01582. ಗ್ರಹಣ ಹಿಡಿದಾಗ..


01582. ಗ್ರಹಣ ಹಿಡಿದಾಗ..

___________________________

ಖಗ್ರಾಸ ಗ್ರಹಣ

ಸುಗ್ರಾಸ ಭೋಜನ

ಮಾಡಿರಣ್ಣ ಕಣ್ಣಲೆ

ಬಾಯಿಗಿಟ್ಟು ಬೀಗ ||

ಚಂದ್ರ ನೀಲಿ ಚಿತ್ರ

ಕೆಂಪಾಗುತ ಅರುಣ

ಹುಣ್ಣಿಮೆ ಅವತಾರ

ಅಪರೂಪ ಸಂಭ್ರಮ ||

ಗ್ರಹಣಕೆ ಗ್ರಹಣ

ಹಿಡಿಸುವ ಸಂಭ್ರಮ

ನೋಡಬಹುದು ಬಾರದು

ಗದ್ದಲ ಗೊಂದಲ ಗೌಣ ||

ಅತಿಶಯದ ನೋಟ

ಶತಶತಮಾನದಂತರ

ಚಿಂತಿಸಬೇಡ ಮರುಳೆ

ಮಾಧ್ಯಮದೆ ಪುನರಾವರ್ತ ||

ನೋಡುತಲೆ ಗ್ರಹಣ

ಜ್ಞಾನಾಜ್ಞಾನ ಸಂವಾದ

ಮೌಢ್ಯ ನಂಬಿಕೆ ಒರೆಗೆ ಹಚ್ಚದೆ

ಸುಮ್ಮ ಮೆಚ್ಚಲಾಗದೆ ಸೊಗಡ? ||

– ನಾಗೇಶ ಮೈಸೂರು

೩೧.೦೧.೨೦೧೮

(Photo credit: Nagaraj Subba Rao – thanks a lot Nagaraj 👍👌🙏😊)

01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ


01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ

ಮಂಕುತಿಮ್ಮನ ಕಗ್ಗ ೮೩ ರ ಮೇಲಿನ ನನ್ನ ಟಿಪ್ಪಣಿ..

https://www.facebook.com/story.php?story_fbid=1118406378295835&id=640670512736093&notif_id=1517279530220212&notif_t=notify_me_page&ref=notif

01580. ನಾವೆ, ಇದು ನಾವೆ..!


01580. ನಾವೆ, ಇದು ನಾವೆ..!

_______________________________

ಮುರಿದು ಬಿದ್ದ ನಾವೆ

ನಾವೆ ಕುಸಿದು ಬಿದ್ದರು..

ಮುಕ್ಕಾಗಿ ಮುರಿದರೇನು

ದಡಕದನೆ ಬಾಗಿಲಾಗಿಸುತ ||

ಕೊಳೆಯುತ ಅವಶೇಷ

ಮಂಕಾದರೇನು ಸ್ವಗತ

ತುಸುತುಸೆ ಉದುರಾಟ

ಇದ್ದಷ್ಟು ದಿನ ಉಸಿರಾಟ ||

ಯಾರಾರಿಗೊ ಬೀಡಾಗಿ

ಅಶನ ವಸನ ನೆಲೆಯು

ಬೇಡದೆ ಬಾಡಿಗೆ ವಾಸಕೆ

ಒಡೆಯನಿಲ್ಲ ಒಡೆಯರೆಲ್ಲ ||

ಮೀನ ಬೇಟೆ ಹವ್ಯಾಸಕೆ

ತುಂಬೆ ಬುಟ್ಟಿ ನನ್ನೊಡಲು

ಬಲೆ ಬೀಸಿ ಗೆದ್ದ ಜೋಡಿಗೆ

ಪ್ರಣಯದಂಗಳ ಗುಟ್ಟಿನಲಿ! ||

ನಶಿಸಿದರೇನಲ್ಲಿ ನಾವೆ

ಮಣ್ಣಲ್ಲಿ ಮಣ್ಣಾಗಿ ಕಾಯ

ಪೋಷಿಸೆ ಮತ್ತದೆ ಪ್ರಕೃತಿ

ಮತ್ತೆ ನಾವೇರುವ ನಾವೆ ||

– ನಾಗೇಶ ಮೈಸೂರು

(Nagesha Mn)

(Photo source: 3K namma chitra nimma kavana)

01579. ಅರ್ಧನಾರಿ…


01579. ಅರ್ಧನಾರಿ…

________________________

ಇವಳು ಅರ್ಧನಾರಿ

ಕಾಣುವರ್ಧ ಬಹಿರಂಗ

ಚಂದದ ಸಿಂಗಾರ ಬೊಟ್ಟು

ಬಣ್ಣದ ತುಟಿ ಬಿಡದು ಗುಟ್ಟು ! ||

ಕಾಣುವರ್ಧ ಮಾಯೆ

ತಪ್ಪಿಸಲೆಂತು ಆಕರ್ಷಣೆ?

