01516. ಜಾತಕದ ಸುತ್ತ…


01516. ಜಾತಕದ ಸುತ್ತ…

___________________________

ನಾ ಜಾತಕ ನೋಡದ ಜಾತಕ ಪಕ್ಷಿ

ನನಗೂ ಕುತೂಹಲ ಏನಿದೆ ಬಹುಶಃ ?

ಅಕ್ಷಿಗೆಟುಕದ ಅಕ್ಷಾಂಶ ರೇಖಾಂಶ

ಭವಿತ ರೇಖಾಲೇಖ ಸಿಕ್ಕೀತೆ ಭಾಗಶಃ? ||

ಹಣೆಬರಹದ ಗೀಟುಗಳದೆಷ್ಟಿವೆ ಕಾಣೆ

ಕಾಣದ್ದೆಷ್ಟೊ ಕಂಡಿದ್ದಷ್ಟೂ ಗೊಂದಲವೆ

ಅದರೇನು ಬಿಡದು ತೀಡುವ ಕುತೂಹಲ

ಮಾತಿನಾ ಲಯದಲಿದ್ದೀತೇನೊ ಯೋಗ ? ||

ಚಾಚಿದಾ ಹಸ್ತ ರೇಖೆ ಯಾವುದಿದೆ ಪ್ರಶಸ್ತ ?

ನಿಲುಕಿಗೆಟುಕದ ನಕ್ಷೆ ತುಂಬಿ ತುಳುಕಿ ವ್ಯಸ್ತ

ಓದಬಲ್ಲ ಕುಶಾಗ್ರಮತಿಗಳೇನ ಹೇಳುವರೊ?

ಮತಿಯೊಳಗಿನಂತಃಕರಣ ಗೊಂದಲದ ಬೀಡು ||

ಆದರೇನು ಬಿಡದು ಸೋಜಿಗ ಅರಿವಾಸೆ ಭವಿತ

ಯಾಕದರ ಹಿಂದೆ ಬೆನ್ನಟ್ಟುವ ಮನದಾವರ್ತ?

ಜ್ಞಾನವೊ ವಿಜ್ಞಾನವೊ ಅಜ್ಞಾನಿಗೆಲ್ಲ ಒಂದೇ ಮೂಸೆ

ಅರಿಯಲಾಗದ ಮಾತ್ರ ಅವಹೇಳನಕೆ ದಕ್ಕುವುದೆ ? ||

ಅರಿಯಲಿ ಬಿಡಲಿ ನಡೆವುದು ನಡೆಯಬೇಕಾದ್ದು

ನಡೆವುದೇನೆಂದು ಅರಿವುದು ಕೌತುಕದ ಸರಹದ್ದು

ನೀಡಲದೆ ತುಸು ಮನದ ಸಮತೋಲನಕಡಿಪಾಯ

ಮಿಕ್ಕೆಲ್ಲ ನಗಣ್ಯ ನಡೆಯಲಿ ನಡೆಸುವವನ ಅಧಿಕಾರ ||

– ನಾಗೇಶ ಮೈಸೂರು

೨೫.೧೨.೨೦೧೭

(Picture source : google search)

01515. ಜಗ ಮರೆತಿಲ್ಲ…


01515. ಜಗ ಮರೆತಿಲ್ಲ…

______________________

ರಾಧೆ, ಯಾರೆ ನಿನ್ನ ಕೃಷ್ಣ ?

ಯಾಕವ ನಿನಗೆ ಮೃಗತೃಷ್ಣ ?

ಕಟ್ಟಿಕೊಂಡ ಸಾವಿರ ಸಾವಿರ

ಇನ್ನೊಂದೇನು ಮಹಾಲೆಕ್ಕ ? ||

ಅದೆ ಸೋಜಿಗ ನನಗೂ ಗೋಜಲು

ಪ್ರೇಮ ನಮದು ಎತ್ತರದ ಮಜಲು

ಯಾಕೊ ಕಾಣೆ ಒಯ್ಯಲಿಲ್ಲ ಮಹಲಿಗೆ

ಸಾವಿರದಲೊಂದಾಗೆ ಬಿಡದ ಒಲವೆ ||

ಬಿಡು ಲೆಕ್ಕವಿತ್ತೆ ಹದಿನಾರು ಸಾವಿರ ?

ಮೇಲೆಂಟು ಅಷ್ಟ ಮಹಿಷಿ ಜತೆ ಪ್ರವರ

ಮತ್ತೊಂದಾಗೆ ನವಮಿ ಆಗುತಿತ್ತೆ ಹೊರೆ ?

