01520. ರಾಧೆಯವಳೆತ್ತರದಾಳು..


01520. ರಾಧೆಯವಳೆತ್ತರದಾಳು..

________________________________

ಸ್ಪರ್ಶಿಸಲೆ ನಿನ ಪಾದ?

ಕಣ್ಣೀರಲೆ ತೊಳೆದು ಶುದ್ಧ

ಸಂತರ್ಪಿಸಲೆ ಅನುರಾಗ?

ರಾಧೆ, ನೀನಾದೆ ಅಂತರಂಗ ||

ಕಿರಿಯ, ನೀ ಹಿರಿಯಾಕೆ

ಹಿರಿಕಿರಿಯ ಗೊಡವೆ ಬೇಕೆ?

ನಿನ್ನರ್ಪಣ ಭಾವ ಚಿತ್ತ

ನೋಡೀ ಭುವಿದೇವನೂ ಸೋತ ||

ಕೆನ್ನೆಗೊತ್ತಿದೆನಲ್ಲ ಪಾದ

ಜುಳುಜುಳು ನದಿ ಕಣ್ಣೀರಾದ

ಭಾವದೆ ತೊಳೆದ ಪ್ರೇಮ

ಕುಳುಗುಟ್ಟಿ ಕಚಗುಳಿ ಸಂಭ್ರಮ ||

ನೀನದೆಷ್ಟು ನಿರಾತಂಕ

ಇನಿತೂ ಚಿಂತಿಸದ ನಿನ ಲೆಕ್ಕ

ಕೊಡು ಎಂದಾಗ ಕೊಟ್ಟೆ

ಪಾದವೊ ಪರವಶವೊ ಪರಾಕಾಷ್ಠೆ ||

ಕೊಡಲೇನ? ನಿರುತ್ತರ

ಶರಣಾದೆ ನಿನ ಪಾದದೆ ಪೂರ

ಓಲೈಸುವರೆಲ್ಲರು ನನ್ನ

ನಾನಾರಾಧಿಸುವೆ ಬರಿ ನಿನ್ನನ್ನ! ||

– ನಾಗೇಶ ಮೈಸೂರು

(Nagesha Mn)

(Picture source internet / social media received via Yamunab Bsy – thank you 😊👍🙏)

01519. ಏನಿದೇನು ರಂಗಿನಾಟ ?


01519. ಏನಿದೇನು ರಂಗಿನಾಟ ?

_____________________________

ಏನಿದೇನೆ ರಂಗಿನಾಟ ?

ರಾಧೇ, ನಿನಗೇನೀ ಚಟ ?

ನಾನಿಹೆನೆಂದು ಶ್ಯಾಮಲ ವರ್ಣ

ನೀ ಹಚ್ಚುವುದೇನೆ ನನದೆ ಬಣ್ಣ ? ||

ಸಾಕು ಸುಮ್ಮನಿರೊ ಮುರಳಿ

ತಾಳಲಾರೆ ಕೀಟಲೆ ಹಾವಳಿ

ನನ ಗೌರವರ್ಣ ಹೊಗಳುತಲೆ

ನೀ ಕಪ್ಪೆಂದರೆ ಹೇಗೆ ಸಹಿಸಲೆ ? ||

ಹುಚ್ಚಿ , ಅಂದುಕೊಳಲಿ ಬಿಡು

ಹಾಡಿ ನಲಿವ ಹೊತ್ತು ನೋಡು

ನನ್ನಂತರಂಗ ನಿನ್ನ ಗೌರ ವರ್ಣವೆ

ಮೀಸಲೆ ನಿನಗೆ ಕಪ್ಪಲಿ ಬಚ್ಚಿಟ್ಟಿಹೆ ||

ರಂಗಿನ ಲೆಕ್ಕ ನನಗಿಲ್ಲ ಮಾಧವ

ಲೆಕ್ಕಕಿಡೆನು ಛೇಡಿಸಲೆನ್ನ ಸ್ವಭಾವ

ನೀನೊ ಜೀವದ ಜೀವ ನನ ಭಾವ

ನಿನ್ನ ಹಂಗಿಸೆ ತಾಳದೊ ನನ್ನೀ ಜೀವ ||

ಬಿಡು ಸಖಿ ನೋಡೆಷ್ಟು ಮೋಹಕ

ಈ ವರ್ಣ ಭಂಗಿ ನಾಟ್ಯದ ಸುಖ

ಎಲ್ಲ ಮರೆತು ಕಟ್ಟುವ ನಮದೆ ಜಗ

ಕಪ್ಪ ಲೇಪಿಸೆ ಬಣ್ಣದೋಕುಳಿ ಸೊಗ ||

– ನಾಗೇಶ ಮೈಸೂರು

(Nagesha Mn)

(Picture source internet / social media : received via Madhu Smitha – thank you 🙏😊👍👌)