ಕಣ್ಣೋಟದ ಬಲೆ ಕೆಡವೆ ಖೆಡ್ಡ

ಶರಣಗತ ಪುರುಷ ಅವಳ ಅಡ್ಡಾ ! ||

ಕಾಣದರ್ಧ ನಾರೀಶ್ವರ

ಆಗಿರಬಹುದು ಪುರುಷಚಿತ್ತ

ಮೀನಹೆಜ್ಜೆ ನದಿಮೂಲ ಕಡಲಾಳ

ಅವಳಲೆ ಸಮಷ್ಟಿತ ಅದೃಶ್ಯ ಸ್ವರೂಪ ||

ಜಗದೆಲ್ಲವಲ್ಲೆ ಅಂತರ್ಗತ

ಚಂಚಲ ಚರ ಪ್ರಕೃತಿ ಚಲನೆ

ಸ್ವಾರ್ಥ ಕುಟಿಲ ಕುಹಕ ಮೋಹಕ

ಪ್ರೀತಿಯ ಜಾಡಲಿ ಮಿಕ್ಕೆಲ್ಲವು ಧ್ವಂಸ ! ||

ಬಿಡು, ಅವಳನರಿತವರಾರಿಲ್ಲಿ

ಆ ಶಿವನೆ ಅರ್ಧ ನಾರೀಶ್ವರನಾದ

ಅರಿವ ಕುತೂಹಲಕೊಂದಾದರು ಇಲ್ಲ

ವ್ಯರ್ಥಸಾಹಸ ಯಾರಿಗು ಜಯವಿಲ್ಲ ಇನ್ನೂ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Madhu Smitha – thank you 🙏👍😊)

01578. ನಮ್ಮ ನಿಮ್ಮ ನಡುವಿನ ಕಥನ


01578. ನಮ್ಮ ನಿಮ್ಮ ನಡುವಿನ ಕಥನ

_____________________________________

ಎಲೆ ಮರೆಯಲ್ಲೊಂದು ಕಾಯಿ

ಕೈ ಬೆರಳನದ್ದೆ ಭಾವನೆ ಶಾಯಿ

ಬರೆದವೆಷ್ಟೊ ಮನಗಳ ತಪನ

ನಮ್ಮಾ ನಿಮ್ಮ ನಡುವಿನ ಕಥನ ||

ಬರೆವೆನೆಂಬ ತುಡಿತದ ಬಾಲ

ಬರವಣಿಗೆ ಭಟ್ಟಿ ಇಳಿಸೊ ಕಾಲ

ಮೂಡಿಸದೆ ಮೂಡಣದ ಸಾಲು

ಪದವಾಗುತ ಕುಣಿಸುವ ತೆವಲು ||

ಸಂಕೋಚ ಬಿಗಿ ಕೋಶದ ಭಿತ್ತಿ

ಗೊತ್ತಾಗದಂತೆ ಹೊದಿಕೆ ಸುತ್ತಿ

ಒಳಗೊಳಗೇನೊ ಭೀತಿ ಪ್ರವೃತ್ತ

ಮೀರಿಸಲದ ಪದವಾಗ ನಿವೃತ್ತ ||

ಹೆಸರಾಗಿಬಿಡೊ ಕನಸುಗಳ ಆಸೆ

ಆಗದು ಹೋಗದು ತಡೆದ ನಿರಾಸೆ

ಕುಗ್ಗಿಸಿ ಜಗ್ಗಿಸಿ ತಗ್ಗಿದುತ್ಸಾಹ ಶೂನ್ಯ

ಮತ್ತೆಲ್ಲಿಂದಲೊ ಬಡಿದೆಬ್ಬಿಸಿ ಕ್ರಿಯಾ! ||

ಎಲ್ಲರ ಕಥೆಯ ಪಲುಕಿದೆ ಪಲ್ಲವಿ

ಅಲ್ಲಿಲ್ಲೊಂದು ಹಣ್ಣಾಗುತಲಿ ಸವಿ

ಹೂವೊ ಹಣ್ಣೊ ಪಾಲಿನಲಿಹ ಭಾಗ್ಯ

ನಿನ್ನ ಪಾಡಿಗೆ ನಿನ್ನ ಕರ್ಮವಿರೆ ಸೌಖ್ಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01577. ಹೋರಾಟ..


