01547. ಚೆಂದ ಸಮ್ಮೇಳನ


01547. ಚೆಂದ ಸಮ್ಮೇಳನ

____________________________

ಗೊತ್ತೆ ಆಗಿರಲಿಲ್ಲ

ಮಲ್ಲಿಗೆಯ ಸೊಗವೆಷ್ಟೆಂದು

ನಿನ್ನ ನಗೆ ಮಲ್ಲಿಗೆಯ

ಕಣ್ಣಾರೆ ಕಾಣುವ ತನಕ..||

ಅರಿವಿಗೆ ನಿಲುಕಿರಲಿಲ್ಲ

ಪೂರ್ಣಚಂದ್ರನ ಸೊಗಡು

ನಿನ್ನ ವದನದ ಚಂದ್ರಿಕೆ

ಮಿನುಗಿ ಕಣ್ತುಂಬುವ ತನಕ..||

ಎಣಿಕೆಗೆ ನಿಲುಕಿರಲೆ ಇಲ್ಲ

ತಿದ್ದಿ ತೀಡಿದ ಸೊಬಗು

ಬೊಗಸೆ ಕಣ್ಣಾಗಿ ಚೆಲುವು

ಚಿಗರೆಯಂತೆ ಕಾಡುವ ತನಕ..||

ಇನ್ನೆಲ್ಲೂ ಕಂಡಿರಲೆ ಇಲ್ಲ

ನಾಸಿಕದಲದೆಂತ ಮಾಯೆ!

ನಗುವಿಗಿಟ್ಟ ಚಾಮರ ನೆರಳು

ತಂಪೆರೆದು ತಣಿಸುವ ಛಾಯೆ.. ||

ಹೊನಲಂತಿಹ ಮುಗುಳುನಗೆ

ಬಚ್ಚಿಡಲ್ಹವಣಿಸೊ ಅಧರ

ಕೆಂಗುಲಾಬಿ ನೆನಪಿಸಿತಲ್ಲ

ಅಂದದ ಕದಪಿಗೆ ಚಂದದ ಗಲ್ಲ ..! ||

ತೋರಿ ಚತುರಮತಿ ಕುರುಹ

ವಿಶಾಲ ಲಲಾಟದ ಆಕರ್ಷ

ಕೇಶವೊತ್ತಾಗಿ ಶಿಸ್ತಿನ ಮೊತ್ತ

ಆಲಿಸಿ ಒಲೈಸೊ ಕರ್ಣ ಸೂಕ್ತ..||

ಮಾತಾಡದ ಚಿತ್ತಾರ ಮುಕುಟ

ಮಧುರ ಮಾತಾಗಿ ಪ್ರತಿಧ್ವನಿ

ನಗೆಯ ತುಂತುರಾಗಿ ಸಿಂಚನ

ಲಲನೆಯಿವಳಲ್ಲವೆ ರೋಮಾಂಚನ ? ||

ಪ್ರಶ್ನೆಯಿತ್ತು ಕುಸುಮವಿಹುದು ಹೇಗೆ?

ಗೊತ್ತಾಯ್ತು ಹೀಗೆ, ಈ ನಗುವಿನ ಹಾಗೆ !

ಯಾರಿಗೆ ಯಾರಿತ್ತರೊ ಎರವಲು ಕಾಣೆ

ನುಡಿಸಿದೆ ಸುಮಧುರ ಭಾವದ ವೀಣೆ! ||

– ನಾಗೇಶ ಮೈಸೂರು

(Nagesha Mn)

(Picture source – internet / social media – the second one has artists signature on the picture)

01546. ತಂಡುಲ ಚೆಲ್ಲಾಡಲಿ..


01546. ತಂಡುಲ ಚೆಲ್ಲಾಡಲಿ..

