01568. ರಾಸಲೀಲೆ ಗೋಪಾಲ


01568. ರಾಸಲೀಲೆ ಗೋಪಾಲ

________________________________

ರಾಸಲೀಲೆ ಕ್ರೀಡೆ ಗೋಪಾಲ

ಬಾಲೆಯರೊಡನೆ ಆಡುವ ಕಾಲ

ಹಾಡಲಿತ್ತು ಮೋದ ವಿನೋದ

ಕಾಡಲಿತ್ತು ಸರೋವರದೇಕಾಂತ ||

ನಟ್ಟಿರುಳಲಿ ಕಟ್ಟುನಿಟ್ಟು ಬಚ್ಚಿಟ್ಟು

ಬಂದು ಸುತ್ತ ನೆರೆದುಡುಗೆ ಬಿಚ್ಚಿಟ್ಟು

ಸರಿ ಹೊತ್ತಲಿ ಲೆಕ್ಕಿಸರಲ್ಲ ನಡುಕ

ನೋಡಿಹ ಹುಣ್ಣಿಮೆ ಚಂದಿರಗು ಪುಳಕ! ||

ಅವನಿದ್ದೆಡೆ ಭೀತಿಯೆ ನಿರ್ಭೀತಿ

ಅವನೊಬ್ಬನೆ ಸಾಕೆನ್ನುವ ಪ್ರೀತಿ

ಹಂಚಿಕೊಳದ ಪ್ರೇಮಕು ವಂಚನೆ

ಹಂಚಿಕೊಂಡರೆಂತೊ ನಿರ್ವಂಚನೆ? ||

ಚೆಲ್ಲಿದರೆಲ್ಲ ಚೆಲ್ಲು ನಗೆ ಮಲ್ಲಿಗೆಯ

ಚೆಲ್ಲಾಟದಲೆ ಉರುಳಿದೆ ಸಮಯ

ಯಾರಿಗಿಲ್ಲ ಪರಿವೆ ನಲಿವ ಹೃದಯ

ಪ್ರತಿ ವದನದಲಾಗಿ ಚಂದ್ರೋದಯ ||

ಗುಟ್ಟಾಗಿಡದ ಗುಟ್ಟಿದು ಸಗಟು

ರಾಸಲೀಲೆ ಪಂಡಿತರಿಗೆಒಗಟು

ಪಾಮರನಿಗದು ದೇವನದ್ಭುತದಾಟ

ಭಾಮಿನಿಯರಿಗದೆ ಆರಾಧನೆ ತೋಟ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media via FB friends / posts)