01577. ಹೋರಾಟ..

________________________

ತೊಟ್ಟಿಕ್ಕುತಿದೆ ಕಂಬನಿ

ಮುತ್ತಿಕ್ಕುತ ಲಲ್ಲೆ ಚುಂಬನ

ಹರಿದ ಧಾರೆ ನದಿಯಲ್ಲ

ಮುತ್ತಿಗೆ ಕದನವೆನ್ನುವುದಿಲ್ಲ ! ||

ಒಡ್ಡಿದ ಕೈಯಲ್ಲೆ ಭೂಪಟ

ಸ್ವತಃ ಬರೆಸಿಕೊಂಡ ಚಿತ್ರಪಟ

ಹಣೆಬರಹದ ಗೆರೆ ಕಾಣದು

ಕಂಡ ಹಸ್ತ ಬದುಕ ಬದಲಿಸದು ||

ಗೆರೆಗಟ್ಟಿದ ನೆರಿಗೆ ಹಣೆಗೆ

ಮುಚ್ಚಲಷ್ಟು ವಿಭೂತಿ ನೊಸಲಿಗೆ

ಉದುರುವ ಹುಡಿ ಭಸ್ಮದಲಿ

ಸುಡಲಾಗ ಸಕಲ ಜನ್ಮದ ಕರ್ಮ ||

ಗೋಳಾಟದ ಬಾಳ ಬವಣೆ

ಮಂದಹಾಸ ಬಚ್ಚಿಟ್ಟ ಪರಿ ಕಾಣೆ

ಹೋರಾಡು ತಲೆ ಬದುಕಲ್ಲಿ

ಬದುಕಾಗ ಬರಿ ಭಾವದಮಲಲಿ ||

ದ್ವಂದ್ವದಲದೆ ಗುದ್ದಾಟ ತೆನೆ

ಸದ್ದ ನಡುವೆ ಬೆಳೆ ಸತ್ವ ಶೋಧನೆ

ಖಾಲಿ ಸಡಗರ ವ್ಯರ್ಥಾಲಾಪ

ಪೂರ್ಣವಾಗ ಬಿತ್ತಿ ಬೆಳೆದ ಸ್ವರೂಪ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01576. ಕಾಡುವ ಪರಿ..


01576. ಕಾಡುವ ಪರಿ..

_______________________

ಕಾಡಲಿ ಕನಸಲ್ಲಿ

ಕಾಡುವವನ ಕನಸು

ಕಾಡಿಸಿರೆ ಮೈಯ ಪುಳಕ

ಕಾಡಲಿ ತನುವಾಗಿ ಜಳಕ! ||

ಕಾಡಲಿ ಬಂದಪ್ಪುತ

ಕಾಡಿಸಿರೆ ಅಪ್ಪಿದ ಹಸ್ತ

ಕಾಡಾಗುತ ಮನ ವಿಹರಿ

ಕಾಡಿದವನಪ್ಪುಗೆ ಆಭಾರಿ !||

ಕಾಡುವಾಟ ಬೆನ್ನಟ್ಟುತ

ಕಾಡಿರಲವ ಬೆನ್ನಲ್ಲಪ್ಪುತ

ಕಾಡದಿರದೆ ಬೆಸೆದ ಹಸ್ತ?

ಕಾಡೆ ಬಳಸಿದ ತೋಳರ್ಥ! ||

ಕಾಡುವದೆ ಮುಂದೆ

ಕಾಡಲಿ ಹುಡುಕಾಡುತ

ಕಾಡಿಸಿರೆ ಸ್ಪಂದನ ಸ್ಪರ್ಶ

ಕಾಡೊಳಗ ಅವ್ಯಕ್ತ ಹಿತ ! ||

ಕಾಡದೆ ಬಿಡನವನು

ಕಾಡಿದ್ದು ಸಾಕೆನಿಸದಲ್ಲ

ಕಾಡಿನೊಳಗ್ಹೊಕ್ಕು ಕಲೆತು

ಕಾಡಿ ಪ್ರಕೃತಿಗಾಗೆ ಪುರುಷ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 🙏👍😊)