01513. ಒಂದರೊಳಗೊಂದು…


01513. ಒಂದರೊಳಗೊಂದು…

________________________________

ನಭಕೊಂದು ರಂಗವಲ್ಲಿ

ದಿಗಂತಕೊಂದು ಚಿತ್ತಾರ ಧಾಳಿ

ಬಡಿದ ರೆಕ್ಕೆ ಹಡೆದ ಯಾನ

ತುತ್ತಿದೆ ಕೈಲಿ ಜೋಪಾನ ! ||

ತಿಳಿನೀರಿಗು ತಿಳಿಗೇಡಿ ಸೂರ್ಯ

ಚೆಲ್ಲಿಬಿಟ್ಟ ಹೊಂಗಿರಣದ ಸಂಕಲನ

ಮೋಹಕ ಫಳಗುಟ್ಟಿದೆ ಶರಧಿ

ಮೈಮರೆತೆಯೊ ಬುತ್ತಿ ತಳದಿ! ||

ಹಾರೆ ಇಂಧನವೆಲ್ಲ ಜೈವಿಕ

ವಿಮಾನವಲ್ಲ ಮೆದುಳಾ ಕೈಚಳಕ

ನಡುವಲಿಲ್ಲ ನಿಲ್ದಾಣ ವಿರಾಮ

ಲೆಕ್ಕಾಚಾರ ತಪ್ಪದಂತೆ ಪಯಣ ||

ವಿಲವಿಲನೆ ಒದ್ದಾಟ ಖಚಿತ

ಉಡದಂತೆ ನಖದಿ ಭದ್ರ ಹಿಡಿತ

ತಪ್ಪೇನಿದೆ ಗುಟುಕಿನ ಸರಪಳಿ

ಇಂದಲ್ಲ ನಾಳೆ ನಮ್ಮೆಲ್ಲರ ಪಾಳಿ ||

ಬಿಡು ಜಗಕದುವೆ ವಿಸ್ಮಯ

ಹೋರಾಟದ ಬಾಳಲೆ ಸೌಂದರ್ಯ

ತೆರೆದೊಡೆ ಪುಟ ನವರಸವೆ

ತುತ್ತ ಕಾದಿವೆ ಮರಿ, ನನ್ನ ಗಮನವೆ ||

– ನಾಗೇಶ ಮೈಸೂರು

(Nagesha Mn)

(Picture source from Internet / social media received via Muddu Dear – thanks madam 😊👍👌🙏)

01512. Divine..


01512. Divine..

_______________

ಪರಮಾತ್ಮನ

ಭಕ್ತಿಯಲ್ಲಿ

ಅವಳು

ಡಿವೈನೊ ಡಿವೈನು..🙏🙏🙏

ನನದೂ ಅಷ್ಟಿಷ್ಟು

ಅಳಿಲು ಸೇವೆ:

ರೆಡ್ ವೈನು 🍷🍷🍷

ಇಲ್ಲಾ

ವೈಟ್ ವೈನು !🥂🥂🥂

– ನಾಗೇಶ ಮೈಸೂರು

(Nagesha Mn)

(Picture source from : https://goo.gl/images/VdYxGa)

01511. ಕಾಣದೆನ್ನ ಮೊಗವೆನಗೆ..


01511. ಕಾಣದೆನ್ನ ಮೊಗವೆನಗೆ..

_______________________________

ನನಗೇನು ಕಾಣದೊ ನನ್ನ ಮುಖ

ನಾನೆಂತು ಕಾಣಲೊ ನೀ ಕಾಣೊ ಪುಳಕ ?

ನನ್ನೊರಗನಿನಿತು ಕಂಡೆನಷ್ಟಿಷ್ಟು

ಒಳಗನಂತು ಬಿಡು ಕಾಣಲಿಲ್ಲ ಇಂದಿಗೂ ! ||

ನಾ ಕಂಡೆ ಕಣ್ಣ ಕನ್ನಡಿಯ ಸರದಿ

ನೀಡಲೇನು ಕಂಡಂತೆ ಸಚಿತ್ರ ವರದಿ ?

ವಿವರಿಸಲೇ ನೀನು ಕಾಣದ್ದೆಲ್ಲಾ ಹೆಣ್ಣೆ

ಕಣ್ಣು ಮೂಗು ಬಾಯಿ ಕೆನ್ನೆಯ ಜೇನದೊನ್ನೆ ||

ವಿವರಿಸೊ ಅರಸ ನಾ ಕಾಣೆ ನನ್ನ

ಕಂಡಂತೆ ಪರರ ಕಾಣಲಾಗದೊ ಚೆನ್ನ

ನಿ ಬಿಡಿಸಿ ಹೇಳು ದಳದಳವೆ ಬಿಚ್ಚಿ

ನಾನು ಅರಿವೆ ಅರೆಕೊರೆ ಮೆಚ್ಚುವ ಮಚ್ಚೆ ||

ಹೋಲಿಕೆಗೆ ಹೂವು ಹಣ್ಣು ನಿಸರ್ಗ

ಹೊಂದದಾವುದು ನಿನ್ನ ಚಂದವೆ ಸ್ವರ್ಗ

ನಿನ್ನನ್ನೆ ಉಪಮೆ ಬಳಸಬೇಕವಕೆ

ನಿನ್ನಾ ಹೋಲಿಕೆಗೆ ಬಿಡು ಅವೆಲ್ಲಾ ಯಾಕೆ ||

ಸಾಕಿನ್ನು ಜಾಣ ಸುಳ್ಳಿನಾ ಪುರಾಣ

ನಾ ಬಲ್ಲೆ ಕನ್ನಡಿದಿನ ತೋರಿಹುದು ಬಣ್ಣ

ನೀನೆಂತು ಕಾಣುವೆಯೆಂದಷ್ಟೆ ಕೌತುಕ

ಸುಳ್ಳು ಬೇಡ ಮನಸ ಹೇಳಷ್ಟೆ ಸಾಕ ||

– ನಾಗೇಶ ಮೈಸೂರು

(Nagesha Mn)

(Picture source : internet / social media received via FB friends)