01537. ಯಾಕಿನ್ನು ಬಂದಿಲ್ಲ..?


01537. ಯಾಕಿನ್ನು ಬಂದಿಲ್ಲ..?

_________________________________

ನಿನ್ನೆ ಹೊಸದಿಗಂತದ ಭಾನುವಾರದ ಎಡಿಷನ್ನಿನ ‘ ಕಾವ್ಯ ಕಾಲ’ ವಿಭಾಗದಲ್ಲಿ ನನ್ನದೊಂದು ಕವನ ‘ಯಾಕಿನ್ನು ಬಂದಿಲ್ಲ‘ ಪ್ರಕಟವಾಗಿದೆ! ವರ್ಷದ ಕೊನೆಗೊಂದು ಅರ್ಥಪೂರ್ಣ ಮುಕ್ತಾಯ😍😍

ಅದರ ಮುಖ್ಯ ಪ್ರೇರಣೆಯಾಗಿ ಪ್ರಕಟಿಸಲು ಕಾರಣಕರ್ತರಾದ ‘Chandravathi Baddadka‘ ರವರಿಗೆ ಹೃತ್ಪೂರ್ವಕ ನಮನಗಳು🙏🙏! ಹೊಸ ದಿಗಂತದಲ್ಲಿ ಪ್ರಕಟಿಸಿದ ಸಂಪಾದಕ ಮಂಡಳಿಯ ನಯನ ರಾವ್ ರವರಿಗೆ ಧನ್ಯವಾದಗಳು 🙏🙏

ಯಾಕಿನ್ನು ಬಂದಿಲ್ಲ..?

_________________________________

ಎಷ್ಟು ದಿನಗಳಾಯ್ತೊ ಮುಡಿಗೆ

ಹಿಡಿ ತುಂಬಾ ಮಲ್ಲಿಗೆ ತಂದು ?

ಹೂ ಮುಡಿಸುತಿದ್ದ ಕರಗಳೇಕೊ

ಬಿಡುವಿಲ್ಲದ ದುಡಿತದೆ ಅವಿರತ ||

ಪಸರಿಸುತಿತ್ತು ಇಡಿಯಾಗಿ ಘಮಿಸಿ

ಅಧಿಗಮಿಸಿ ಖಾಲಿ ಜೋಬಿನ ಚಿತ್ತ

ನಕ್ಕಿತ್ತೊ ನಗಿಸಿತ್ತೊ ಶಿರದಲಿ ಖುದ್ದು

ಕಾಲ ಕಾಲವಾಯ್ತೆ ನಿಂತಲ್ಲೆ ನಿಂತು ? ||

ಮೊಲ್ಲೆ ಜಾಜಿ ಸಂಪಿಗೆ ಸೇವಂತಿಗೆ

ಯಾರಿಗೆ ಬೇಕಿತ್ತೊ ಹೆಸರಿನ ಗೊಂದಲ?