_________________________

ಒದ್ದುಬಿಡೆ ಒಳಗಿಟ್ಟು ಬಲಗಾಲ

ಚೆಲ್ಲಾಡಿ ಹೋಗಲಿ ಸುತ್ತ ತಂಡುಲ

ಕಾಳು ಕಾಳು ಬಿಡಿ ಮಲ್ಲಿಗೆಯಾಗಿ

ಅರಳಲವ್ವ ಕಾಲಿಟ್ಟ ಮನೆ ತುಂಬಾ ||

ಕಾಲ್ಗುಣ ನಿನದಾಗಲಿ ಸಮೃದ್ಧ

ಅಶನವಸನಕಿರದಂತೆ ಕೊರತೆ

ತುಂಬಿ ತುಳುಕೊ ಐಸಿರಿಯಾಗೆ

ಪಸರಿಸುತೆಲ್ಲೆಡೆ ನೆಮ್ಮದಿ ಸೊಬಗೆ ||

ನೀನಾಗಿರೆ ತಂಡುಲದಂತೆ ಗಟ್ಟಿ

ಚೆಲ್ಲಾಡಿ ಚದುರಿದರೂ ಹರಳಾಗಿ

ಮನಸಿರಲಮ್ಮ ಅಗುಳಗುಳು ಅನ್ನ

ಬೆಂದಕ್ಕಿ ರುಚಿ ಮೃದುವಿರಲಿ ಧರ್ಮ ||

ನಿನಗಿಹುದಿಲ್ಲಿ ಸ್ವೇಚ್ಛೆ ಸ್ವಾತಂತ್ರ

ನಿನದೆ ಮನೆ ನೀನೆ ಆಳುವ ಸೂತ್ರ

ಹಿರಿಕಿರಿಯರ ಸಂಸಾರ ಸಹಚರ

ನೀ ಗೃಹಿಣಿ ಯಜಮಾನಿಕೆ ಸಾಕಾರ ||

ಒದ್ದು ಚೆಲ್ಲಿದ ಅಕ್ಕಿ ಹೊಸಿಲೊಳಗಿರಲಿ

ಮನೆಯೊಳ ಗುಟ್ಟು ಮನೆಯೊಳಗಿರಲಿ

ಚೆಲ್ಲಿದ ಅಕ್ಕಿಯಂತೆ ಬಿಳುಪಿರಲಿ ಕಪ್ಪು

ಕಂಡವರ ಕಣ್ಣಿಗೆ ಕಾಣದಂತೆ ಹುಳುಕು ||

– ನಾಗೇಶ ಮೈಸೂರು

(ತಂಡುಲ = ಅಕ್ಕಿ)

(ಹೊಳೆನರಸೀಪುರ ಮಂಜುನಾಥ ರ ವಾರಾಂತ್ಯದ ಚಿತ್ರಕ್ಕೆ ಹೊಸೆದ ಕವನ)

01545. ಕೊನೇ ಗುಟುಕು


01545. ಕೊನೇ ಗುಟುಕು

______________________

ಮಟಮಟ ಮಧ್ಯಾಹ್ನದ ಬಿಸಿಲು

ಇಳಿಯುತ್ತಿತ್ತು ತುಸುತುಸುವೆ

ಬೀಸುವ ಗಾಳಿ ಹಬೆ ಬಿಸಿಬಿಸಿ

ದಣಿಸಿ ನಾಲಿಗೆ ಒಣಗಿ ಗೊಣಗೆ ||

ಆರಿದ ತೇವಕದೇಕೊ ಮುನಿಸು

ಬೇಡವಂತೆ ತಂಪಿನ ನೀರು..

ಬಿಸಿ ಬಿಸಿ ಮಸಾಲೆ ಚಹದಾಸೆ

ಮೆಲ್ಲುತ ಗರಿಗರಿ ಅವಲಕ್ಕಿ ಜತೆಗೆ ||

ಅಸ್ತು ದೇವತೆಗಳಿಹರು ಸತ್ಯವೆ

ತಂದಿಕ್ಕಿದಳು ಕಾರಸೇವೆ ಕುರುಕಲು..

