01564. ಕಣ್ಣಿಗೆ ಬಿದ್ದ‘ನಲ್ಲ’


01564. ಕಣ್ಣಿಗೆ ಬಿದ್ದ‘ನಲ್ಲ’

_________________________

ನಗುವನಲ್ಲ ನಗುವನಲ್ಲ

ಬಿದ್ದು ಬಿದ್ದು ನಗುವನು

ನಕ್ಕ ಸದ್ದು ಎದೆಯ ಗುದ್ದಿ

ಎಬ್ಬಿಸಿಹುದು ನೆನಪನು || ನಗುವನಲ್ಲ ||

ಅವನಾವುದೊ ಕಾಲದಲಿ

ಬರಿ ಅವನಾಗಿದ್ದ ನೆನಪದು

ಅವನಿಲ್ಲದೆ ಬದುಕಿಲ್ಲವೆಂಬ

ಹವಣಿಕೆ ತೊಳಲಾಟವದು || ನಗುವನಲ್ಲ ||

ಅವನೊಬ್ಬನೆ ಇದ್ದ ಜಗವದು

ಮಿಕ್ಕವರಿದ್ದರೇನು ಕಾಣಿಸದು

ಕಂಡರೇನು ಮನ ಲೆಕ್ಕಿಸದು

ಅವನ ಹೊರತು ಬಾಕಿ ಬುದ್ಧು || ನಗುವನಲ್ಲ ||

ಅವನ ಹಿಂದಲೆದಾಟ ಸುತ್ತ

ಹಗಲಿರುಳು ಅವನೆ ಮೊತ್ತ

ಅವನಿಲ್ಲದೆ ನಾನಿಲ್ಲ ಎನ್ನುತ

ಕೆಳೆ ಬಳಗವನೆ ದೂರಾಗಿಸಿತ್ತ || ನಗುವನಲ್ಲ ||

ಇಂದವ ಕಣ್ಣಿಗೆ ಬಿದ್ದ ದೂರದೆ

ಎಬ್ಬಿಸಿಬಿಟ್ಟ ಸಂಚಲನ ಮನದೆ

ಇಂದವನಿಲ್ಲದಿರಲೇನು ಬರಿದೆ

ನಕ್ಕು ಮುಂದೆ ಸಾಗಲು ನೆನಪಿದೆ || ನಗುವನಲ್ಲ ||

– ನಾಗೇಶ ಮೈಸೂರು

(Nagesha Mn)

(Picture source internet / social media – received via Madhu Smitha – thanks! 👍😊🙏)