01524. ತುಂಟ ಪೋರಿ..


01524. ತುಂಟ ಪೋರಿ..

______________________________

ತುಂಟಿಯವಳು ಜಗಳಗಂಟಿ

ಅಪ್ಪಿ ತಪ್ಪಿ ಹೆಣ್ಣಾದ ಜಗತಿ

ಗಂಡುಭೀರಿ ಬಜಾರಿಯವಳು

ಸೋಲದ ಜಾಯಮಾನ..! ||

ಕೈಲೊಂದು ಕೋಲ ಯಜಮಾನತಿ

ಬಾರಿಸೆ ನೋಡದೆ ಮುಖಾಮೂತಿ

ಗಂಡುಗಳೆ ಹೆದರಿ ತಾವಾಗಿ ಪರಾರಿ

ಹುಡುಗಿಯರ ತಂಡಕವಳದೇ ಸುಪಾರಿ..| ||

ಗೋಲಿ ಗಿಲ್ಲಿ ಲಗೋರಿ ಹುಡುಗರ ಜತೆ

ತಾನೆ ಓಡಿಸೊ ಚಕ್ಕಡಿ ಕಡಿಮೆ ಮಾತೆ?

ನಡುರಾತ್ರಿಯಲೊಬ್ಬಳೆ ಅಲೆದು ಬಹಳು

ಅವಳಾರ್ಭಟಕೆ ಸದ್ದಡಗಿ ಮೋಹಿನಿ ಖುದ್ಧು ||

ಗಂಡಂತಿಹಳು ಗಂಡಿನ ಹಾಗೆ ನಡೆನುಡಿ

ಹೆತ್ತವರ ಕಾಳಜಿ ತಾನೆ ಮಾಡುವಳಂತೆ

ಸಂಸಾರದ ಜತೆಯಲಿ ಹೊರಟರೆ ಪೇಟೆಗೆ

ಭೀಮಸೇನನಂತೆ ಕಾವಲು ಎತ್ತಿನ ಗಾಡಿಗೆ ||

ಅಲ್ಲವೆಂದಲ್ಲ ಮೃದುಲೆ ನಯನಾಜೂಕ ಲಲನೆ

ಹೊರಗಿನ ಕಾಠಿಣ್ಯ ಒಳಗಿರಿಸಿದೆ ಮೃದು ಹೃದಯ

ಕಷ್ಟಕೆ ಕರಗೊ ಮರುಗೊ ಕಣ್ಣೀರಿಡುವ ಹೆಣ್ಣುಜೀವ

ನೀಡಲೆಂತು ತೀರ್ಪು ಬರಿ ಹುಡುಗಾಟದ ವಯಸು ||

– ನಾಗೇಶ ಮೈಸೂರು

(Nagesha Mn)

(Picture source via internet / social media sent by Muddu Dear – thanks madam 🙏👍😊)

01523. ಸಾಕು ಬಿಡೆ ನಟನೆ…


01523. ಸಾಕು ಬಿಡೆ ನಟನೆ…

_______________________________

ನಟಿಸಬೇಡವೆ, ನಾಟ್ಯ ಮಯೂರಿ..

ಕಾದಂತೆ ನೀನು ಯಾರದೊ ದಾರಿ!

ನಟನವಾಡಿಬಿಡು ಇದೆ ರಂಗಮಂಚ

ತೆರೆದೆಲ್ಲ ನಿನ್ನ ರಂಗುರಂಗಿನ ಕುಂಚ ||

ಬರಲೆಂದು ಕಾಯೆ ವರ್ಷ ತುಂತುರು

ಚದುರಿದಾ ಮೋಡ ಕಟ್ಟಿ ತಹರಾರು?

