01548. ಜಾರದಿರಲಿ ಗಳಿಗೆ..


01548. ಜಾರದಿರಲಿ ಗಳಿಗೆ..

____________________________

ಮಳೆಯಂತಾಗಿ ಹೋಗಿದೆ ಮನ

ನಿಲದೆ ಸುರಿಸಿದೆ ನಿನದೆ ನೆನಪನು

ನೆನೆನೆನೆದು ನೋಡು ನನ್ನ ಪಾಡಿಲ್ಲಿ

ಒಳಗೊದ್ದೆಮುದ್ದೆ ಕಾಣದಲ್ಲ ಕುರುಹು.. ||

ನೋಡ್ಹೇಗೆ ಮೋಡ ಮಿಂಚಿದಾ ಕ್ಷಣ

ಕಣ್ಣ ತುಂಬ ಮಿಂಚು ಮಿಲನ ತಲ್ಲಣ

ಗುಡುಗು ಸಿಡಿಲು ನವಿರಾದ ಭಾವನೆ

ನಿನ್ನಪ್ಪುಗೆ ನೆನಪು ರೋಮಾಂಚ ತಾನೆ ! ||

ಹರಿದ ಧಾರೆ ಒಳಗೊ ಹೊರಗೊ ಕಾಣೆ

ಜಾರಿಸಿ ಬೆವರಹನಿ ಸಿಂಪಡಿಸಿ ತುಂತುರೆ

ಬೆಚ್ಚನೆಯ ಭಾವ ಬಿಚ್ಚಿಸುತ ಅಂತರಂಗ

ಅರಳಿ ತನು ಕುಸುಮ ಗುಟ್ಟೆಲ್ಲ ಬಹಿರಂಗ.. ||

ಮೈ ಮರೆತು ಹೋದೆ ಎಲ್ಲೊ ತಲ್ಲೀನತೆ

ಯಾರ ದನಿಯು ಕಿವಿಗೆ ಬೀಳದ ಮಂದ್ರ

ಇಂಬಿತ್ತ ತೋಳ ತುದಿ ಬೊಗಸೆ ಕನಸು

ನೆನೆದುದನೆ ನೆನೆವುದದೆಂತಾ ಸೊಗಸು ?! ||

ಚಂದದ ಏಕಾಂತ ಜಾರದಿರಲಿ ಗಳಿಗೆ

ಹೇಳಲೆಂತೊಳಗೆ ತೆರೆದವೆಷ್ಟೊ ಮಳಿಗೆ

ಸಾಲುಸಾಲು ಮಜಲು ನಿಲದ ವ್ಯಾಪಾರ

ನೀ ಮಾರುತ ನಾ ಕೊಳ್ಳುತ ಬಿಟ್ಟಿ ಪೂರ ! ||

ಜೋಕೆ! ನಿಂತೀಯಾ ಸುರಿದಿರು ಸತತ

ನಿಲದಿರಲಿ ತುದಿ ಮೊದಲಿಲ್ಲದ ಯಾನ..

ನಿಂತು ತಂದೀಯಾ ಕನಸಿಂದ ವಾಸ್ತವಕೆ

ಕಳುವಾಗಬಿಡೆ ಭ್ರಮೆಯಿದ್ದರು ಸರಿ ನೆನೆವೆ ! ||

– ನಾಗೇಶ ಮೈಸೂರು

(Nagesha Mn)

(Picture source: Internet / social media – received via FB friends – sorry can’t remember who forwarded it😊 – thank you 🙏👍😊)