01549. ಬಿಟ್ಟು ಹೋದರು ಬಿಡದವನ ನೆನೆದು..


01549. ಬಿಟ್ಟು ಹೋದರು ಬಿಡದವನ ನೆನೆದು..

_____________________________________________

ನೆನೆದು ಹೋದನವ ನೆನೆಸಿ ಮೈಮನ

ನೆನೆಯದಂತೆ ಕೊಡೆ ಹಿಡಿದು ಕತ್ತಲಲಿ

ನೆನೆಸಿ ಬಿಟ್ಟ ನೆನೆ ನೆನೆದು ಕಂಬನಿಗು

ತಾವುಳಿಸಲಿಲ್ಲ ಇಂಗಿಹೋಗಿ ಕಣ್ಣೀರು ||

ನೆನಪಾಯಿತೆಂದು ಚಡಪಡಿಕೆ ತೋರೆ

ನೆನಪೆ ಸುಳ್ಳೆಂದ ಜತೆಯಾಗಿರೆ ಸದಾ

ಜತೆಯೆಂದರಲ್ಲ ಬರಿ ಜತೆಗೆ ಕೂತಾಟ

ಜತೆಯಿಲ್ಲದಾಗಲು ಜತೆಗಿರುವ ಸ್ವಾದ ||

ನೆನಪಿರಲಿ ಬಿಡಲಿ ಕಾಡುವೆ ನೀನೆಂದ

ಅಡ್ಡಾಡಿಬಿಟ್ಟ ಕಾವಲಿರುತ ಮೈದೋಟ

ಮಾಲಿಯವ ಬೇಲಿಯಾದ ತರುವಾಯ

ಕೊರಳಿಗಾದೆನೆ ಮಾಲೆ ಪರಿವೆಯಿಲ್ಲದೆ ||

ಅರಿವಾಗಲಿಲ್ಲ ಸೂರೆಯಾದ ಸಮಯ

ಜಾರಿದರಿವೆ ಪರಿವೆ ಹೃದಯಕಿರಲಿಲ್ಲ

ನೆನೆದು ಬಂದವ ನೆನೆಸಿ ಬಿಟ್ಟ ಪುಳಕ

ಮರೆಸಿಬಿಟ್ಟ ಭಿತ್ತಿಯ ಕರಗಿಸಿ ಮೋಹ ||

ಏನೀ ಕಾಮನೆ, ಬಯಕೆ ಬೇಕೆಂದವನೆ

ಗದ್ದಲವೆಬ್ಬಿಸಿ ಮನ ನೆನೆನೆನೆದು ಮತ್ತೆ

ಹರಿದು ನೀರಾಗಿದೆ ಹೋದ ಅವನಿನ್ನಿಲ್ಲ

ಅವನನ್ನೆ ಬಯಸೊ ತಿಕ್ಕಲಿಗೆ ಹೆಸರಿಲ್ಲ ||

– ನಾಗೇಶ ಮೈಸೂರು

(Nagesha Mn)

(Picture source internet / social media received via Madhu Smitha – thank you 🙏😊👍)