01566. ಹಾಳಾದವನ ದಾರಿ ಕಾದು..


01566. ಹಾಳಾದವನ ದಾರಿ ಕಾದು..

____________________________________

ಬರ್ತಾನಾ? ಬರ್ತಾನಾ?

ಕುಂಕುಮ ಸೀರೆ ತರ್ತಾನಾ?

ದಾರಿ ಇರ್ಲಪ್ಪ ಸುಕ್ಷೇಮ

ಜೀವ ಇರ್ಲಪ್ಪ ಜೋಪಾನ ||

ಹಾಳು ಒಬ್ಬಂಟಿ ಬೇಸರ

ಹೇಳಿ ಹೋದನಲ್ಲ ಹೆಸರ

ಯಾವೂರೊ ಕಾಣೆ ಹುಡುಗ

ಬರಬಾರದೇನೊ ಒಂಟಿ ಜಾಗ ? ||

ನೀರಲಿಟ್ಟ ಕಾಲಲಿ ಕಂಪನ

ನಿಲದೇಕೊ ಎದೆಗೂ ತಲ್ಲಣ

ಕಾಲ ನಿಂತಂತಿದೆ ಸ್ತಂಭನ

ಚುಂಬನ ಸಿದ್ಧ ತುಟಿಗು ಬಣ್ಣ ||

ಯಾವತ್ತೂ ಕಟ್ಟಿರದ ಗಂಟು

ಮುಡಿ ಸುತ್ತ ಮಲ್ಲಿಗೆ ನಂಟು

ನಿನ್ನ ಮೆಚ್ಚಿಸೆ ಬೈತಲೆ ಬೊಟ್ಟು

ನಿನಗೆಂದೆ ಉಟ್ಟ ಸೀರೆ ಸೊಗಡು ||

ಬಾರೊ ಮನೆಹಾಳದ ಭಾವ

ಬಾಯಿಬಿಟ್ಟು ಹೇಳದು ಜೀವ

ನೀನರಿತವನಾದರೆ ಈ ಮನಸ

ಕನಸಿಲ್ಲದೆಯು ಆದಂತೆ ನನಸು ||

ಕೆನ್ನೆಗೊತ್ತಿದ ಹಸ್ತ ನೋಯುತ

ಜಾರಿಸೊ ಮುನ್ನ ಕಂಬನಿ ಮೊತ್ತ

ಬೆನ್ನಿಂದ ಬಂದು ಮುಚ್ಚಿ ಕಣ್ಣನು

ಮೈಮರೆಸಿಬಿಡೊ ಮುಗ್ದ ಹೆಣ್ಣು ನಾ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Mohan Kumar D M – thanks a lot sir 🙏👍😊)

01565. ಓ ! ತೇಜೋಮಯ ದೇವಾ…!!


01565. ಓ ! ತೇಜೋಮಯ ದೇವಾ…!!

__________________________________

ಸೂರ್ಯನೆದುರ ಹಣತೆ

ನಾನೆಂದುಕೊಂಡರೆ ಘನತೆ

ನೀನುಗುಳುವದೇ ಅಗ್ನಿಯಲಿ

ನಿನಗೆ ಮಂಗಳಾರತಿ ಧೂಪ ||

ನೀನುದಯ ಅಸ್ತಮಯ

ಎಂದೆನುವ ಸುಳ್ಳಿನ ವಿಷಯ

ನಿಂತಲ್ಲೆ ನಿನ್ನ ಸುತ್ತುವ ಧರಣಿ

ಕಣ್ಣುಮುಚ್ಚಾಲೆ ಬರಿ ಅವಳಾಟ ||

ನಿನ ನುಂಗಿತೆನ್ನುವ ಗ್ರಹಣ

ಲೆಕ್ಕಾಚಾರದ ಮುಠ್ಠಾಳತನ

ಅಡ್ಡ ನಿಂತವರಾಚಿಚೆ ಕಾಣದು

ನೀನಿದ್ದಲ್ಲೆ ಇರುವ ಗುಂಡುಕಲ್ಲು ||

ನೀನಿರುವ ಅಗಾಧ ದೂರಕು

ಸೇತುವೆ ಪ್ರವಹಿಸುವ ಬೆಳಕು

ನಮಿಸಿ ಪೂಜಿಸುವ ಜೀವ ಜಗಕೆ

ನೀನೆ ಆಧಾರ ಶಕ್ತಿಯ ಒರತೆ ||

ನಿಜ ನೀನಲ್ಲ ಸ್ಥಿರ ನಿಂತ ನೀರು

ಸಾಪೇಕ್ಷದೆ ಚಲಿಸುವ ಕೊಸರು

ಚಲಿಸೊ ನಿಹಾರಿಕೆ ಆಕಾಶಗಂಗೆ

ಸುತ್ತುವ ಬ್ರಹ್ಮಾಂಡ ಚಲನೆ ಸಿಕ್ಕೆ ||

ನೀ ಸಾಂಕೇತಿಕ ಶಕ್ತಿ ಶಾಖ ದ್ಯುತಿ

ನಾ ಸಾಂಕೇತಿಕ ಸೃಷ್ಟಿ ಜಾಗೃತಿ

ಜೀವಾಜೀವ ನಿರ್ಜೀವ ಸೇತುವೆ ನೀ

ತನ್ಮೂಲಕ ಇಹಪರ ಹವಣಿಸಿ ನಾ ! ||

– ನಾಗೇಶ ಮೈಸೂರು

(Nagesha Mn)

(Picture source internet / social media received a received via Mohan Kumar D M – thank you very much sir! 🙏👍😊)