01510. ಬಿಟ್ಟುಬಿಡು ಹೀಗೆ ಕಡೆವರೆಗೆ..


01510. ಬಿಟ್ಟುಬಿಡು ಹೀಗೆ ಕಡೆವರೆಗೆ..

____________________________________

ಕಳುವಾಗಿ ಹೋಗಿದೆ ಮನಸು

ಕೂತಲ್ಲಿ ನಿಂತಲ್ಲಿ ಅವನದೇ ಕನಸು

ಮೈ ಮರೆತು ಹೋದೆ ನೆನಪಿಲ್ಲ ಎಲ್ಲಿರುವೆ

ಎಲ್ಲಿದ್ದರೇನು? ಎಡಬಿಡದೆ ಬಂದು ಕಾಡುವೆ ! ||

ಅರುಣನೊ ಚಂದ್ರನೊ ನೆನಪಲಿಲ್ಲ

ಕೂತೆಷ್ಟು ಹೊತ್ತು ಕಳೆಯಿತೊ ಅರಿವಿಲ್ಲ

ಹಗಲಿತ್ತೆ? ಇರುಳಿತ್ತೆ? ಎಲ್ಲಾ ಅಯೋಮಯ

ನನ್ನೆ ಮರೆಸಿದನಲ್ಲ! ಏನಿರಬಹುದವನ ಮಾಯಾ! ||

ಮುಂಜಾವು ಮುಸ್ಸಂಜೆ ಹೊಂಬಣ್ಣ ಅದ್ದಿ

ಮಾಡಿಸಿದೆ ಮಜ್ಜನ ಎದೆಯೊಳಗ್ಹೊರಗ ಸುದ್ಧಿ

ನೀರಲ್ಲ ನೀರು ಹೊನ್ನೀರಾಗಿ ಹರಿದಿಟ್ಟ ಮುಹೂರ್ತ

ಕಾದು ಕುಳಿತಂತೆ ಮಾಡಿದೆ ನನ್ನನವನೆ ಆವರಿಸುತ್ತ ||

ಬಿರಿದ ಹೂ ಪ್ರಾಯ ತುಂಬಿದಾ ಕೊಡ

ತುಂಬಿ ತುಳುಕೊ ಆಸೆಗಳದೆಷ್ಟು ನಿಭಿಡ !?

ಹಿಡಿದಿಡಲೆಷ್ಟೊ ಕಾಣೆ ತುಳುಕಿ ತೊಟ್ಟಿಕ್ಕುತಿದೆ

ಜಾರಿ ಯೌವನದ ಕೊಡದಿ ನದಿಯಾಗಿ ಹರಿಯುತಿದೆ ||

ಬಿಟ್ಟುಬಿಡು ಹೀಗೆ ನಾನಿರುವೆ ಪರವಶದಿ

ಕದಲಿಸದಿರು ಮನಸ ಮರೆತುಬಿಡುವ ಸರದಿ

ನಿನ್ನೆ ಇಂದು ನಾಳೆ ಒಂದಾಗಿ ಕೂತಿಹ ಈ ಗಳಿಗೆ

ವಿಚಲಿಸದಿರೆನ್ನ ಬದುಕೆ ಇರಲುಬಿಡು ಹೀಗೆ ಕಡೆವರೆಗೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Muddu Dear – thank you very much !🙏👌👍😊)

01509. ಹೊತ್ತಾದರು ಬರಲಿಲ್ಲವೇಕೆ?


01509. ಹೊತ್ತಾದರು ಬರಲಿಲ್ಲವೇಕೆ?

___________________________________

ಬಾರದೆ ಹೋದನೇಕೆ ಇನ್ನು

ಬರುವ ಹೊತ್ತಾದರು ಸಖ?

ಬರದ ಕಾತರ ಭೀತಿಯಾಗೆ

ಸುಖ ಭಾವ ಕರಗಿ ಆತಂಕ ||

ಬಂದೇ ಬರುವ ಇದೇ ಹೊತ್ತು

ಆಚೀಚೆ ಗಳಿಗೆ ಇದ್ದರೊಂದೆರಡು

ನಿತ್ಯದಂತಲ್ಲ ಕವಿದ ಕಾರ್ಮೋಡ

ಬೇಡಿದ್ದೆನಲ್ಲ, ನೀ ಬೇಗನೆ ಹೊರಡು? ||

ಹೊಸಿಲಲಿ ನಿಂತು ನೋಡಲೆಷ್ಟು

ಕಣ್ಣಿಗೆಟುಕುವಷ್ಟು ದೂರದ ತನಕ ?

ಬೆಳಗಿದೆ ದೀಪ ಬೆಳಗಿ ಮುಖವೆಲ್ಲ

ದೂರದಿಂದಲೆ ಕಾಣಲೆಂಬ ತವಕ ||

ನೀನೆ ಮೆಚ್ಚಿದ ಆಭರಣ ಉಡುಗೆ

ಉಟ್ಟು ನಿಂತೆ ಬರಿ ನಿನ್ನದೆ ಧ್ಯಾನ

ನೋಡುವನಿಲ್ಲ ಮುನಿದು ಸುಕ್ಕಾಗಿ

ಬಾರೆಯ ಮನ ಮುದುರೊ ಮುನ್ನ ? ||

ಎಂದಿನಂತಲ್ಲ ಇಂದು ಜನ್ಮದಿನ

ಮಾಡಿಹೆನಲ್ಲ ಪ್ರಿಯ ಸಿದ್ಧತೆ ಸಕಲ..

ಬಡಿಸಲಿದೆ ರಸದೂಟಪಾನಾಮೃತ

ಸರಸಸಲ್ಲಾಪಕೆ ಯಾಕಿನ್ನೂ ಬಂದಿಲ್ಲ ? ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)