01579. ಅರ್ಧನಾರಿ…


01579. ಅರ್ಧನಾರಿ…

________________________

ಇವಳು ಅರ್ಧನಾರಿ

ಕಾಣುವರ್ಧ ಬಹಿರಂಗ

ಚಂದದ ಸಿಂಗಾರ ಬೊಟ್ಟು

ಬಣ್ಣದ ತುಟಿ ಬಿಡದು ಗುಟ್ಟು ! ||

ಕಾಣುವರ್ಧ ಮಾಯೆ

ತಪ್ಪಿಸಲೆಂತು ಆಕರ್ಷಣೆ?

ಕಣ್ಣೋಟದ ಬಲೆ ಕೆಡವೆ ಖೆಡ್ಡ

ಶರಣಗತ ಪುರುಷ ಅವಳ ಅಡ್ಡಾ ! ||

ಕಾಣದರ್ಧ ನಾರೀಶ್ವರ

ಆಗಿರಬಹುದು ಪುರುಷಚಿತ್ತ

ಮೀನಹೆಜ್ಜೆ ನದಿಮೂಲ ಕಡಲಾಳ

ಅವಳಲೆ ಸಮಷ್ಟಿತ ಅದೃಶ್ಯ ಸ್ವರೂಪ ||

ಜಗದೆಲ್ಲವಲ್ಲೆ ಅಂತರ್ಗತ

ಚಂಚಲ ಚರ ಪ್ರಕೃತಿ ಚಲನೆ

ಸ್ವಾರ್ಥ ಕುಟಿಲ ಕುಹಕ ಮೋಹಕ

ಪ್ರೀತಿಯ ಜಾಡಲಿ ಮಿಕ್ಕೆಲ್ಲವು ಧ್ವಂಸ ! ||

ಬಿಡು, ಅವಳನರಿತವರಾರಿಲ್ಲಿ

ಆ ಶಿವನೆ ಅರ್ಧ ನಾರೀಶ್ವರನಾದ

ಅರಿವ ಕುತೂಹಲಕೊಂದಾದರು ಇಲ್ಲ

ವ್ಯರ್ಥಸಾಹಸ ಯಾರಿಗು ಜಯವಿಲ್ಲ ಇನ್ನೂ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Madhu Smitha – thank you 🙏👍😊)

01578. ನಮ್ಮ ನಿಮ್ಮ ನಡುವಿನ ಕಥನ


01578. ನಮ್ಮ ನಿಮ್ಮ ನಡುವಿನ ಕಥನ

_____________________________________

ಎಲೆ ಮರೆಯಲ್ಲೊಂದು ಕಾಯಿ

ಕೈ ಬೆರಳನದ್ದೆ ಭಾವನೆ ಶಾಯಿ

ಬರೆದವೆಷ್ಟೊ ಮನಗಳ ತಪನ

ನಮ್ಮಾ ನಿಮ್ಮ ನಡುವಿನ ಕಥನ ||

ಬರೆವೆನೆಂಬ ತುಡಿತದ ಬಾಲ

ಬರವಣಿಗೆ ಭಟ್ಟಿ ಇಳಿಸೊ ಕಾಲ

ಮೂಡಿಸದೆ ಮೂಡಣದ ಸಾಲು

ಪದವಾಗುತ ಕುಣಿಸುವ ತೆವಲು ||

ಸಂಕೋಚ ಬಿಗಿ ಕೋಶದ ಭಿತ್ತಿ

ಗೊತ್ತಾಗದಂತೆ ಹೊದಿಕೆ ಸುತ್ತಿ

ಒಳಗೊಳಗೇನೊ ಭೀತಿ ಪ್ರವೃತ್ತ

ಮೀರಿಸಲದ ಪದವಾಗ ನಿವೃತ್ತ ||

ಹೆಸರಾಗಿಬಿಡೊ ಕನಸುಗಳ ಆಸೆ

ಆಗದು ಹೋಗದು ತಡೆದ ನಿರಾಸೆ

ಕುಗ್ಗಿಸಿ ಜಗ್ಗಿಸಿ ತಗ್ಗಿದುತ್ಸಾಹ ಶೂನ್ಯ

ಮತ್ತೆಲ್ಲಿಂದಲೊ ಬಡಿದೆಬ್ಬಿಸಿ ಕ್ರಿಯಾ! ||

ಎಲ್ಲರ ಕಥೆಯ ಪಲುಕಿದೆ ಪಲ್ಲವಿ

ಅಲ್ಲಿಲ್ಲೊಂದು ಹಣ್ಣಾಗುತಲಿ ಸವಿ

ಹೂವೊ ಹಣ್ಣೊ ಪಾಲಿನಲಿಹ ಭಾಗ್ಯ

ನಿನ್ನ ಪಾಡಿಗೆ ನಿನ್ನ ಕರ್ಮವಿರೆ ಸೌಖ್ಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01577. ಹೋರಾಟ..


01577. ಹೋರಾಟ..

________________________

ತೊಟ್ಟಿಕ್ಕುತಿದೆ ಕಂಬನಿ

ಮುತ್ತಿಕ್ಕುತ ಲಲ್ಲೆ ಚುಂಬನ

ಹರಿದ ಧಾರೆ ನದಿಯಲ್ಲ

ಮುತ್ತಿಗೆ ಕದನವೆನ್ನುವುದಿಲ್ಲ ! ||

ಒಡ್ಡಿದ ಕೈಯಲ್ಲೆ ಭೂಪಟ

ಸ್ವತಃ ಬರೆಸಿಕೊಂಡ ಚಿತ್ರಪಟ

ಹಣೆಬರಹದ ಗೆರೆ ಕಾಣದು

ಕಂಡ ಹಸ್ತ ಬದುಕ ಬದಲಿಸದು ||

ಗೆರೆಗಟ್ಟಿದ ನೆರಿಗೆ ಹಣೆಗೆ

ಮುಚ್ಚಲಷ್ಟು ವಿಭೂತಿ ನೊಸಲಿಗೆ

ಉದುರುವ ಹುಡಿ ಭಸ್ಮದಲಿ

ಸುಡಲಾಗ ಸಕಲ ಜನ್ಮದ ಕರ್ಮ ||

ಗೋಳಾಟದ ಬಾಳ ಬವಣೆ

ಮಂದಹಾಸ ಬಚ್ಚಿಟ್ಟ ಪರಿ ಕಾಣೆ

ಹೋರಾಡು ತಲೆ ಬದುಕಲ್ಲಿ

ಬದುಕಾಗ ಬರಿ ಭಾವದಮಲಲಿ ||

ದ್ವಂದ್ವದಲದೆ ಗುದ್ದಾಟ ತೆನೆ

ಸದ್ದ ನಡುವೆ ಬೆಳೆ ಸತ್ವ ಶೋಧನೆ

ಖಾಲಿ ಸಡಗರ ವ್ಯರ್ಥಾಲಾಪ

ಪೂರ್ಣವಾಗ ಬಿತ್ತಿ ಬೆಳೆದ ಸ್ವರೂಪ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)