01571. ಚಂದಿರನೊಡನೆ ಚಂದ್ರಿಕೆಗೆ ಸ್ಪರ್ಧೆ..!


01571. ಚಂದಿರನೊಡನೆ ಚಂದ್ರಿಕೆಗೆ ಸ್ಪರ್ಧೆ..!

_____________________________________________

ಹುಡುಕುತ್ತಿದ್ದಾಳವಳು ಹುಡುಗಿ

ಕಳುವಾಗಿ ಹೋಗಿದೆಯಂತೆ..

ಯಾರೊ ಕದ್ದವಳ ಮುಖಚಂದ್ರಿಕೆ

ಹೊದಿಸಿಬಿಟ್ಟಿಹರಂತೆ ಚಂದ್ರಗೆ! ||

ಗೊತ್ತಾಗದಿರಲೆಂದು ಕೊರಮ

ಮೋಡದ ಪರದೆ ಅಡ್ಡ ಹಿಡಿದು

ಸೆರಗೊ ಮುಸುಕೊ ಸರಿ ಹೊದ್ದು

ಮರೆಮಾಚಿಹನಂತೆ ಮೋಸದಲಿ.. ||

ಬಿಡು ಅವಳೆನಲ್ಲ ಅರಿಯದ ಹೆಣ್ಣು

ತನ್ನದೆ ಕಣ್ಕಾಂತಿ ಗುರುತ್ಹಿಡಿದು

ಯೋಜನ ದೂರದಲಿಹ ಸುಧೆಗು

ಬಲೆ ಹಾಕಿ ಛವಿ ಸೆಳೆದಿಹಳು ಕಣ್ಣಲ್ಲೆ ! ||

ಅವನೊ ತಿಂಗಳ ಹುಣ್ಣಿಮೆ ಪ್ರಖರ

ದೂರವಿರುವ ಭರವಸೆ ಆಧಾರ

ಅವಳೊ ದಿನನಿತ್ಯದ ಪೌರ್ಣಮಿ

ಸುಲಭಕೆ ಬಿಡಳು ಕಾಯುವ ಸಹನೆ ! ||

ಯಾರು ಗೆಲುವರೊ ಕುತೂಹಲ ಸ್ಪರ್ಧೆ

ನೋಡೆ ನೆರೆದ ಗಗನದ ಬಯಲು

ಗೊತ್ತವಳಿಗಿಲ್ಲ ಕ್ಷಯವೃದ್ಧಿ ಕರ್ಮ

ಇಂದಲ್ಲ ನಾಳೆ ಗೆಲ್ಲುವ ಮನೋಧರ್ಮ ||

– ನಾಗೇಶ ಮೈಸೂರು

(Nagesha Mn)

(Picture source : Internet / social media (Pinterest) received via Madhu Smitha – thank you 🙏😊👍)

01570. ಬಸವನೊಡನೆ ಬಸವ..


01570. ಬಸವನೊಡನೆ ಬಸವ..

________________________________

ನೀ ಮೂಗ ಬಸವಣ್ಣ

ನಾ ಸಜೀವ ಹಸುವಣ್ಣ

ನಿನಗೊ ನಿತ್ಯ ದಸರಾ ವೈಭವ

ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! ||

ನೋಡು ಕುತ್ತಿಗೆಗೆ ಹಾರ

ಮಿರಮಿರ ಮಿಂಚುವ ಸಾರ

ಕಪ್ಪಿದ್ದರು ನೆತ್ತಿಗೆ ಹೂವು ದವನ

ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? ||

ನಿನಗೊ ಮಂಗಳಾರತಿ ಪೂಜೆ

ನಮಿಸುವರಡ್ಡಬಿದ್ದು ಬಿಡದೆ ಗೆಜ್ಜೆ

ಕತ್ತ ಸರಪಳಿ ಗಂಟೆ ಸಿಂಗಾರಕೊಡವೆ

ಬತ್ತಲೆ ಮೈಲಿ ಸುತ್ತುವೆ ಯಾರಿಗಿಲ್ಲ ಪರಿವೆ ||

ಕೂತಲ್ಲೆ ಸುಖಾಸನ ನಿನದು

ಸುಖಾಸೀನಕೆಲ್ಲಿ ಹೊಟ್ಟೆಪಾಡು?

