01557. ಅರಿಯದಾದೆ ಸಂದಿಗ್ಧ..


01557. ಅರಿಯದಾದೆ ಸಂದಿಗ್ಧ..

________________________________

ನೀನರಿಯದೆ ಹೋದೆ ನನ್ನಾ ಸಂದಿಗ್ಧ

ಬರಿ ದೂರುತಲಿರುವೆ ನೋಡದೆ ನನ್ನ ಕಣ್ಣಿಂದ ||

ಅಸಹಾಯಕತೆ ಕಟ್ಟಿ ಹಾಕಿ ಪರಿಸ್ಥಿತಿ

ಮಾತನಾಡೆ ಭುಗಿಲುಕ್ಕುವ ಜ್ವಾಲಾಮುಖಿ

ಮೌನ ದಳ್ಳುರಿ ಅಂತರಂಗದ ಬೇನೆ

ಹೇಗಿದ್ದರೇನು, ಅಪರಾಧಿ ನಿನ್ನ ಕಣ್ಣಲಿ || ನೀನರಿಯದೆ ||

ನೈತಿಕವೊ ನಿಜಾಯತಿಯೊ ಗಣನೆ

ಒಗಟದಲ್ಲ ಸಿಕ್ಕುಸಿಕ್ಕಾದ ಬಾಳಿನ ಸೂತ್ರ

ಗೋಜಲು ಬಿಡಿಸೆ ಹೋಗಿ ಗೊಂದಲದೆ

ಸಿಕ್ಕು ಗೋಜಲಾಗಿ ಹೋದ ಕಥೆ ನೀ ಕಾಣೆ || ನೀನರಿಯದೆ ||

ಭಾವಾತಿರೇಕದಲೆಲ್ಲ ಸುಲಭ ಸಂಭ್ರಮ

ವಾಸ್ತವದಲೆಲ್ಲ ಕಾಡಿ ಕೊಲ್ಲುವ ತಲ್ಲಣ

ಬಿಡು ಭ್ರಮೆಯ ದಾರಿ ಹಿಡಿಯ ಗುಟ್ಟಲ್ಲ

ಅಂಗೈ ಹುಣ್ಣಾಗೆ ಕನ್ನಡಿಯಿಲ್ಲದೆಯೆ ಗುಲ್ಲು || ನೀನರಿಯದೆ ||

ನೂರಾರು ಕಣ್ಣು ಸಹಸ್ರ ಯೋನಿ ಇಂದ್ರ

ಅಡಿಗಡಿಗೆ ಎಡವಿ ತಪಿಸಿ ಪದವಿಗೆ ಕುತ್ತು

ಬಿಟ್ಟೆಲ್ಲ ಕಿತ್ತೊಗೆದು ಹೋಗುವ ಮಾತಿದಲ್ಲ

ಹೋಗಲೆಲ್ಲಿ ಬದುಕಬೇಕಿಲ್ಲೆ ಬೇರೆ ಜಗವಿಲ್ಲ ! || ನೀನರಿಯದೆ ||

ದೂರುವುದು ಸುಲಭ ಹಪಹಪಿಸುತ ನಿತ್ಯ

ಜಾರುವುದು ಕಠಿಣ ಸಿಲುಕಿದ ಬಲೆ ಕಟುಕ

ನಗೆಪಾಟಲಲ್ಲ ವಿಷಯ ನಂಬಿಕೆ ಪರಂಪರೆ

ಜಾಡ ಬಿಟ್ಟು ನಡೆದವರೆಲ್ಲರದದೇ ಗೋಳು || ನೀನರಿಯದೆ ||

– ನಾಗೇಶ ಮೈಸೂರು

(Nagesha Mn)

(Photo source internet / social media received via Yamunab Bsy – thank you 🙏😊👍)

01556. ತಿರುಗು ಬಾಣದ ನೋಟ


01556. ತಿರುಗು ಬಾಣದ ನೋಟ

_________________________________

ನೀ ತಿರುಗಿ ನೋಡಿದರೆ ಹಿಂಗೆ

ನಾ ತಿರುಗಿ ಹೋಗುವುದು ಹೆಂಗೆ?

ನೀ ತಿರುಗಿ ನಡೆಯೆ ನಿನ್ನಾ ಹಟ್ಟಿಗೆ

ಹಿಂದಿಂದೆ ಬರುವೆ ನೀ ತಟ್ಟೊ ರೊಟ್ಟಿಗೆ ||

ನೀ ಮಾತನಾಡದ ಚತುರ ನಾರಿ

ನಿನ ಮೌನ ಗುಟ್ಟು ನೋಡೆಷ್ಟು ದಾರಿ

ನೋಡಿದರೆ ಹೀಗೆ ಬಿಡದೆ ಬಾರಿಬಾರಿ

ಬಿಟ್ಟಪದ ತುಂಬೆಲೆ ನಿನದಿದೆ ಜರೂರಿ ||

ಯಾಕನಿಸುತಿದೆ ನಿನ್ನ ಕಣ್ಣಲಿ ಮಾತು

ಮಾತಿನ ಪದರ ಮುಗುಳ್ನಗುವಡಿ ಹೂತು

ಕಟ್ಟುಮಸ್ತು ಶಿಸ್ತು ಕಟ್ಟುನಿಟ್ಟಿನ ಹೂನಗೆ

ನೈಜವಿದೆಯೇನು ಬಾಯಿ ಬಿಡೆ ಸೊಬಗೆ ||

ನೀನಿಟ್ಟಂತಿದೆ ಹೆಜ್ಜೆ ಮುಂದಿನ ನಡೆಗೆ

ಕಾದಂತಿದೆ ಕರೆದು ಬರುವೆಯಾ ಜತೆಗೆ

ಬರಲೇನು ಜತೆಗೆ ಬಯಕೆ ಹರಕೆ ಕುರಿ?

ನೀನಡೆದ ಹಾದಿಯೆ ನಮ್ಮದಾಗುತ ಗುರಿ ||

ಹೆಂಗೆಂಗೊ ಆಗುತಿದೆ ನೀ ಹಿಂಗೆ ನೋಡೆ

ಪದವೆ ತಡಕಾಡುತಿದೆ ಮಾತಿಗೆ ಸಿಗದೆ

ಹೇಳದೆಲ್ಲ ಸೊಗಡ ಹಿಡಿದಿಟ್ಟ ನಾರಿ ಸ್ಪುಟ

ಕಂಡಂತಿದ್ದರೇನು ಬಿಡಿಸಲಾಗದ ಒಗಟ ! ||

– ನಾಗೇಶ ಮೈಸೂರು

(Nagesha Mn)

(Picture source: Internet / social media received via FB friends)