ನೀ ತಂದೆ ನಾ ಮುಡಿದೆ ಉಲ್ಲಾಸದೆ

ಉಕ್ಕುವ ಉತ್ಸಾಹ ಮಾಡಿಸಿತ್ತ ಅಡಿಗೆ ||

ಖಾಲಿ ಖಾಲಿ ದಿನಗಳವು ದಿನಸಿಗು

ಪಾತ್ರೆಗಳೂ ಪಾತ್ರಗಳಾಗಿ ನಟಸಿತ್ತೆ

ನಕ್ಕ ನಗೆ ಮಾತ್ರ ನಟನೆಯಾಗಿರಲಿಲ್ಲ

ಈಗೆಲ್ಲಾ ಬರಿ ನಟನೆಯೆ ಬದುಕೆಲ್ಲ ||

ಐಷಾರಾಮಿಬದುಕಿತ್ತು ಕೂರಿಸಿಬಿಟ್ಟೆ

ಮಾಡಲಿಲ್ಲ ಕೆಲಸ ನೋಟದ ಗಮ್ಮತ್ತು

ಯಾಕಿನ್ನು ಬರಲಿಲ್ಲ ಘಂಟೆ ಹತ್ತಾಯ್ತು

ತರಬಾರದೆ ಬಾಡಿದ ಹೂ ಸಿಗಬಹುದು? ||

– ನಾಗೇಶ ಮೈಸೂರು

01536. ನಿನ್ನ ನೀ ನೋಡಿಕೊ ಮೊದಲು


01536. ನಿನ್ನ ನೀ ನೋಡಿಕೊ ಮೊದಲು

___________________________________

ನಿನ್ನ ನೀ ನೋಡಿಕೊ ಮೊದಲು

ನಿನ್ನ ಮನದ ಕನ್ನಡಿಯಲ್ಲಿ

ಬಿಡು ಅಲ್ಲಿಲ್ಲಿ ಇಣುಕುವಾಟ

ನಿನ್ನಂತೆ ಇಣುಕುವರು ನಿನ್ನಲಿ ||

ನಿನ್ನದಿದೆ ಎಲೆ ನಿನದೆ ಊಟ

ನಿನ್ನ ಜಗದಗಲ ವಿಸ್ತಾರ

ಸುತ್ತ ಚಿಮುಕಿಸು ನೀರ ಬೇಲಿ

ನಮಿಸಿ ಭುಜಿಸು ನಿನ್ನಾಹಾರ ||

ನಿನ್ನದಿದೆ ನೂರೆಂಟು ತಪನೆ

ನಿನದೆ ಕಗ್ಗಂಟು ತಾಪತ್ರಯ

ನಿನದೆ ಸೂಜಿ ನಿನದೆ ದಾರ

ಹಚ್ಚೆ ತೇಪೆಯಾಗಿ ಅಲಂಕಾರ ||

ನೀ ಕಾಣದ ನಿನ್ನದೆ ಬೆನ್ನು

ಕಾಣುವರೆಲ್ಲ ಜಗದ ಮಂದಿ

ಹೊದಿಕೆಯೊ ಬಯಲಾಟವೊ

ಬೆನ್ನ ಬಿಟ್ಟುಬಿಡು ಅವರಿವರ ||

ನಿನ್ನೊಳಗನರಿಯದ ಹಸುಳೆ

ನೀನಾಗಲೆಂತು ಬೋಧಕ ?

ನೀನಾಗದೆ ಹುಸಿ ಬೊಗಳೆ

ನೀನಾಗು ನಿನ್ನೊಳಗೆ ಸಾಧಕ ||

– ನಾಗೇಶ ಮೈಸೂರು

೩೧.೧೨.೨೦೧೭

(ಚಿತ್ರಕೃಪೆ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಗೆಳೆಯರಿಂದ ಸಂಗ್ರಹಿತ/ರವಾನಿತ ; ಮೊದಲನೆಯ ಚಿತ್ರ ಶ್ರೀಧರ ಬಂಡ್ರಿಯವರ ಲಲಿತಸಹಸ್ರನಾಮ ಪೋಸ್ಟಿನಿಂದ ಎರವಲು ಪಡೆದಿದ್ದು)

01535. ಇದು ಸ್ವಚ್ಚ, ಇದು ಅಮಲ…


01535. ಇದು ಸ್ವಚ್ಚ, ಇದು ಅಮಲ…

___________________________________

ಇದು ಮಹಲೊ?

ಇದು ಬಯಲೊ?

ಬಯಲೊಳಗಾಲಯವೊ?

ಆಲಯದಲಿಹ ಬಯಲೊ? ||

ಇದು ಭವನ ಸುಂದರಿ

ಇದು ಭುವನ ಲಹರಿ

ಭೂವನವಿದರಲ್ಲಿದೆ ನಿಸರ್ಗ

ಬಿಚ್ಚಲದು ತಂತಾನೆ ಸ್ವರ್ಗ ||

ಇದು ಗೋಪುರ ಭಾಸ

ನಭ ನಂಟಿನ ವಿನ್ಯಾಸ

ಸ್ವಚ್ಚ ಅಮಲ ಚೆಲ್ಲಿದೆ ಪ್ರಕೃತಿ

ಕಂಡಿತೇನಿನಿತಾದರು ವಿಕೃತಿ? ||

ಮುಂಗುರುಳ ಪ್ರಶಾಂತ

ಹಿಂದಲೆ ನಿಗೂಢ ಮೂರ್ತ

ಕಂಡಿದ್ದೆಲ್ಲ ಸ್ಪುಟವೊ ದಿಟವೊ

ಕಾಣದ್ದೆಲ್ಲ ವಿಸ್ಮೃತಿಯ ಪಟವೊ ||

ಏನಿದೆ ಇಲ್ಲಿ, ಕಾಡು?

ಏನಿಲ್ಲದ ಖಾಲಿ ಮೇಡು

ಒಳಗಣ್ಣ ಬಿಚ್ಚಿದರೆಲ್ಲ ಅಂತರ್ಗತ

ನಿಜ ಮಾದರಿ ಇದೆ ಸ್ವಚ್ಚ ಭಾರತ ||

– ನಾಗೇಶ ಮೈಸೂರು

(Nagesha Mn)

(ಚಿತ್ರ : ಸ್ವಯಂಕೃತಾಪರಾಧ)