ಮುಳುಗಿಸಿದ ನಿನ್ನ ಬರಿ ಪ್ರೀತಿ ಆರಾಧನೆ ||

ಒಲವ ಸ್ವಾರ್ಥ ಗೀಳದು ಉತ್ಕಟ ನೋವೆ

ಗುಂಪಲೆಂತು ಪಡೆವೆ ಗೋವಿಂದನೊಲವೆ ?

ಬೇಕಿದ್ದರೆ ಬಾ ಗೋಕುಲದೆ ಕಾಯುವೆನೆಂದೆ

ಬರಲಾರದವನ ನಿಷ್ಠೆಯ ಪರಿ ತವಕ ಪರಿಕಿಸೆ ||

ಅವ ಬರಲಿಲ್ಲ ಕೈ ಸಿಗಲಿಲ್ಲ ನೀನಾದೆ ಒಂಟಿ

ಬಿಡಲಿಲ್ಲ ಕೈ ಹಿಡಿಯಲಿಲ್ಲ ಮಾತಲಷ್ಟೆ ಜಂಟಿ

ನಿಮ್ಮಿಬ್ಬರ ಕಥೆ ನಿಮಗೇ ಸರಿ ಅರ್ಥವಾಗದಲ್ಲ

ಒಪ್ಪಲೆಬೇಕು ಯುಗದಾಚೆಗು ಜನ ನಿಮ್ಮ ಮರೆತಿಲ್ಲ ! ||- ನಾಗೇಶ ಮೈಸೂರು

(Nagesha Mn)

(Picture source: Internet / social media received via FB friends – sorry, properly could not keep track who sent it, those who sent can mention in comment 😊)

01514. ರಾಧೆಗೆ ಬಾಧೆ, ಕೃಷ್ಣಗೆ ಶೋಧೆ !


01514. ರಾಧೆಗೆ ಬಾಧೆ, ಕೃಷ್ಣಗೆ ಶೋಧೆ !

_______________________________________

ಬಿಡು ಕಟ್ಟಬೇಡವೆ, ಕಾಲು ಕಟ್ಟಬೇಡವೆ, ರಾಧೆ..

ಗುಟುಕಿದ್ದಂತೆ ಸುಖವೆ, ಸಖಿ ಗುಟುಕಿರದೆ ಬಾಧೆ? ||

ಹೇಗೆ ಕಟ್ಟಲೊ, ಕೃಷ್ಣ ಕಟ್ಟದೆ ಹೇಗಿರಲೊ?

ಕೊಟ್ಟರೆ ನಿನಗೆ ಪ್ರೀತಿ, ಕೊಟ್ಟೆಯಲ್ಲ ಸಂದಿಗ್ದ ?||

ದೂರಬೇಡವೆ, ಮನಕೆ ತುಂಬಾ ಭಾರವೆ !

ಭೂಭಾರ ಘನಭಾರ, ನೀನಾದರು ಆಗಿಸೆ ಹಗುರ ||

ದೂರಿದಲ್ಲವೊ, ನಿನ್ನ ಹೊರೆಯ ಬಲ್ಲೇನೊ..

ಹೆಣ್ತನದೀ ಭೂಭಾರ, ಇನ್ನಾರಲಿ ಹೇಳಿಕೊಳಲೊ? ||

ಯಾರು ಅರಿತರೆ? ನನ್ನ ಮನಸ ನೀನರಿತ ಪರಿ..

ನಾನರಿತೂ ಅಸಹಾಯಕ, ಕೊಟ್ಟೆನಷ್ಟೆ ನವಿಲ ಗರಿ ||

ಕೊಟ್ಟೆಯೊ.. ಬಿಟ್ಟೆಯೊ.. ಬಿಡು ಬಿಡು ಹೋಗಲಿ

ಸುಮ್ಮನಿರು ಅರೆಗಳಿಗೆ, ಒರಗುವೆ ನಿನ್ನಾ ಮಡಿಲಲಿ ||

ಈ ಗಳಿಗೆ ಸುಖವಾಗಲೆ ಶಾಶ್ವತ, ನಿನ್ನವನೀ ಸಖ

ಜಗವೆಲ್ಲ ಮರೆತು ಮಲಗಿಬಿಡು, ಎಚ್ಚರದೆ ನಾನಿಲ್ಲ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)