01551. ಮೂಲ ಕಾರಣಕೆ ಐದು ‘ಯಾಕೆ?’


01551. ಮೂಲ ಕಾರಣಕೆ ಐದು ‘ಯಾಕೆ?’

______________________________________

( why 5 Why’s to find root cause?)

ರಾಮನ ವನವಾಸದ ಕಾರಣ

ಸೀತೆಯದಾಯ್ತು ಅಪಹರಣ

ನಡೆಯಲೆ ಇಡಿ ರಾಮಾಯಣ

ತಿಳಿದುಕೊ ಗುಣಮಟ್ಟವೆ ಕಾರಣ! ||

‘ಗೋಕುಲಾಷ್ಟಮಿ ಇಮಾಂಸಾಬಿ

ಎಲ್ಲಿಯ ರಾಮಾಯಣ? ಗುಣಮಟ್ಟ?’

‘ಅನ್ನಬೇಡ ಹೇಳು ಏನಿತ್ತು ಕಾರಣ

ಕಾಡಿಗೆ ಸೀತೆ ಹೋದಳೇಕೆ ಮೊದಲಿಗೆ?’ ||

‘ಪತಿವ್ರತೆ ಪತಿಯನುವರ್ತಿ ಗೃಹಿಣಿ

ರಾಮನಣತಿ ನಿರ್ಧಾರದ ಸಹಮತಿ..’

‘ಹೋದಳವಳು ಸರಿ ಬಸವನ ಬಾಲ

ಹೇಳೇಕೆ ರಾಮನಿಗೆ ಹೋಗೆ ಹಂಬಲ ?’ ||

‘ಅದರಣತಿ ಪಿತ ದಶರಥನದಲ್ಲವೆ

ಪಿತೃವಾಕ್ಯ ಪಾಲನೆ ಸುತಧರ್ಮವೆ..’

‘ಒಪ್ಪಿಕೊಳುವ ರಾಮನಿಗಿತ್ತನಿವಾರ್ಯ

ಕಳಿಸಿದನೇಕೆ ಅವನದಲ್ಲವೆ ಅಕಾರ್ಯ?’ ||

‘ಅವನದಲ್ಲ ತಪ್ಪು ಸತಿ ಕೈಕೆಯಿ ಪ್ರವರ

ಬಳಸಿಕೊಂಡಳೆ ಅವಳೆರಡು ಹಳೆ ವರ..’

‘ಪಟ್ಟ ಕಟ್ಟಲೊಂದು ಕಾಡಿಗಟ್ಟಲಿನ್ನೊಂದು

ಅವನೇಕೆ ಕೊಟ್ಟ ವರವೆರಡವಳಿಗೆ ಪೆದ್ದು ?’ ||

‘ಪೆದ್ದನಲ್ಲ ಕಾದಿದ ಸಂಭಾಸುರ ಸಮರ

ಕಾದಿದ್ದಳಲ್ಲ ಜತೆಗೆ ಸತಿ ಸಾಹಸ ಅಪಾರ’

‘ಬೆರಳೊಡ್ಡಿದಳಲ್ಲಾ ರಥದ ಕಡಾಣಿ ಕಳಚೆ

ಜೀವವುಳಿಸಿದ ಸತಿಗೆ ವರವಿತ್ತ ಸಾಹಸಕೆ’ ||

ಅರಿವಾಯ್ತೆ ಮೂಲ ಕಾರಣ ಗುಣಮಟ್ಟ?

ಗಟ್ಟಿಮುಟ್ಟಿರೆ ಚಕ್ರ ವರ ನೀಡುವ ಪ್ರಮೇಯ?

ಹಾಳು ಕಳಪೆ ಚಕ್ರ ಸೀತಾಪಹರಣಕೆ ಸಮೂಲ

ರಾಮಾಯಣ ಘಟಿಸೆ ಮೂಲಕಾರಣ ಗುಣಮಟ್ಟ ||

– ನಾಗೇಶ ಮೈಸೂರು

೦೯.೦೧.೨೦೧೮

(Based on a whatsapp story)

Picture 1: https://goo.gl/images/1CR6Gc, Picture 2: Internet / social media)

01550. ಅದೇ ಚರಿತೆ..


01550. ಅದೇ ಚರಿತೆ..

_________________________

ಬೇಯುತ್ತಿವೆ ನೋಡಾಸೆಗಳೆಲ್ಲ

ಪಾತ್ರೆಯಲ್ಲಿ ಕೊತಕೊತನೆ

ಮುಚ್ಚಿಟ್ಟ ಮುಚ್ಚಳದಡಿ ತಪನೆ

ಕಾಣದಲ್ಲ ಉಕ್ಕುವ ತವಕ ||

ಹಸಿ ಯಾತನೆಗಳೆ ಉರುವಲು

ಒಡ್ಡೊಡ್ಡಿ ಉರಿಸಲು ಹವಣಿಕೆ..

ಊದಿ ಊದಿ ಹೊತ್ತಿಸೆ ಬವಣೆ

ಹೊಗೆಯುರಿಸಿ ಕಣ್ಣಲಿ ನೀರು ||

ಸಲಕರಣೆಗಳದೆ ತಾತನ ಕಾಲ

ಉರಿಸುವ ಬೆಂಕಿ ಪಂಚಭೂತ

ಯುಗಯುಗದಡಿಗೆ ಪಾಕಶಾಲೆ

ರುಚಿ ಶುಚಿಯಲೆ ಸುಟ್ಟಿವೆ ನನ್ನನ್ನೆ ||

ರೆಕ್ಕೆ ಬಿಚ್ಚಿ ಹಾರೆ ಅವಸರವಿತ್ತೆಷ್ಟೊ

ಮಸಿಯಾಗಿ ಗೋಡೆಗಂಟಿ ಚರಿತ್ರೆ

ಧಗಧಗಿಸುವ ಬೆಂಕಿಯ ಬೆಳಕಲಿ

ಹೊಳೆದೊಳೆಯುತ ಕೇಶದ ಕ್ಲೇಷ ||

ತಗ್ಗಿದ ತಲೆ ಮೇಲೆತ್ತದೆ ಅವಿರತ

ಮಾಡಿಡುತ ಬಕಾಸುರನ ಅಡಿಗೆ

ಬಡಿದು ಬಡಿಸಿಕೊಂಡರು ತೇಗುತ

ನಾಕೂತೆ ಇರುವೆ ಕೊಳವೆ ಊದುತ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Vishalakshi NM – thank you 🙏😊👍)