01534. ಕಾಲದ ಮರಳು


01534. ಕಾಲದ ಮರಳು

__________________________

ಹಿಡಿ ಹಿಡಿದಷ್ಟೆ ಕಾಲದ ಮರಳು

ಮರಳುವುದು ಮರಳಿ ಗೂಡಿಗೆ

ಸಂದಿಗೊಂದಿ ರಾಜವೀಧಿ ಹಾದು

ಗಳಿಗೆ ಗಂಟೆ ಕ್ಷಣ ಕಳೆದು ವಿದಾಯ ||

ಹಿಡಿಯಲ್ಲಿದೆ ಎಲ್ಲ ಹಿಡಿಯಲಿಲ್ಲ

ಹಿಡಿಯಲಿ ಬಿಡಲಿ ನಿಲ್ಲದ ಸರದಾರ

ಮುಷ್ಟಿ ಸಮಷ್ಟಿ ಅಸ್ಪಷ್ಟ ಅನುಭವ ಗಮ್ಯ

ಲೆಕ್ಕಾಚಾರ ತಪ್ಪದೆ ನಿತ್ಯ ಜಾರುವ ಗಣ್ಯ ||

ಮರಳ ಕಣ ಕಣ ನಿನ್ನ ಖಾತೆಗಾಗಿ ಜಮೆ

ಬಳಸು ಬಿಡು ಲೆಕ್ಕಿಸದೆ ಖರ್ಚಾಗೊ ದ್ರವ್ಯ

ಬಳಸಿದರುಚಿತ ಕಳೆದು ಹೋಗುವ ಖಚಿತ

ಹಂಚಿ ಸರಿಸಮನೆಲ್ಲಗು ನಿಸ್ವಾರ್ಥ ಖಜಾನೆ ||

ವಿಸ್ಮಯ ಶಕ್ತಿ ಸಂಚಯ ಮರಳುಗಾಡು

ಮೊಗೆದಲ್ಲಿಂದಲ್ಲಿಗೆ ಸುರಿವ ಸೊಗಡು

ಸರಿದಿದ್ದು ಭೂತ ಮೊಗೆದದ್ದಲ್ಲೆ ಪ್ರಸ್ತುತ

ಮಿಕ್ಕಿದ್ದು ಭವಿತ, ನೆರಳಷ್ಟೆ ಜನುಮದ ಕರ್ಮ ||

ಕೈಗೆ ಸಿಕ್ಕರು ಸಿಗದಲ್ಲ, ಸಿಕ್ಕಿದ ಕಣ ನಿನದಲ್ಲ

ನಿನ್ನ ಲೆಕ್ಕದಲೆಲ್ಲ ಬರೆದು ಜರುಗೊ ನೆರಳು

ಸದ್ವಿನಿಯೋಗ ದುರ್ವಿನಿಯೋಗ ನಿನಗಿಹ ಸ್ವೇಚ್ಛೆ

ಮೊಹರುಳಿಸೆ ಇತಿಹಾಸ ತಪ್ಪೆ ಕುರುಹಿಲ್ಲದೆ ಮಾಯ ||

– ನಾಗೇಶ ಮೈಸೂರು

೩೧.೧೨.೨೦೧೭

(Photo credit / Photo right belongs to: @Mayush Jain, Thank you and happynew year 2018)

01533. ಕುಪ್ಪಳಿ ಸುತ್ತ ಕುಪ್ಪಳಿಸುತ್ತ..


01533. ಕುಪ್ಪಳಿ ಸುತ್ತ ಕುಪ್ಪಳಿಸುತ್ತ..

_____________________________________

ದಣಿಯದೆ ಕುಣಿದು ಕುಪ್ಪಳಿಸಿ

ದನಿಗಿತ್ತ ಪದಗಳುರವಣಿಸಿ ಸ್ರವಿಸಿ

ಕುಣಿದಾಡಿತೊ ಕವಿ ಮನ ನಿಂತಲ್ಲೆ

ಕಟ್ಟುತ ಹೂದಂಡೆ ಕವನದ ಮಾಲೆ ||

ಬಯಲಿಗಿಟ್ಟ ಗುಡ್ಡವೊ ಬಯಲೊ

ಬಯಲಾಗದ ಬಯಕೆಯ ಬಸಿರೊ

ಕಾನನ ಸ್ಪರ್ಶ ಗಿರಿ ವೃಕ್ಷ ಸಮೂಹ

ಬೀಡು ಬೇರೂರಿದ ವಸತಿ ಸಮ್ಮೋಹ ||

ಗಾಢಾಂಧಕಾರ ತುಂಬಿಸಿ ಭೀತಿ

ಸುತ್ತುವರಿದ ಪಶು ಪಕ್ಷಿ ಪ್ರವೃತ್ತಿ

ಭೂತ ಪ್ರೇತ ಕೊಳ್ಳಿ ದೊಂದಿಲಲಿ

ಬದುಕ ನಿಗೂಢ ಕಟ್ಟಿ ಕಥನ ಲಾಲಿ ||

ಬಿರು ಬಿಸಿಲ ಬೆವರಿಳಿಸುವ ಕರ್ಮ

ಬೆವತ ಬಾನು ಇಳೆಗಿಳಿವ ಸಂಭ್ರಮ

ಬೆಂಕಿಯೆದುರು ಹೊದ್ದು ಕೂತ ಚಳಿ

ವಿಸ್ಮೃತಿಯ ಜಗ ಸಹಜದೆ ಕವಿ ಚಾಳಿ ||

ಕೂತಲ್ಲೆ ಜಗುಲಿ ನಿಲದ ಮಳೆಯಲಿ

ನಿರಂತರ ಸದ್ದೆರಚಿದಾ ತುಂತುರಲಿ

ಸಡ್ಡೊಡೆದು ಬರೆಯಬೇಕಿದೇ ಕವನ

ಬರೆಯದೆಬಿಟ್ಟದ್ದ ಹುಡುಕಲದೆ ತಾಣ ||

– ನಾಗೇಶ ಮೈಸೂರು

(Nagesha Mn)