01563. ಮೀರಲಾರೆನೊ ಮಾಧವ..


01563. ಮೀರಲಾರೆನೊ ಮಾಧವ..

________________________________

ಮೀರಲೆಂತೊ ನಿನ್ನಾಣತಿ ಘನ ಚೋರ

ನಾನಲ್ಲವೆ ನಿನಗೆ ಮೀಸಲಿಟ್ಟ ಮೀರಾ?

ನೋಡಿಲ್ಲಿ ನಾ ಕಲಿಯುಗದಲಿಹ ರಾಧೆ

ಜತೆಯಲ್ಲಿ ತಂದ ದ್ವಾಪರದ ನೆರಳಿದೆ ! ||

ನೋಡೊ ಮಾಧವ ಸಾಕೊಂದು ಪಿಂಛ

ಕಾಣಿಸಲದೆ ನಿನ್ನ ಜತೆ ಬ್ರಹ್ಮಾಂಡದಂಚ

ನೀನಿಲ್ಲದಿರಲೇನು ನಿನ್ನ ನೆರಳು ಸತತ

ಜತೆಗಿದೆ ನಿರಂತರ ನನ್ನೊಳು ನಿನ್ನ ಚಿತ್ತ ||

ಕಾಣೆಯ ಗೋಪಾಲ ನನ್ನೀ ತನ್ಮಯತೆ

ನುಡಿಸಿಹ ಬೆರಳಲ್ಲಿ ನಿನ್ನ ಹೆಸರಿನ ಗೀತೆ

ತಲ್ಲೀನ ಮುಚ್ಚಿದ ಕಣ್ಣ ತುಂಬ ನಿನ ಬಿಂಬ

ಅಮಲ ಧಾರಾಕಾರ ಹರಿದ ಭಕ್ತಿ ಸೌರಭ ||

ನಾನು ನಾನಲ್ಲ ನೀನು, ನೀನಾಗಿ ನಾನು

ನೋಡು ನೀನಿಲ್ಲದೆಡೆಯಿಲ್ಲದ ಕಾನೂನು

ಪರವಶತೆಯಲ್ಲ ಪರಕಾಯ ಪ್ರವೇಶವಿದು

ರಾಧೆಯೆ ಮೀರ ಅದೆ ಕೃಷ್ಣನ ಕೊಳಲಿದು ||

ಮೀರದಿರಲು ನಿಯಮ ನಿಯತಿಯ ಧರ್ಮ

ನೀ ದೊರಕದಿದ್ದರು ನಿನ್ನೆ ನೆನೆದು ಸರಿಗಮ

ನಿನ್ನಿಚ್ಚೆಯಂತೆ ಬಡಿಸಿ ಸ್ವಚ್ಚ ಪ್ರೇಮ ಜಗಕೆಲ್ಲ

ಸಾರುತಲೆ ಕಾಯ್ವೆ ಬಹತನಕ ನೀ ಬಹ ಕಾಲ ||

– ನಾಗೇಶ ಮೈಸೂರು

(Nagesha Mn)

(Picture source from Internet / social media received via Tejaswini Kesari – thank you ! 🙏👍😊)