01553. ಆ ಗಳಿಗೆಯ ತಳಮಳ..


01553. ಆ ಗಳಿಗೆಯ ತಳಮಳ..

_______________________________

ದೂಕಬೇಕಂತಲ್ಲ ಹೊಸಿಲ

ನಡುವಿಲಿಟ್ಟ ತಂಡುಲ

ಬಲಗಾಲ? ಎಡಗಾಲ? ಗೊಂದಲ

ಚೆಲ್ಲದಿರೆ ಭೀತಿ ಶಕುನಕೇನು ಫಲಾಫಲಾ? ||

ಹೇಳುವವರೆ ಎಲ್ಲಾ ಸುತ್ತ

ಕೇಳಿದ್ದೆಲ್ಲ ಮರೆತು ಹೋಗುತ್ತ

ಭಯ ಮಿಶ್ರಿತ ಖುಷಿ ಗದ್ದಲ

ತಳ್ಳಲ್ಹೇಗೆ? ಪಾದ? ಹೆಬ್ಬೆರಳ? ||

ಸುಮ್ಮ ನೂಕಿದರೆ ಸಾಕೇನು?

ಇಲ್ಲಾ ಜೋರು ಒದೆಯಬೇಕೇನು?

ನಯಭಯಕಿಟ್ಟ ಪರೀಕ್ಷೆಯೆ?

ಜಾಡಿಸಿ ಒದ್ದವಳು ಗಂಡುಭೀರಿಯೆ? ||

ಏನು ಶಾಸ್ತ್ರವೊ? ಎಲ್ಲಾ ಗದ್ದಲ

ಒಳಗೊಳಗೇನೊ ಪುಳಕದ ಚೀಲ

ಎಲ್ಲರ ಗಮನದ ಪುತ್ಥಳಿ ನಾನಾಗಿ

ನಾಚಿಸಿ ಕೆನ್ನೆ ಕೆಂಪಿಡರಿದ ಮೀನಾಗಿ ||

ಒದ್ದೆನೊ ನೂಕಿದೆನೊ ದೂಕಿದೆನೊ

ಚೆಲ್ಲಿತೊ ಬಿಟ್ಟಿತೊ ನೆಲದಲಕ್ಕಿ ತಾನು

ನಕ್ಕರೊ ಕೂಗಿದರೊ ಕಂಗೆಟ್ಟ ವಧು ನಾ

ಓಡಿ ಸೇರಿದೆ ಖೋಲಿ ಎಂತದ್ದೊ ನಿರಾಳ! ||

– ನಾಗೇಶ ಮೈಸೂರು

(Nagesha Mn)

(ಆ ಗಳಿಗೆಯಲ್ಲಿ ಮನದಲ್ಲಿರುವ ಭಾವಗಳೆಲ್ಲಕ್ಕು ಪದರೂಪಕೊಟ್ಟ ಮತ್ತೊಂದು ಕವನ – ಅದರ ತುಣುಕುಗಳನ್ನು ಹಂಚಿಕೊಂಡು ಕವನಕ್ಕೆ ವಸ್ತು ನೀಡಿದ Jayasree Jaya ರವರಿಗೆ ಧನ್ಯವಾದಗಳು)

(Photo already used in another poem in response to weekend picture poem request by ಹೊಳೆನರಸೀಪುರ ಮಂಜುನಾಥ )

01552. ಕಳೆದು ಹೋದ ಗಳಿಗೆ


01552. ಕಳೆದು ಹೋದ ಗಳಿಗೆ

_______________________________

ಜಗುಲಿ ಕಟ್ಟೆಯ ಮೇಲೆ

ಕವುಚಿ ಕುಳಿತ ಹೊತ್ತು

ಮಂಡಿಗಾನಿಸುತ ಗಲ್ಲ

ಕಾಲ ತೋಳಪ್ಪಿದ ಕಾಲ ||

ಯಾವ ವಿಸ್ಮೃತಿ ಅಗಾಧ

ಯಾವುದೊ ಲೋಕದಲೆ

ಯಾನವದೇನೊ ವಿಸ್ಮಯ

ಯಾರೆತ್ತೊಯ್ದರೊ ಮನಸ ||

ತೋಯ್ದಾಟ ಹೊಯ್ದಾಟದೆ

ಏನೆಲ್ಲಾ ಬಗೆ ಬಗೆ ವಿವಶತೆ

ಮರುಳು ಹಿಡಿದಂತೆ ಮನ

ಮಂಕು ಹಿಡಿದೆಲ್ಲೊ ತಲ್ಲೀನ ||

ಎಲ್ಲಿಯದೊ ದೂರದ ಹಾಡು

ಅಲ್ಲೆಲ್ಲೊ ಹಕ್ಕಿಯ ಚಿಲಿಪಿಲಿ

ಇನ್ನೆಲ್ಲಿಂದಲೊ ಸುಳಿವ ಗಾಳಿ

ಅನುರಣಿಸಿತೊಳಗಿನ ಸದ್ದೆಲ್ಲ ||

ಕಳೆದುಹೋದ ಗಳಿಗೆಯದು

ನಿರೀಕ್ಷೆಗಳಿಲ್ಲದೆ ಎಲ್ಲೊ ಮಾಯ

ಕೂತೆಡೆ ಏಕಾಂತ ನೆಪವದು

ಪರವಶತೆ ಇನ್ನೆಲ್ಲಿಗೊಸೆಳೆದು ||

– ನಾಗೇಶ ಮೈಸೂರು

(Nagesha Mn)

(Picture source – internet / social media received via Madhu Smitha – thank you 🙏😊👍)