01576. ಕಾಡುವ ಪರಿ..


01576. ಕಾಡುವ ಪರಿ..

_______________________

ಕಾಡಲಿ ಕನಸಲ್ಲಿ

ಕಾಡುವವನ ಕನಸು

ಕಾಡಿಸಿರೆ ಮೈಯ ಪುಳಕ

ಕಾಡಲಿ ತನುವಾಗಿ ಜಳಕ! ||

ಕಾಡಲಿ ಬಂದಪ್ಪುತ

ಕಾಡಿಸಿರೆ ಅಪ್ಪಿದ ಹಸ್ತ

ಕಾಡಾಗುತ ಮನ ವಿಹರಿ

ಕಾಡಿದವನಪ್ಪುಗೆ ಆಭಾರಿ !||

ಕಾಡುವಾಟ ಬೆನ್ನಟ್ಟುತ

ಕಾಡಿರಲವ ಬೆನ್ನಲ್ಲಪ್ಪುತ

ಕಾಡದಿರದೆ ಬೆಸೆದ ಹಸ್ತ?

ಕಾಡೆ ಬಳಸಿದ ತೋಳರ್ಥ! ||

ಕಾಡುವದೆ ಮುಂದೆ

ಕಾಡಲಿ ಹುಡುಕಾಡುತ

ಕಾಡಿಸಿರೆ ಸ್ಪಂದನ ಸ್ಪರ್ಶ

ಕಾಡೊಳಗ ಅವ್ಯಕ್ತ ಹಿತ ! ||

ಕಾಡದೆ ಬಿಡನವನು

ಕಾಡಿದ್ದು ಸಾಕೆನಿಸದಲ್ಲ

ಕಾಡಿನೊಳಗ್ಹೊಕ್ಕು ಕಲೆತು

ಕಾಡಿ ಪ್ರಕೃತಿಗಾಗೆ ಪುರುಷ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 🙏👍😊)

01575. ಅಪೂರ್ವ ಸಂಗಮ..!


01575. ಅಪೂರ್ವ ಸಂಗಮ..!

____________________________

ಏನಿದು ರಾಗ? ನುಡಿಸಲೆಂತ ಸೊಗ

ಲೀಲಾಜಾಲದೆ ಹರಿಯುತಾ ಸರಾಗ

ಯಾವುದೀ ಕಂಠ? ದೈವದತ್ತ ಸ್ವರವೆ !

ಶಾಪಗ್ರಸ್ತ ಗಂಧರ್ವ ಭುವಿಗಿಳಿದ ತರವೆ ||

ಯಾವುದಿದು ವಾದ್ಯ ವಾದನದ ಖಾದ್ಯ

ಪಂಚಭಕ್ಷ್ಯ ಪರಮಾನ್ನ ಬಡಿಸುತಿರೆ ಧನ್ಯ

ಜನ್ಮದಾ ಸಂಸ್ಕಾರ ಪುಣ್ಯಾ ಯೋಗಾಯೋಗ

ಕಲೆಯಾಗಿ ಕರಗತ ಪರವಶವಾಗಿಸಿ ಸಂಯೋಗ ||

ಏನೀ ಅದ್ಭುತ ಲಯ! ಹೆಜ್ಜೆಯಲೆ ಲಾವಣ್ಯ

ನಾಟ್ಯದ ಹೇಷಾರವ ಸಂಚಲನೆ ಭ್ರಮೆ ಭವ್ಯ

ರಾಗತಾಳಗಾನ ಮೇಳವಿಸೆ ಸಂಭ್ರಮ ಅನನ್ಯ

ಕಟ್ಟಿಕೊಡುವ ವೈಭವ ಅನುಭೂತಿಯ ಅಕ್ಷಯ! ||

ಯಾವುದೀ ಅದ್ಭುತ ರಚನೆ ಪದಭಾವ ತಂತಾನೆ

ಅನುರಣಿಸೆ ಬೆರೆತು ಸುಗಮ ಸಂಗೀತ ಭಾವನೆ

ಯಾವನವನವಳಿಟ್ಟ ರಾಗ ತಾಳ ಸಂಯೋಜನೆ

ತಂದೆಲ್ಲ ಕಲೆಯೊಟ್ಟು ಸಂಭ್ರಮದೌತಣದ ಮೇನೆ ||

ಎಲ್ಲ ಮೀರಿದತಿಶಯ ಅದ್ಭುತ ರಸಿಕ ಹೃದಯ

ಆಸ್ವಾದಿಸುತೆಲ್ಲ ಸಂವೇದನೆ ಧನ್ಯತೆ ಸಂದಾಯ

ಪ್ರೇರಕ ಶಕ್ತಿ ಪೂರಕ ಅಪೂರ್ವ ಸಂಗಮ ಸೇರೆ

ಸಮಾನ ಮಿಡಿತ ಬಂಧದೆ ಬಂಧಿಯಾಗಿ ಮನ ಸೆರೆ! ||

– ನಾಗೇಶ ಮೈಸೂರು

(Nagesha Mn)

(Picture source from Internet / social media mostly received via FB friends – thank you all 😊🙏👍)