01560. ಪರಿಚಯ…


01560. ಪರಿಚಯ…

____________________________

ನಾನಿಲ್ಲ ನೀನಿಲ್ಲ ಯಾರಿಲ್ಲ ಇಲ್ಲಿ

ಎಲ್ಲವು ಮಾಯೆ ಮೋಹದ ಅಮಲು

ನಾನು ನಾನೆಂದು ಮೀಸೆ ತಿರುವಿದವರು

ನೀನು ನೀನೆಂದು ಓಲೈಸುವಾ ಭಟರು ||

ನೀನಾಗಬೇಕು ನಾನು ಬಿಟ್ಟರೆ ನೀನು

ನೀನು ನೀನಾಗಿರಲು ಬಿಡದ ಕಾನೂನು

ಹೊರಳು ಎಡಕೆ ಇಲ್ಲ ತೆರಳು ಬಲಕೆ

ಅಂಗಾತ ಮಲಗೆ ನಡುವೆ ಬಿಡರು ಜೋಕೆ ||

ಸುಮ್ಮನಿರಲಾಗದು ನಿಶ್ಚಲ ಮಿಡುಕು ಜೀವ

ಕೂರಲಾಗದು ನಿರ್ಲಿಪ್ತ ತಡಕಾಟ ಬಾಂದವ್ಯ

ಹುಡುಕಾಟ ಹುಡುಗಾಟ ಬೇಲಿ ನಿಸ್ವಾರ್ಥ

ಬಂದು ಕೂರುವುದಲ್ಲಿ ಸ್ವಾರ್ಥ ಹಿತಾಸಕ್ತಿ ||

ಕೂರಲಾಗದು ತಪಕೆ ಕಾಡಲ್ಲ ಕಾಡುಮನೆ

ಐಹಿಕ ಭೋಗ ಯೋಗ ಕಾಡದೆ ಬಿಡ ಸಮನೆ

ನೀನು ಎಂದರೆ ಏನು ನಿರ್ಧರಿಸೆ ನೂರಾರು

ನಿನ್ನೊಬ್ಬನ ಹೊರತು ಮಿಕ್ಕವರದೆ ತಕರಾರು ||

ಅರಿವಿಗಿಳಿವುದು ಬರಿಯ ಹೆಸರಷ್ಟೆ ನೀನು

ತಾಳ ಪಲ್ಲವಿ ರಾಗ ಈ ಜಗದ ನುಡಿ ಸದ್ದು

ಗದ್ದಲದೊಳಗಲ್ಲೆಲ್ಲೊ ನಿನ್ನೊಳಗಿನ ನೀನು

ಅಡಗಿರುವೆ ಕೈಗೆ ಸಿಕ್ಕರೆ ಭಾಗ್ಯಶಾಲಿ ಬಾನು ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Yamunab Bsy Thank you 🙏👍😊)

01559. ಕವಿಗೋಷ್ಠಿಯ ಭೀತಿ..!


01559. ಕವಿಗೋಷ್ಠಿಯ ಭೀತಿ..!

___________________________

ಕರೆಯಬೇಡಿ ಕವಿಗೋಷ್ಠಿಗೆ ನನ್ನ

ಕವನ ಓದಲು ಬರದು ನನಗೆ !

ಗುಟ್ಟಲಿ ಬರೆದಂತಲ್ಲ ಓದುವ ವೈಭವ

ನೆನೆದೇ ನಡುಗಿದೆ ಕಾಲು, ಸಭಾಕಂಪ ! ||

ನನ್ನಾಣೆ ಗೊತ್ತಿಲ್ಲ ಓದುವ ಬಗೆಯೆಂತು?

ಇಂದಿಗೂ ಅರಿವಿಲ್ಲ ಓದೇ ಹೇಗಿದ್ದೀತು !

ನಿಮಗೇನಾದರು ಗೊತ್ತೆ ಯಾಕಲ್ಲಿ ಸಾಲು

ಎರಡೆರಡು ಸಲ ಒತ್ತಿ ಹೇಳುವಹವಾಲು ? ||

ಹಾಳಾಗಲೆಂತೊ ಓದುವ ಎಂದರೆ ನಡುಕ

ಅದುರುವ ತುಟಿಯಿಂದ ಕಾಗುಣಿತ ನರಕ

ಕೇಳುಗರಿಗನುಮಾನ ಬರೆದವನಿವನೇನಾ?

ಅಂದುಕೊಂಡರೆ ಅಷ್ಟೆ ಮುಕ್ತಾಯ ಕವಿಜನ್ಮ! ||

ಮಜ್ಜನದ ಹೊತ್ತಿನ ಸಜ್ಜನ ಹಾಡುವಂತಲ್ಲ

ಕಣ್ಣ ಮುಂದೆಯೆ ಕೂತ ನೂರಾರು ಜಂಗುಳಿ

ನೋಟವೊಂದೆ ಸಾಕು ನಖಶಿಖಾಂತ ಬೆವರು

ನಿಂತಲ್ಲೆ ಎಲ್ಲಾ ಆದಂತೆ ದನಿಯಲಿ ಗೊಗ್ಗರು ||

ಯಾಕೆ ಸುಮ್ಮನೆ ಬಾಧೆ ಕವಿಗು ಕೇಳುಗರಿಗು ?