ಒಣಗಿದ ನಾಲಿಗೆಗೆ ಸೊಗ ಖಾರ

ಅನಿಸುತಲೆ ಬಂತೆ ಚಹದ ಬಟ್ಟಲು ! ||

ಕಿಟಕಿ ತೆರೆದಾಗಸದತ್ತ ಕೂತ ನೋಟ

ಜಂಬದ ಗತ್ತಲಿ ಮೆಲ್ಲುತ್ತ ಹೀರುತ್ತ

ಎಚ್ಚರಿಸಿದ್ದೆ ಉಳಿಸಿಕೊ ಹನಿ ಕೊನೆಗಷ್ಟು

ಖಾರವ ಮುಗಿಸಿ ಕುಡಿವ ಇಂಗಿತವಿತ್ತು ! ||

ರಸಾನುಭೂತಿ ಅದ್ಭುತ ರಮ್ಯ ಕಾವ್ಯ

ಬೊಗಸೆ ಖಾರ ನಡುನಡುವೆ ತುಸು ಚಹ !

ಕೊನೆ ಗುಟುಕ ನೆನೆದು ಹಿಗ್ಗಿತ್ತ ಮನಸೆ

ಅವಸರವಸರದಿ ಮುಗಿಸುತ್ತಿತ್ತ ತಿನಿಸೆ ||

ಕಡೆಯ ಚಮಚೆ ಬಾಯಿಗಿಡುವ ಹೊತ್ತು

ಆಸೆಯ ಕಂಗಳೆಲ್ಲ ಚಹದ ಬಟ್ಟಲಲಿತ್ತು

ಬಾಯಿಗಿಟ್ಟೆ ತಿರುಗಿದೆ ಕೊನೆ ಗುಟುಕಿನತ್ತ

ಬಟ್ಟಲೆಲ್ಲಿ? ಮಂಗಮಾಯ ಒಯ್ದೆಬಿಟ್ಟಿಹಳಲ್ಲ ! ||

ಅರಿವಾಯ್ತಲ್ಲಿ ಸತ್ಯ ನಿನ್ನ ಪಾಲಷ್ಟೆ ನಿನದು

ಇದ್ದಾಗನುಭವಿಸದಿರೆ ಮತ್ತೆ ಕೈಗೆ ಸಿಗದು !

ಕೊನೆಗುಳಿದಿದ್ದಲ್ಲಿ ಬರಿ ಖಾರದ ಜಾಡು

ದಕ್ಕದ ಕೊನೆಗುಟುಕಲಡಗಿತ್ತೆಲ್ಲ ಸೊಗಡು ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01544. ಅವನು – ಅವಳು


01544. ಅವನು – ಅವಳು

__________________________

ಅವನಾಗಬೇಕು ಅವಳು

ಅವಳಾಗಬೇಕು ಅವನು

ಆಗದ ಹೋಗದ ಮಾತು

– ದಿನ ನಿತ್ಯ ಜೀವನ ಯುದ್ಧ ||

ಅವನಾಗಬೇಕು ಶರಣಾಗತ

ಅವಳಾಗಬೇಕು ಪೂರ್ಣಹಸ್ತ

ಆಗದ ಹೋಗದ ಮಾತು

– ಸಂಬಂಧ ಕೊಂಡಿ ಸಡಿಲ ||

ಅವನಾಗಬೇಕು ಮನೆವಾರ್ತೆ

ಅವಳಾಗಬೇಕು ಹೊಣೆಗಾತಿ

ಆಗದ ಹೋಗದ ಮಾತು

– ದೂರಿನ ಪಟ್ಟಿ ವಿಪುಲ ||

ಅವನಾಗಬೇಕು ಸದಾಸಿದ್ಧ

ಅವಳಾಗಬೇಕು ಒಂದೆ ಹದ

ಆಗದ ಹೋಗದ ಮಾತು

– ಲೋಪ ದೋಷ ಅಗಾಧ ||

ಅವನಾಗಬೇಕು ಅವಳಿಚ್ಚೆ

ಅವಳಾಗಬೇಕು ಅವನಿಚ್ಚೆ

ಆಗದ ಹೋಗದ ಮಾತು

– ಆದರವರೆ ಶಿವ ಪಾರ್ವತಿ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01543. ನಡೆಸಿದನೆಲ್ಲ ನಿಮಿತ್ತ


01543. ನಡೆಸಿದನೆಲ್ಲ ನಿಮಿತ್ತ

_______________________________

ಹುಲಿಯನೇರಿ ಬಂದ ಬಾಲ

ತರಲಿಲ್ಲವೇನು ಹುಲಿ ಹಾಲ ?