ತಂದರೂ ಹಿಂಡಿ ಹಿಪ್ಪೆಯಾಗೆ ಜೋರು

ಕಾಯಬೇಡ ನವಿಲೆ ಭುವಿ ನಿನ್ನ ತೇರು ||

ನೋಡಲ್ಲಿ ಮಯೂರಿ ಕಾದಿಹಳೆ ದಾರಿ

ನೀ ಬಿಚ್ಚೆ ಗರಿಯ ತಾನಾಗಲೆ ಸಹಚರಿ

ನೀನಿಡಲು ಹೆಜ್ಜೆ ಲಯಬದ್ಧ ನಾಟ್ಯದಲಿ

ಸುತ್ತುವಳು ಸುತ್ತಲೆ ನಿನ್ನತ್ತ ಪ್ರೇಮದಲಿ ||

ಹಸಿರು ನೀಲಿ ಬೂದು ಕಪ್ಪು ಬಿಳಿ ಕಂದು

ತಪ್ಪುತಿದೆ ಲೆಕ್ಕ ಎಣಿಕೆ ಸಿಗದು ಬಚ್ಚಿಟ್ಟಿದ್ದು

ಬಿಚ್ಚಿಬಿಡು ಚಾಮರದಿ ಶೋಭಿಸಲಿ ನಕ್ಷತ್ರ

ಬಯಲಿಗಿಟ್ಟಂತೆ ಬಣ್ಣಬಣ್ಣ ಹೂವಿನ ಚಿತ್ರ ||

ಯಾರಿಟ್ಟ ವಿನ್ಯಾಸ? ಸಹನೆಯಲಿ ಕೂತು

ಸೃಷ್ಟಿಕರ್ತನೆ ಸ್ವತಃ ಜೋಡಿಸಿಹ ಸಾಬೀತು

ಮರುಳಾದ ಮಾಧವನೆ ಕದ್ದ ಮುಡಿಗೆಂದು

ಚಿಣ್ಣರು ಬಚ್ಚಿಡೆ ಪುಟದೆ ಮರಿ ಹಾಕಲೆಂದು ||

– ನಾಗೇಶ ಮೈಸೂರು

(Nagesha Mn)

(Picture Source – Internet / social media received via Yamunab Bsy – thank you 🙏😊👍)

01522. ವೈಕುಂಠ ಏಕಾದಶಿ..


01522. ವೈಕುಂಠ ಏಕಾದಶಿ..

______________________________

ವೈಕುಂಠದಲಿಂದು

ಕದ ತೆರೆವ ಹೊತ್ತು

ಉತ್ತರಾಯಣದತ್ತ

ಸಂಕ್ರಮಣಕೆ ಸನ್ನದ್ಧು ||

ತೆರೆದ ಬಾಗಿಲ ಕರೆ

ಏಕಾದಶಿ ದಿನದಲೆ

ಮುಕ್ಕೋಟಿ ದೇವರು

ಜತೆ ಭುವಿಗೆ ಬಂದರೆ ||

ಬಹ ಹರಿಯ ಕಾಣೆ

ಇಳೆಯೆಲ್ಲೆಡೆ ಸಾಲು

ದೇಗುಲವೆಲ್ಲ ಸರತಿ

ಜಾವದಿಂದಲೆ ಸೇರು ||

ಬೇಕೊಂದು ಸೇತುವೆ

ಧರಣಿ ಜತೆ ವೈಕುಂಠ

ಅದಕೆಂದೆ ಈ ನಂಟು

ಗಂಟು ಬಿಚ್ಚಿದರೆ ಪಾಲು ||

ಉಪವಾಸವಿದ್ದು ಸೇವೆ

ದಿನವೆಲ್ಲ ಪೂಜೆ ತಪನೆ

ವೈಕುಂಠದೊಂದು ಸ್ಥಾನ

ಬೇಕಿರೆ ಪಡುತ ಯಾತನೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Nandini Krishnakumar – thank you 🙏😊)

01521. ರಸಋಷಿಯ ನೆನೆದು…


01521. ರಸಋಷಿಯ ನೆನೆದು…

________________________________

ಗೂಗಲಿನಲಿ ಇಂದಾರೊ

ಬಂದರು ಮಹನೀಯರು !

ರಸಋಷಿಯೆಂದರಿನ್ನಾರೊ?

ವಿಶ್ವಮಾನವನಿಗಿತ್ತ ಬಸಿರು! ||

ಕನ್ನಡವೆನಲು ಕುಣಿ ಕುಣಿದು

ಕುಪ್ಪಳಿಸಿದೀ ಕವಿ ಹೃದಯ

ಎಲ್ಲಾದರು ಇರು ಎಂತಾದರು

ಕನ್ನಡಿ ಕನ್ನಡದಾ ಕಾವ್ಯಾಲಯ ||

ಮಲೆನಾಡಲಿ ಬೇರೂರಿ ನೆಲೆ

ಕೊಂಬೆ ಚಿಗುರೆಲ್ಲೆಡೆಗೆ ಹರಡೆ

ಪದಪದ ಕೃಷಿ ಕುಸುಮ ವೃಷ್ಟಿ

ಕಟ್ಟಿ ಕನ್ನಡಮ್ಮನ ಕೊರಳಿಗಿಡೆ ||

ಯಾವಜನ್ಮದ ಮೈತ್ರಿಗೊ ಮಾಣೆ

ಮಾನಸದಿ ನೆಲೆ ಕನ್ನಡದ ಹೆಮ್ಮೆ

ದೋಣಿ ಸಾಗಿ ದೂರ ತೀರ ಕಾಣೆ

ಕವಿಕಾವ್ಯ ಹುಟ್ಟಾಯ್ತದೆ ಹಿರಿಮೆ ||

ಬಿರುದು ಬಾವಲಿ ಬಿಡು ಅಲಂಕಾರ

ರೋಮಾಂಚನವಿತ್ತ ಸಾಹಿತ್ಯ ಸಾಗರ

ಚಿಗುರೊ ಹನಿಯೊ ಟಿಸಿಲಾಗಿ ಸಾವಿರ

ಪಸರಿಸಿದೆ ಕಂಪ ಹರಿಸಿ ಮಹಾ ಪೂರ ||

– ನಾಗೇಶ ಮೈಸೂರ

(Nagesha Mn)

(Picture source :today’s google doodle)