01539. ಹೆತ್ತಳಾ ತಾಯಿ!


01539. ಹೆತ್ತಳಾ ತಾಯಿ!

_________________________

ಹೆತ್ತಳಾ ತಾಯಿ

ಅಡಿಯಿಂದ ಮುಡಿವರೆಗೆ

ಸರ್ವಾಭರಣ ತೊರೆದು

ಬರಿ ಮಕ್ಕಳನೆ ಹಡೆದು ||

ಗಂಡಾರೊ ಹೆಣ್ಣಾರೊ

ಲೆಕ್ಕ ಸಿಗದು ಲೆಕ್ಕಿಸದೆ

ಉಕ್ಕಿದರು ಒಡಲಾಳ

ಹೆಕ್ಕಿ ಬಗಲಿಗಿಟ್ಟುಕೊಂಡು ||

ಒತ್ತೊತ್ತಾಗಿ ನಿಭಿಡ

ಯಾರಣ್ಣ ತಮ್ಮ ಅಕ್ಕ ತಂಗಿ

ಸಹಯೋಗದಲೆಲ್ಲ ಭೋಜ್ಯ

ಒಬ್ಬರಿಗೊಬ್ಬರ ಹೆಗಲ ಭಾಜ್ಯ ||

ವಸುಧೆಯೊಡಲ ಚಿಗುರು

ವಸುಧೇಕ ಕುಟುಂಬ ಶುದ್ಧ

ಯಾರಾವ ದುಂಬಿಯ ಕೊಸರೊ

ಯಾರಾವ ಹೂವಿನ ತವರೊ ||

ಕಾಯಾಗಿ ಹಣ್ಣಾಗುವ ಹೊತ್ತು

ಕಾಣುವುದೆಲ್ಲರ ಗಮನದೆ

ಬೆಳೆವ ಸಂಕಟ ಬರಿ ನಮದೆ

ಬೆಳೆದಾಗ ಮೂಗಿಗೆ ಬೆರಳು ||

ನಿರೀಕ್ಷೆಗಳಿಂತೆ ಬದುಕಲಿ

ಪರಿಕಿಸುತ ಫಲ ನೀಡಲದು

ಎಲ್ಲರಿಗಿಲ್ಲದ ಸಹಜ ಭಾಗ್ಯ

ಪಾಲಿಗೆ ಬಂದ ಪಂಚಾಮೃತ ||

– ನಾಗೇಶ ಮೈಸೂರು

(Nagesha Mn)

(Picture by: Chandrashekar Hs – thank you 😊🙏👍👌)