ತರಿಸಿದವಳು ಮಾತೆ ನಿಮಿತ್ತ

ಕುಟಿಲವಾಡೆ ಅವಳ ಪಾಲಿತ್ತ ||

ಮಂತ್ರಿಯವನಿದ್ದನೆ ನಿಕಟ

ಕುಟಿಲೋಪಾಯ ಸಮಸ್ತ

ಅವನದಿಲ್ಲ ದೋಷ ಕುಹಕ

ಪಾಲಿತ್ತವನಾಗಲು ಪ್ರೇರಕ ||

ಹಸುಗೂಸವನು ಅರಸನೆ

ಶಿಶುವ ಕಂಡು ಸಲಹಿದನೆ

ಶಿಶುವಿಗೊಬ್ಬ ಶಿಶು ಸೋದರ

ಕೊಟ್ಟು ನಡೆದ ಕಾನನ ದೂರ ||

ಹರಿಹರ ನಡುವೆ ಸಮಾಗಮ

ವರವ ಪಡೆದ ಮಹಿಷಿ ಕರ್ಮ

ಪ್ರಕೃತಿ ಪುರುಷ ಐಕ್ಯ ಸಂಗಮ

ಅಯ್ಯಪ್ಪನಾಗಿ ಉಗಮ ಮರ್ಮ ||

ಮಹಿಷಿಯದಿರಲಿಲ್ಲ ದೋಷ

ಮಹಿಷನ ಸೇಡಿಗವಳಾಕ್ರೋಶ

ನೆಪವಾದಳವಳು ಅಯ್ಯಪ್ಪನ

ಭೂಮಿಯ ಅವತಾರಕೆ ಕಾರಣ ||

– ನಾಗೇಶ ಮೈಸೂರು

೦೬.೦೧.೨೦೧೮

01542. ಅಯ್ಯಪ್ಪನಿಗೊಮ್ಮೆ ನಮಿಸು


01542. ಅಯ್ಯಪ್ಪನಿಗೊಮ್ಮೆ ನಮಿಸು

___________________________________

ಅಯ್ಯಾ ಎಂದರೆ ಸ್ವರ್ಗ

ಎಲ್ಲವೊ ಎಂದರೆ ನರಕ

ಅಯ್ಯಪ್ಪ ಎಂದುಬಿಡು

ನೀನಿರುವಲ್ಲೆ ಸ್ವರ್ಗ ನೋಡು ||

ಕಾಡು ಮೇಡಲಿ ಅಲೆಸಿ

ಬೆಟ್ಟ ಗುಡ್ಡ ಹತ್ತಿಳಿಸಿ ದಣಿಸಿ

ಬೆವರಾಗಿ ಕರಗಲು ಶಾಪ

ದರುಶನ ಕೊಡುವ ಅಯ್ಯಪ್ಪ ||

ಇರುಮುಡಿ ಕಟ್ಟಿಸಿ ಬುತ್ತಿ

ಬಿಡಿಸೆಲ್ಲ ಬಂಧ ವಿಮುಕ್ತಿ

ನಡೆಸುವ ಹೆಜ್ಜೆಯ ದಾರಿ

ಅಯ್ಯಪ್ಪನೆ ಮುಕ್ತಿ ರೂವಾರಿ ||

ಹರಿಹರ ಸಂಗಮ ಸಾಧ್ಯ

ಯಾವುದವನಿಗೆ ಅಸಾಧ್ಯ

ನೋವಲು ಕೂಗುವೆ ಅಯ್ಯಪ್ಪ

ಅವನಲ್ಲಿಟ್ಟುಬಿಡೆಲ್ಲ ಸರಿ ತಪ್ಪು ||

ಭಜಿಸೊ ಗುನುಗೊ ಮನುಜ

ಅಯ್ಯಪ್ಪನಿರುವ ನಿನ್ನೊಳಗೆ

ನುಡಿದರಾಗ ಕೇಳದಿಹನೆ ?

ನಿನ್ನನೆ ಅವನನಾಗಿಸಿ ನಗುವ ||

– ನಾಗೇಶ ಮೈಸೂರು

(Nagesha Mn)

(Lyric requested and Picture sent by Chandrashekar Hs – thank you 🙏😊🙏)