ದುಡಿಯದೆ ಪಡೆಯುವೆ ನೀನೆಲ್ಲ ಬಿಟ್ಟಿ

ದಣಿಸಿ ಮಣಿಸಿದರು ನನಗಿಲ್ಲ ದೊರೆ ಖಾತರಿ! ||

ಆದರು ಬಿಡು ನೀ ಮಹಾತ್ಮ

ಮುಗಿಯೆ ಕಾಲಿಗೆ ಮುತ್ತೀವೆ ಹಣೆಗೆ

ನಿಜದಲಿ ಬಂದೆರಗುವೆ ನಿನಗೆ ದಿನನಿತ್ಯ

ಹಾಳು ಹಣೆ ಕೆರೆತಕೆ ಬೇರೆ ದಾರಿ ಮತ್ತಿಲ್ಲಾ ! ||

ನೀ ಪುಣ್ಯಕೋಟಿ ಪುಣ್ಯವಂತ

ಚಿರಂಜೀವಿ ಯುಗಾಂತರ ಮೂರ್ತ

ಕಟುಕನು ಬಂದು ಕೈ ಮುಗಿವನಲ್ಲಾ ನಿನಗೆ

ಅವನ ಕೈಗೆ ಬಂದಾಗ ಕತ್ತಿ ಗುರಿ ನನ್ನ ಕುತ್ತಿಗೆಗೆ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Chandrashekar Hs – thank you 🙏👍😊)

01569. ಬೊಗಸೆ ತುಂಬಿದ ಭಗವಾನ್..


01569. ಬೊಗಸೆ ತುಂಬಿದ ಭಗವಾನ್..

_______________________________________

ಬೊಗಸೆ ತುಂಬಿದ ಭಗವಂತ

ಹಸ್ತದಲೆ ಆಗಸ ಬಂದಿಳಿದಿತ್ತ

ಕರ ಪೂರ ನೆಲೆಸಿ ಸ್ವಾಮಿ ಚಿತ್ತ

ಆರಾಧನೆಗೆ ಸ್ವತಃ ತಾ ನೆಲೆಸಿತ್ತ ||

ಏನೇನಪ್ಪ ನಿನ ಲೀಲೆ ಬಾಲಕ?

ನೋಡು ನೀನೆಷ್ಟು ಜನಕೆ ಚಾಲಕ !

ನಿನ್ನ ವ್ರತ ಹಿಡಿದವರ ಕಥೆ ಪ್ರಭು

ನಖಶಿಖಾಂತ ಆವರಿಸುವೆ ನೀ ವಿಭು ||

ಅಂಗೈ ಹುಣ್ಣಿಗೆ ಬೇಡ ಕನ್ನಡಿ ದೇವ

ಅಂತೆಯೆ ಮುಂಗೈ ನೋಟದ ಭಾವ

ನೀನಿರಲಲ್ಲಿ ನಿತ್ಯ ಸುಪ್ರಭಾತ ಸಂತ

ನಡೆವುದೆಲ್ಲ ಶುಭ ಜಪಿಸೆ ಮಣಿಕಂಠ ||

ಕಟ್ಟುವರು ಇರುಮುಡಿ ಹತ್ತಿ ಮಲೆಯ

ಕಲ್ಲು ಮುಳ್ಳ ಹಾಸಿಗೆ ಹುಡುಕೆ ನೆಲೆಯ

ಹದಿನೆಂಟರ ಎತ್ತರ ಏರುತ ಜಗದೇಕ

ನೀನಿಲ್ಲಿರೆ ಹಸ್ತದೆ ನಿಜಕು ಏರಲೆಬೇಕಾ? ||

ನಮಿಪೆ ಬೊಗಸೆಯಲೆ ಸ್ವಾಮಿ ಅಯ್ಯಪ್ಪ

ಮಡಚಿದ ಹಸ್ತದೆ ನೀ ಬಂಧಿ ಆಗಿರು ತಪ್ಪ

ನೀನಿದ್ದರೆ ನನ್ನಲ್ಲಿ ನಾ ಹತ್ತಲಿ ಬಿಡಲಿ ಬೆಟ್ಟ

ಕಾಯುತ ಹತ್ತಿಸುವೆ ಜೀವನದುದ್ದಕು ದಿಟ್ಟ ||

– ನಾಗೇಶ ಮೈಸೂರು

(Nagesha Mn)

(Picture from Internet / social media sent by Chandrashekar Hs – thank you! 😊👍🙏)