01518. ನೀ ನನಗೆ, ನಾ ನಿನಗೆ


01518. ನೀ ನನಗೆ, ನಾ ನಿನಗೆ

______________________________

ಇದು ಹೊಂದಾಣಿಕೆ ಬದುಕಕ್ಕ

ನೀ ಕೇರು ಮೊರದಲ್ಲಿ ಅಕ್ಕಿ

ಜೋಪಾನ ಚೆಲ್ಲೀಯೇ ನೆಲಕೆ

ಬಿದ್ದರು ನಾ ಆಯುವೆ ಮೇಯ್ವೆ ||

ಗೊತ್ತಕ್ಕ ತುತ್ತಿನ ಕೂಳು ತತ್ವಾರ

ಬದುಕಲ್ಲ ಸಾಹುಕಾರ ಮೊತ್ತ

ಕೊಡಲಿದ್ದು ಬಡವನ ಭಂಡಾಟ

ಮೊಂಡಾಟ ದೋಚುವ ಕೊಡದೆ ||

ಹೌದಕ್ಕ ನಿನ ನೆರಳಲ್ಲಿದೆ ಕೂಸು

ಪ್ರತಿ ಹೊಟ್ಟೆ ಸಂಭಾಳಿಸಬೇಕು

ನನಗು ನೆರಳಿದೆ ಮನೆಗೊಡೆಯ

ಚಿಳ್ಳೆಪಿಳ್ಳೆ ಹಸಿದು ಕಾಯೆ ದಾರಿಯ ||

ಬಿಡೆ ಚಿಂತೆ ಅಕ್ಕ ನನ್ನವಳು ಕಾವು

ಇಡುತಾಳೆ ಮೊಟ್ಟೆ ತಪ್ಪದೆ ದಿನದಿ

ಹಸಿದ ಕಂದಮ್ಮನಿಗುಣಿಸು ಅದನೆ

ಮಿಕ್ಕುಳಿದವು ಮರಿ ದಾರಿ ಸರಿಯೆ? ||

ನೀನುಂಡು ಮಿಕ್ಕಿದ್ದೆ ಸಾಕೆ ನನ್ನೊಡತಿ

ನಾನುಂಡು ನೀಡುವೆ ಮತ್ತೆ ನಿನಗೆ

ನಾನಾಗೆ ಬಾಡೂಟದ ಸರಕು ನಡುವೆ

ನನ್ನ ವಂಶಾವಳಿ ಮತ್ತದೆ ಹೊಂದಾಣಿಕೆಗೆ ||

– ನಾಗೇಶ ಮೈಸೂರು

(Nagesha Mn)

(Picture source – internet / social media received via FB friends – thanks!)

01517. ಕುಹೂ ಕುಹೂ ಕುಹೂ..


01517. ಕುಹೂ ಕುಹೂ ಕುಹೂ..

______________________________

ಕುಹೂ ಕುಹೂ ಕೋಗಿಲೆ

ಸುರಿಸೆ ನಿನ್ನಿಂಪಿನ ಸುರಿಮಳೆ

ದನಿಯಲ್ಲೆ ಹನಿಯ ಸಿಂಪಡಿಸೆ

ಕೇಳೆ ಕೂತಲ್ಲೆ ಮನ ಚಡಪಡಿಸೆ ! ||

ನೀನೆಳೆವ ರಾಗ ಮೋಹಕ

ಚಿಗುರೆಲೆ ಮೆಲ್ಲುತ ಚುಂಬಕ

ಕರೆದೆಯೇನೆ ಮಾತಿಗೆ ಸಖನ

ಮಾತೇ ಹಾಡಾಗೆ ಸೋಲದಿಹನಾ? ||

ನಡುನಡುವೆ ಬೇಕೆ ಮೌನ?

ಕಳೆದುಹೋಯ್ತೆ ಎಲ್ಲೊ ಧ್ಯಾನ

ಮೆಲ್ಲುವ ಹೊತ್ತಲಿ ಅಲ್ಪ ವಿರಾಮ

ಮತ್ತದೊ ಅನುರಣ ಬಂತೇ ಸಂಭ್ರಮ! ||

ಯಾಕೆಲ್ಲರ ಮನ ಸಹಚರ

ನಿನ್ನ ದನಿಯಂತಾಗೆ ಮಧುರ

ತವಕಿಸುತ ಇಂಚರದ ಗುನುಗು

ಸದ್ದಡಗಿಯು ನಿನ ರಾಗದ ಗುನುಗು ||

ಕಾಡಬೇಡ ನಿಂತರು ದನಿ

ಅನುರಣಿಸಿದೆ ಮನ ಸಂದಣಿ

ಅನುಭೂತಿ ದಿವ್ಯ ಗಂಧರ್ವ ಗಾನ

ಧನ್ಯವಾದ ನಿನಗೆ ಸುಖ ನೀಡಿದ ಕ್ಷಣ ||

– ನಾಗೇಶ ಮೈಸೂರು

(Nagesha Mn)

(Picture Source – https://kn.m.wikipedia.org/wiki/ಕೋಗಿಲೆ#/media/ಚಿತ್ರ%3AAsian_Koel_(Male)_I_IMG_8190.jpg)