01567. ಬರಲಿ


01567. ಬರಲಿ

___________________

ಬರಲಿ ಬಿಡಿ ಬರಲಿ

ಪುಂಖಾನುಪುಂಖ ಕಷ್ಟ

ಕೇಶದಂತೆ ಬೆಳೆಯಲಿ

ಬಂದಂತೆ ಕತ್ತರಿಸುತ ||

ಬರಲಂತೆ ಹುಣ್ಣಿನ ರೀತಿ

ಸುಲಭ ತೊಲಗದ ಸುಖ

ತೊಗಲಿಗಂಟಿ ಕಾಡಲಿ ಸದಾ

ಮುಲಾಮು ಹಚ್ಚಿ ಹದಕಿಡುತ ||

ಬರಲಿ ಕಾಡುವ ಪೀಡೆಗಳೆಲ್ಲ

ಒಂದರ ಹಿಂದೊಂದು ಸಾಲು

ಉಗುರಂತೆ ಚಿಗುರಿದರೆ ಸರಿ

ಕತ್ತರಿಸಿ ಎಸೆ ಬೆರಳು ಮುಕ್ತಾ ||

ಬರುತಿರಲಿ ಬೆವರಂತೆ ಧಾರೆ

ಬಿಸಿಲಿನ ಬೇಗೆಯಲಿ ಹರುಷ

ತೊಡೆದು ವರೆಸಿದರು ಉಕ್ಕುತ

ಮತ್ತೆ ಮತ್ತದೆ ಧಾರಾಕಾರದಲಿ ||

ಬರುವುದು ಚರಾಚರ ನಿಯಮ

ಬಾರದಿದ್ದರೆ ಎಲ್ಲಿಯೊ ಲೋಪ

ಹಿತವಾದದ್ದು ಬಂದು ಕಾಡಲಿ

ಅಹಿತ ಕತ್ತರಿಸಿ ಚೆಲ್ಲೊ ಸರಕಾಗಲಿ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Facebook friend- thank you ! 🙏😊👍)