01562. ಬರದಿದ್ದರೇನು ಬರೆವೆ..


01562. ಬರದಿದ್ದರೇನು ಬರೆವೆ..

____________________________

(ಈ ಚಿತ್ರ ನಂದಾ ದೀಪಾ ರವರ ಪೋಸ್ಟೊಂದರಿಂದ ಎರವಲು ಪಡೆದದ್ದು (thank you!) – ಬೇಕೆಂತಲೆ ಬರಿ ‘ಬ, ಭ‘ ಕಾರದ ಪದಗಳನ್ನು ಮಾತ್ರ ಬಳಸಿದೆ – ಸ್ವಲ್ಪ ಅಸಂಗತವೆನಿಸಿದರೆ ‘ಹೊಟ್ಟೆಗ್ ಹಾಕ್ಕೊಳೀ 😁l)

ಬರದೆ ಬರದೆ ಬರದೆ ಬರದೆ..

ಬರದಿದ್ದರು ಬರೆದೇ ಬರೆದೆ !

ಬರೆದೆಲ್ಲವ ಬರಿದಾಗುವ ಭರದೆ

ಭರವಸೆ ಭರಪೂರ ಬರಬಾರದೆ ? ||

ಬರಿದಾಗಲೆಂತು ಭರಿಸಿದೊಳಗ

ಭಾರ ಬವಣೆ ಬಾಧಿಸಿ ಬುರುಗು

ಬಳಸದಾ ಬಳಪ ಬರೆಯಲೇನ ?

ಬರೆದುಬಿಡುವೆ ಬಂದದ್ದ ಬರೆಯುತ ||

ಬಣ್ಣಬಣ್ಣ ಬಣ್ಣಿಸದೇನನು ಬಣ್ಣನೆ

ಬಣ್ಣವಿಲ್ಲದೆ ಭಾವನೆ ಬರಲೆಲ್ಲಿ?

ಬಂತು ಬರಲಿಲ್ಲೆಂದು ಭೋರಿಡದೆ

ಬಾರದಿದ್ದರು ಬಿಡದೆ ಬರೆಯುವಾಟ ||

ಬಾಲವಲ್ಲ ಬದುಕು ಬದಿಯಲಿಲ್ಲ

ಬದಿಗೊತ್ತಬಿಡದೆ ಬೇಧಿಸುವ ಬಹಳ

ಬಲವಡಗಿದ ಬಾಗಿಲಲಿ ಬುಡಕಿಳಿದು

ಬೆಡಗು ಬಿನ್ನಾಣ ಬಹಿರಂಗವಾಗಿಸುತ ||

ಬರೆದರಸಂಬದ್ಧ ಬೈದಾಟ ಬರದಿರದು

ಬರೆಸುವಾತನ ಬರಹ ಬರವಣಿಗೆ ಬಂಧು

ಬಂದದ್ದೆಲ್ಲ ಬರಲಿ ಭಗವಂತನಿರಲಿ ಬಗಲಲಿ

ಬರೆದೇ ಬರೆವೆ ಬರಹ ಬಾನಿಂದವ ಬರೆಸಲಿ ||

– ನಾಗೇಶ ಮೈಸೂರು

೧೩.೦೧.೨೦೧೮

01561. ಮತ್ತೆ ಬಂತು ಸಂಕ್ರಾಂತಿ!


01561. ಮತ್ತೆ ಬಂತು ಸಂಕ್ರಾಂತಿ!

__________________________________

(ಎಲ್ಲರಿಗು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು👍😊🌷)

ಬಂತು ಬಂತು ಮತ್ತೆ ಸಂಕ್ರಾಂತಿ

ಮನವಾಗುತಿದೆ ಗಾಳಿಪಟದ ರೀತಿ

ಹಾರಾಡುತಿದೆ ನಭದ ಬಯಲಲಿ

ಸೂತ್ರದಲಿ ಬಂಧಿ ನಿರ್ಭೀತ ತೇಲಿ ||

ಸುಗ್ಗಿ ತಂದೊಗೆದ ಫಸಲ ರೀತಿಯೆ

ಹಿಗ್ಗು ಉಕ್ಕುಕ್ಕಿ ಸುರಿದ ಕುಸುರಿಯೆ

ಅದುರಿಸೊ ಚಳಿಯನ್ಹೆದರಿಸೆ ಬಿಸಿಲ

ತಂದೊಡ್ಡಲೊಟ್ಟುಗೂಡಿಸಿ ಉರುವಲ ||

ಸಿಹಿ ಎಳ್ಳು ಬೆಲ್ಲ ಕಾಳು ಕಬ್ಬಿನ ಜಲ್ಲೆ

ಸುಖ ಶಾಂತಿ ಸಮೃದ್ಧಿ ನಗುತಿಹ ನಲ್ಲೆ

ಮುಡಿದ ಹೂವೆಲ್ಲ ಘಮಘಮಿಸಿ ಸೊಗ

ಉಡುಗೆ ಮತ್ತೆಮತ್ತೆ ನೋಡಿಸುತೆ ಮೊಗ ||

ತ್ರಿವೇಣಿ ಸಂಗಮ ತೀರ್ಥಸ್ನಾನ ಸಂಭ್ರಮ

ನಂದಿನಿ ಪೂಜೆ ಗೃಹಿಣಿ ಅರಿಶಿನಕುಂಕುಮ

ಹೊಲದೆತ್ತುಗಳ ಸಿಂಗಾರ ಬಣ್ಣದಲಿ ಬೆರಗು

ಹುಲ್ಲ ಸುಟ್ಟ ಬೆಂಕಿ ದಾಟಿಸುವ ಪರಿ ಸೊಬಗು ||

ಮೊಟ್ಟಮೊದಲ ಸಂಕ್ರಾಂತಿ ಮಾವನ ಮನೆ

ಹಬ್ಬದೂಟದೊಡನೆ ಉಡುಗೊರೆಯ ಕಾಮನೆ

ಏನೆಲ್ಲ ನೆಪಗಳೊ? ಸಂಪ್ರದಾಯದ ಸೊಗಡು

ಚಳಿಯೋಡಿಸೊ ತಿನಿಸ ತಿನಲು ನೆಪ ನೋಡು ||

– ನಾಗೇಶ ಮೈಸೂರು

(Nagesha Mn)

(Picture source : Internet / social media )