ಕರೆಯಬೇಡಿ ಪಾಡಿಗೆ ಬಿಟ್ಟುಬಿಡಿ ಅವನನು…

ಆಡಿಕೊಳಲಿ ಹಾಡಿಕೊಳಲಿ ತನ್ನಂಗಳದ ಹಕ್ಕಿ

ಸಾಕಲ್ಲೆ ಬಿದ್ದ ಕಾಳ ಹೆಕ್ಕಿ ತುಂಬಿಕೊಳುವ ಹೊಟ್ಟೆ ||

– ನಾಗೇಶ ಮೈಸೂರು

(Nagesha Mn)

(Picture source – internet/social media)

01558. ಸಂಕ್ರಾಂತಿ


01558. ಸಂಕ್ರಾಂತಿ

_______________________

ಖಾರ ಸಿಹಿ ಪೊಂಗಲೊ

ಕಿಚಡಿಯೊ ಪಚಡಿಯೊ

ಸಂಕ್ರಾಂತಿ ಎಳ್ಳು ಬೆಲ್ಲ

ತಿಂದು ಒಳ್ಳೆ ಮಾತಾಡು ||

ಬೆಲ್ಲದ ತುರಿ ಸಕ್ಕರೆಯಚ್ಚು

ಕಬ್ಬಿನ ಜತೆ ಉಂಡೆ ನಂಟು

ಸುಗ್ಗಿಯ ಮಾತಾಡೊ ಹಿಗ್ಗಿ

ಉಕ್ಕಲಿ ಮಡಿಕೆಯಾಚೆ ಚೆಲ್ಲಿ ||

ರಾಸುಗಳೆಲ್ಲವ ಸಿಂಗರಿಸೊ

ಕೊಂಬಿಗೆ ಬಣ್ಣ ಶಾಲ್ಹೊದಿಸೊ

ಒಣ ಹುಲ್ಲನು ಹರಡಿ ಇರುಳು

ಬೆಂಕಿ ದಾಟೆ ಹಿಡಿದು ಕೊರಳು ||

ಮಾಡೊ ಮೆರವಣಿಗೆ ಸಂತಸದೆ

ಸುಗ್ಗಿ ಫಸಲೊ ಸಿಂಗಾರ ರಾಸೊ

ಸಂಭ್ರಮ ಗೃಹಿಣಿ ತರುಣಿ ಮತ್ತು

ಸಂಕ್ರಾಂತಿ ಮನಸಾಗಲಿ ಮಾತು ||

ಚಳಿ ಬಿಡಿಸುವ ಬೇಸಿಗೆಗೆ ಮುನ್ನುಡಿ

ಉತ್ತರಾಯಣ ಸಂಕ್ರಮಣಕೆ ಕನ್ನಡಿ

ದಿನಕರನಾಗುವ ಹತ್ತಿರದ ನೆಂಟ

ಸೇರಲಿ ದೂರದಲಿಹ ಮನ ಮುಕ್ತ ||

– ನಾಗೇಶ ಮೈಸೂರು

(Nagesha Mn)

(Picture source : internet / social media posts)

01558. ಬಾ ಸಂಕ್ರಮಣಕೆ


01558. ಬಾ ಸಂಕ್ರಮಣಕೆ

___________________________

ಸಂಕ್ರಾತಿ ಹೊಸಿಲಲಿ

ಸಂಭ್ರಮವ ಚೆಲ್ಲಿ

ಎಳ್ಳು ಬೆಲ್ಲವ ಬೀರೆ

ನೀ ಬರುವೆಯೇನೆ ? ||

ಚುಮುಗುಟ್ಟೊ ಚಳಿಯಲಿ

ಬೆಚ್ಚಗಾಗಿಸೆ ದಿನಗಳ

ಬರುವಂತೆ ಆ ದಿನಕರ

ಹೊಂಬಿಸಿಲಾಗಿ ಬರುವೆಯಾ? ||

ಭಾವಗಳ ಸಂಭ್ರಮಕೆ ಜತೆ

ಹಬ್ಬದುಡುಗೆಯ ಮೋಡಿ

ತೊಟ್ಟೊಡವೆ ನಕ್ಕ ಮೊಡವೆ

ನಕ್ಕು ಬಂದಪ್ಪುವೆಯ ಮನಸಾ ? ||

ಕಬ್ಬಿನ ಸಿಹಿ ತುಟಿ ಮಾತಲಿಟ್ಟು

ಕಣ್ಣೋಟ ಬಡಿಸುತಲಿ ಪ್ರಳಯ

ಉಣಿಸಿರಲೇನೊ ಮತ್ತು ತಲ್ಲೀನ

ವಿಲೀನದಲಾಗುತ ಅಂತರ್ಧಾನ !? ||

ಬಾ, ಒಳ್ಳೊಳ್ಳೆ ಮಾತಾಡಲಿದೆ ತಿಂದು

ನೀನೆ ಎಳ್ಳು ನೀನೆ ಬೆಲ್ಲ ಎಲ್ಲವು ನೀನೆ

ತಬ್ಬಿಬ್ಬಾಗಿಸದೆ ಸಂಕ್ರಮಣದೆ ಪರಸ್ಪರ

ಮಿಂದು ಮನ ಸಂಗಮಿಸಲದೆ ಸಂಕ್ರಾಂತಿ ||

– ನಾಗೇಶ ಮೈಸೂರು

೧೩.೦೧.೨೦೧೮

(Picture source : hallikatte.com)