01574. ಸಾಕಿದ್ದ ಜೀವಗಳು…


01574. ಸಾಕಿದ್ದ ಜೀವಗಳು…

____________________________

ಏನಪ್ಪ ಮಹಿಮೆ ಜೀವಜಾಲ

ಕಂಡಿರ ಚಂದ ಮಾರ್ಜಾಲ?

ಅಕ್ಕರೆ ಸಕ್ಕರೆ ಸುಖಸಂಸಾರ

ಸಾಕಿದವಳ ಮುದಕೆ ಆಧಾರ ||

ಯಾರೆಂದರು ಅಪಶಕುನ ಬೆಕ್ಕು?

ಸಾಕೊಮ್ಮೆ ನೋಡದರ ಗಮ್ಮತ್ತು !

ಮಡಿಲಲಾಡುವ ಕಂದನ ಲೀಲೆ

ಕಣ್ಮುಚ್ಚಿ ನಿದಿರೆ ತೊಡೆಗಿಟ್ಟು ತಲೆ ||

ಕಣ್ಣಿಗಿಟ್ಟಂತೆ ಬಣ್ಣದಾ ಮಸೂರ

ಮಿಂಚು ಗೋಳ ಕಾಂತಿ ವಿಸ್ತಾರ

ಮುತ್ತುರತ್ನಪಚ್ಚೆವಜ್ರವೈಢೂರ್ಯ

ಹೆಸರಿನ್ನು ಇಡದ ನಯನ ಸೂರ್ಯ ||

ಅಂತಿಂತದ್ದಲ್ಲ ಬಂಧದನುಬಂಧ

ಬೇರಾಗಲೆಂತು? ಜೀವಜೀವ ಬೆಸೆದ

ಮಾತಿಲ್ಲ ಸದ್ದಲೆ ಹೊಸೆದ ಬಾಂದವ್ಯ

ಮನುಜರ ಮೀರಿದ ನಂಟಿನ ಕಾವ್ಯ ||

ಬೇರಾದ ಹೊತ್ತಿದು ಕಣ್ಣೀರು ಕೋಡಿ

ಬಳುವಳಿ ಕೊಟ್ಟರು ನೆನಪಿನ ರಾಡಿ

ಜತೆಗಿಲ್ಲವೀಗ ಮಾರ್ಜಾಲ ಸಂಸಾರ

ಒಂಟಿಯಾಗಿಸಿ ಯಾಕಾದವೊ ದೂರ ? ||

– ನಾಗೇಶ ಮೈಸೂರು

(Nagesha Mn)

(Picture source Nalini Magal – thank you very much 🙏👍😊)

01573. ತಂ…ಬಾಕು..


01573. ತಂ…ಬಾಕು..

__________________________

ಬಾಕು ತಂಬಾಕು

ಅಲುಗಿಲ್ಲದೆ ಇರಿವ ಸರಕು

ಸೇದಿದರೆ ಸಿಗರೇಟು

ತನು ಸೇದಿ ಬತ್ತಿ ಎದುರೇಟು! ||

ಸೇದಿಸುವ ಪೊಗರು

ವಯಸಿನ ಹುಲಿಯುಗುರು

ದಮ್ಮು ಕೆಮ್ಮು ಖುದ್ಧು

ಬಿಡದ ದೊಡ್ಡಸ್ತಿಕೆ ಸರಹದ್ದು ||

ಕೈಲಿದ್ದರೆ ಉರಿಬತ್ತಿ

ದೊಡ್ಡವನೆಂಬ ಹುಸಿ ಮಸ್ತಿ

ಹುಚ್ಚುಮುಂಡೆ ಮನಸು

ತಿಕ್ಕಲಾಟ ಅರೆಬರೆ ಕೂಸು ||

ಪ್ರಾಯದಲ್ಲಿ ಚಪಲ

ಶೋಕಿಗಾಗುತ ಮನ ಚಂಚಲ

ಶುರುವಾಗುವ ಹವ್ಯಾಸ

ನೋಡುನೋಡುತೆ ಮಾಡಿ ದಾಸ ||

ಬಿಡಲಾಗದ ಮೋಹ

ತಂದಿಟ್ಟರು ಕಾಯಿಲೆ ತರತರಹಯಾಕೆ ಬೇಕೊ ಪಾಡು ?

ಸೇದಿದ ತನು ಅಸ್ತಿಪಂಜರ ಗೂಡು ||

– ನಾಗೇಶ ಮೈಸೂರು

(Nagesha Mn)

(Picture source – Wikipedia)

01572. ಮೊಗ್ಗೆರಡರ ಮಾತುಕಥೆ…


01572. ಮೊಗ್ಗೆರಡರ ಮಾತುಕಥೆ…

____________________________

ನಾನು ಕಮಲೆ ನೀನು ಕಮಲೆ

ನಮ್ಮಿಬ್ಬರದು ಒಂದೇ ಅಮಲೆ

ನೀ ಕೋಮಲೆ ನಾನೂ ಕೋಮಲೆ

ನೀ ರವಿಯತ್ತ ರವಿ ನನ್ನತ್ತ ಕೊರಳೆ! ||

ನೀ ನಳಿನಿ ಬಳುಕಾಟ ನಿಂತಲ್ಲೆ

ನಾ ಧಾರಿಣಿ ಪಸರಿಸುವ ನೈದಿಲೆ

ನೀನಿರುವೆ ನೀರೊಳಗಿನ ಕುಸುಮ

ನೀರೆ ನಾನಾಗಿಹೆ ಸುಮ ಸಂಗಮ ||

ನೀ ಬಳ್ಳಿಯ ತುದಿಗಿಟ್ಟಿಹ ಕಿರೀಟ

ನನ್ನಂದ ಸೊಬಗೊದ್ದಿಹ ಮುಕುಟ

ನೀ ಕಮಲದೆಲೆ ನಡುವಿನ ಕುಸುರಿ

ನಾ ಬಳ್ಳಿ ಬಳುಕು ನಡುವ ವೈಯಾರಿ ||

ಬಿಡೆಂತ ಹೋಲಿಕೆ ನಮ್ಮಿಬ್ಬರ ಮಧ್ಯೆ

ಬೇಕಿಲ್ಲ ನಮಗೆ ವಿಶ್ವ ಸುಂದರಿ ಸ್ಪರ್ಧೆ

ನೀನು ನಾನು ಆನು ತಾನು ಸೃಷ್ಟಿ ಕುಣಿಕೆ

ಸಿರಿಯೆಮ್ಮ ಸೊಗಡು ಚಂದ ಯೌವನಕೆ ||

ನಿನ್ನೊಡನಿಂದು ಬರೆವೆ ನಾ ಹೊಸ ಭಾಷ್ಯ

ನಿನ್ನ ಮುಡಿದು ಮೇಲೇರಿಸುತ ಸಾಂಗತ್ಯ

ಖಾಲಿ ಕೇಶದೊಡವೆ ನೀನಾಗು ಮೆರುಗು

ಮಿಕ್ಕಿದೊಡವೆ ಜತೆ ನಾವಾಗಿ ಜಗದ ಬೆರಗು ||

– ನಾಗೇಶ ಮೈಸೂರು

೨೪.೦೧.೨೦೧೮

(ಚಿತ್ರ ಪಟ ರಾಜ್ ಆಚಾರ್ಯ ರ ಕವನದ ಪೋಸ್ಟಿನಿಂದ ಎರವಲು ಪಡೆದಿದ್ದು – ಧನ್ಯವಾದ ರಾಜ್ ಸಾರ್🙏👍😊)