01555. ನೋಡಲು ಬರದೆ ಕಾಡಿದ ನಲ್ಲ..


01555. ನೋಡಲು ಬರದೆ ಕಾಡಿದ ನಲ್ಲ..

____________________________________

ನೋಡಲು ಬಂದು ಹೋದವರದೆಷ್ಟೊ..

ನಯಭಯದಿ ತಲೆತಗ್ಗಿಸಿ ತಂದಿಟ್ಟೆ ತಟ್ಟೆ

ಅಮೇಯವನಳೆವಂತೆ ಅಳೆದರಲ್ಲ ಕಣ್ಣಲ್ಲೆ

ಅಳೆದರೇನ ಪಡೆದರೇನ ಅವರೆ ಬಲ್ಲರು ||

ನೀ ನೋಡಿಹೋದೆ ನನ್ನ ತೇರ ಬೀದಿಯಲಿ

ಮೂಡಿತೇನಲ್ಲಿ ವಧುವಾಗಿಸೊ ಆಶಯ ?

ಅರಿವೆ ಇರದೆ ಮೂಗು ಮುರಿದಿದ್ದೆನಲ್ಲ..

ಮನೆಬಾಗಿಲತನಕ ಹಿಂಬಾಲಿಸಿತೆ ಹಂಬಲ ? ||

ನೋಡಲು ಬರದೆ ಬೇಡಲು ಬಂದವ ನೀನು

ಬೆದರಿಸಿಬಿಟ್ಟೆ ಅಪ್ಪ ಅಮ್ಮನಿಗು ಬೆಪ್ಪಾಗಿಸಿ !

ಹೆಣ್ಣು ಕೇಳುವ ತರವೇನದು ಹಣ್ಣಿನ ಪಣ್ಯ?

ಕೆಲಸದಲಿರುವೆ ಕೊಡುವಿರ ಮಗಳನೆಂದ ಗಣ್ಯ ! ||

ಅಂತೂ ಇಂತು ಯಾರೊ ಗೆಳೆಯರಂದಾಗ

ಹುಚ್ಚನಲ್ಲನಿವ ತುಸು ವಯಸ ತಿಕ್ಕಲವನೆಂದು

ತಟ್ಟನೆ ಮೂಡಿತ್ತಲ್ಲ ಅನುರಾಗದ ಎಳೆ ಕುಸುಮ

ಹುಚ್ಚುತನದಲು ಪ್ರೇಮದ ಸಹಚರ್ಯ ಸಂಭ್ರಮ ||

ಮೆಚ್ಚುಗೆಯಾಗಿ ಒಲುಮೆ ಹೆಚ್ಚಿ ಮನಸೆಲ್ಲ ಹೋಳು

ನೋಡೀಗ ನಿನ್ನದೆ ನೆನಪವಿರತ ಬಾಳಲು ಕಾದಿರುವೆ

ಅಪರಿಚಿತ ಭಾವ ಕರಗಿ ಚಿರಪರಿಚಿತನಾದೆಯದೆಂತು ?

ಬಾಗಿಲು ಕಾವುದಾಗಿದೆ ನಿತ್ಯ ಬರುವುದಿಲ್ಲವೆಂದರಿತಿದ್ದರು ! ||

– ನಾಗೇಶ ಮೈಸೂರು

(Nagesha Mn)

ಪಣ್ಯ = ವ್ಯಾಪಾರ

(Picture source: Internet / social media link as displayed in Picture, received via Yamunab Bsy – thank you 🙏👌👍😊)

01554. ನಿಸರ್ಗ


01554. ನಿಸರ್ಗ

____________________

ನಿಸರ್ಗ ನಿಸರ್ಗ ನಿಸರ್ಗ

ನೀನಲ್ಲವೆ ನಿಜವಾದ ಸ್ವರ್ಗ

ನೀನಿಲ್ಲದೆ ಹೋದರೆ ನಿಸರ್ಗ

ಹುಡುಕಲೆಲ್ಲಿ ನೇಣಿಗು ಹಗ್ಗ ! ||

ನಿಸರ್ಗ ನಿನಗೆಷ್ಟು ಹೆಸರ ?

ತಂಗಾಳಿ ಹೊಂಬಿಸಿಲು ಮಳೆ

ಹಸಿರು ವನರಾಜಿ ಪಶು ಪಕ್ಷಿ

ಸುತ್ತುವರೆದಿರಲದೆ ಸುರಕ್ಷೆ ||

ಒತ್ತೊತ್ತು ನಿಭಿಢ ವನರಾಜಿ

ಹಳ್ಳ ಕೊಳ್ಳ ಕಾಲುವೆ ನದಿ

ಸಾಗರ ಸರೋವರ ಮರಳು

ಕಾಡು ಗುಡ್ದ ಗುಹೆ ಗಿರಿಶಿಖರ ||

ನೀಲ ನಭ ಮೇಘ ತಾರಾಗಣ

ಗ್ರಹ ಧೂಮಕೇತು ಬ್ರಹ್ಮಾಂಡ

ತಮ್ಮೊಳಗಿಹ ತಮ್ಮನೆ ಬಿಚ್ಚಿಟ್ಟ

ನಿಸರ್ಗದೊಳಗುಟ್ಟೆ ನಿಸರ್ಗ ||

ಯಾವುದೆಲ್ಲ ನಿಸರ್ಗದ ಸರಕು

ಪಂಚಭೂತಗಳದೆ ಕರಾರುವಾಕ್ಕು

ಅದರಲಾದ ಅಂತರಂಗ ಸಂಸರ್ಗ

ಮನುಜನಿರಲಂತೆ ಕಾಪಿಟ್ಟು ನಿಸರ್ಗ ||

– ನಾಗೇಶ ಮೈಸೂರು

(Nagesha Mn)

(Picture source no.1&2 Internet / social media, Pic 2 received via Chandrashekar Hs, 3 & 4 clicked by self)