ರಕೃತಿ ಅಂಡಾಶಯ ಅಮೂಲಾಗ್ರ ||

ಯಾರಿಲ್ಲಿ ಪುರುಷಾ ಪ್ರಕೃತಿ ?

ಆಕೃತಿಯಲಷ್ಟೆ ಸಾಕಾರ ತನ

ನೆರೆ ಹೊರೆಯಲಿದ್ದೂ ಅಂತರ

ಅಭ್ಯಂತರವಿರದಿದ್ದರು ದೂರ! ||

ಬರಲೇಳು, ಯಾರೊ ಹಾರುತ

ಚಿಟ್ಟೆ ಪತಂಗ ದುಂಬಿಯ ತರ

ಸಾಕಲ್ಲ ಬೀಸೊ ತಂಗಾಳಿ ಸ್ಪರ್ಶ

ಪರಾಗರೇಣು ಪ್ರೋಕ್ಷಿಸೆ ಸಂಗಮ ||

ಏಕಾಂತವಲ್ಲ ಸಮರ್ಪಣ ಭಾವ

ಸಭ್ಯತೆ ಮೀರಿ ಸಂಗಮದಾತುರ

ಅದಕೆಂದೆ ಜಗದ ಚೆಲುವೆಲ್ಲ ಇಲ್ಲೆ

ಆಸ್ವಾದಿಸು ಒಣಗಿ ಬಾಡುವ ಮುನ್ನ ||

ಪಿಸುಗುಟ್ಟಿ ಕುಸುಮಗಳೆರಡು

ತಡಕಾಡಿಕೊಂಡಂತಿವೆ ತಮ್ಮೆ

ಪಿಸುಮಾತುಲಿ ಪಸರಿಸಿ ನಶೆ

ಮತ್ತೇರಿಯೂ ಸುಮ್ಮ ಕೂತಿವೆ ||

– ನಾಗೇಶ ಮೈಸೂರು

೨೪.೧೨.೨೦೧೭

01504. ನಮಿಸಿ ಮುಂಜಾವಲಿ..


01504. ನಮಿಸಿ ಮುಂಜಾವಲಿ..

_______________________________

ಮಂದ ಮಾರುತ ಸಗಾಳಿ

ಮುಂಜಾವಿನ ಮಂಜಿನಲಿ

ನಸುಕನೆಬ್ಬಿಸುತ ದೇಗುಲ

ಅರುಣರಾಗ ಹಾಡುವ ಕಾಲ ||

ಢಣಢಣ ಘಂಟಾನಾದದೆ

ಪೂಜಾರತಿ ಬೆಳಕ ಸುಧೆ

ನಾದಸ್ವರ ವಾದನ ಜೋಡಿ

ಜತೆಜತೆ ಸುಪ್ರಭಾತ ಹಾಡಿ ||

ಆ ಹೊನ್ನ ಕಲಶದ ಮೇರು

ಗೋಪುರದೆ ನಿತ್ಯದ ತೇರು

ಚುಂಬಕ ತುದಿ ಸೆಳೆಸೆಳೆದು

ಪರಿಸರ ಶಕ್ತಿ ಪೀಠಕೆ ಸುರಿದು ||

ಸಂಧ್ಯೆ ದೈವಿಕ ಸಂಗಮದೆ

ಉಷೆ ಕಿರಣ ಹಾಲೂಡಿಸಿದೆ

ಮುಟ್ಟಿ ಪಾದಧೂಳಿ ನಮಿಸಿ

ದೈನಂದಿನ ಯಾತ್ರೆ ದ್ಯುತಿಸಿ ||

ನಕ್ಕಳಾ ತಾಯಿ ಬೆಳದಿಂಗಳು

ತಟ್ಟನೆ ಬೆಳಗಾಯ್ತು ಜಗದಲು

ಹಕ್ಕಿಗಳುಲಿದು ಮಂತ್ರಘೋಷ

ಜಗ ಕೊಡವಿ ಮೇಲೆದ್ದ ನಿಮಿಷ ||

– ನಾಗೇಶ ಮೈಸೂರು

(Nagesha Mn)