01631. *ಕುಡಿದ ಕವಿ ತೊದಲಾಟ…*


01631. *ಕುಡಿದ ಕವಿ ತೊದಲಾಟ…*

*ಕುಡಿದ ಕವಿ ತೊದಲಾಟ…*

_________________________

(ಉದಾಸ ಮನಕ್ಕೊಂದು ‘ಶಾಶ್ವತ’ ತಾತ್ಕಾಲಿಕ ಪರಿಹಾರ..)

ಕುಡಿದು ಮರೆಯುವ ಸೊಗಸು

ಭ್ರಮೆ ಲೋಕದಡಿ ಗುಣುಗುಣಿಸು

ಮೈ ಮರೆಸೆಲ್ಲ ತರ ಮುನಿಸು

ತೊದಲು ಮಾತಾಗಿ ಸ್ಪುರಿಸು.. ||

ಕವನೆ ತಾನೆ ಮತ್ತಿನ ಮದಿರೆ

ಜತೆ ನೀಡೆ ಬೇಡವೆ ಮದಿರೆ ?

ಗುಟುಕರಿಸೆ ಹನಿ ಮುಖ ಕಿವುಚಿ

ಹುಳಿ ಕಹಿ ಒಳಗೇನೊ ತಿರುಚಿ..||

ಹೊಕ್ಕಂತೇನೊ ಬಿಸಿ ಬುಗ್ಗೆ

ಉಕ್ಕಿದಂತೆ ಸುಡುಬೆಂಕಿ ನುಗ್ಗೆ

ಬೆಚ್ಚನೆಯಾಟದಲೇನೊ ಹಗುರ

ಹೂವಾಗಿ ಮೇಲೆದ್ದಂತೆಲ್ಲ ಭಾರ..||

ಅದು ಭೌತ ಶಾಸ್ತ್ರದ ನಿಯಮ

ಎರಡಕಿಲ್ಲ ಒಂದೆ ತಾಣದ ಕರ್ಮ

ಒಳಗಿಳಿದಂತೆ ಮದಿರೆಯ ತಳ್ಳಾಟ

ಕವಿತೆಯಾಗಿ ಹೊರಬೀಳೊ ಕಳ್ಳಾಟ..||

ಮದಿರೆಗು ಕಾವ್ಯಕು ಅವಿನಾಭಾವ

ನಂಟೇನೊ ಗಂಟು ಹಾಕಿ ಸುಶ್ರಾವ

ಬಿಸಿರಕ್ತಸ್ರಾವ ಹನಿಯಾಗುತ ಪದ

ಕೊರೆದೊ ಕುಡಿದೊ ನೀಡುತ ಮುದ..||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01630. ಉದಾಸಿ ಮನ..


01630. ಉದಾಸಿ ಮನ..

______________________

ಮನಕೇಕೊ ಉದಾಸ ಭಾವ

ತಿನ್ನುತಿದೆ ಸುಮ್ಮನೆ ಜೀವ

ಒಂದೇ ಸಮನೆ ಸುರಿತ ಸತತ

ಹೇಳಲಾಗದದೇನೊ ಮೊರೆತ ||

ಬೇಡವೆನ್ನುತ ಕೂತಾಗ ನಿಂತ

ನಿಂತ ಚಡಪಡಿಕೆ ನಡೆದಾಡಿಸುತ್ತ

ನಡೆದೆಲ್ಲಿ ಮುಗಿದೀತು ನಿಲ್ಲದೋಟ ?

ಉತ್ತರವಿಲ್ಲದ ಪ್ರಶ್ನೆ, ಗೊತ್ತು ಗುರಿಯೆತ್ತ?! ||

ಮನಸಾಗದಲ್ಲ ತಿನ್ನೆ ತಿನಿಸು

ವಿನಾಕಾರಣ ಎಲ್ಲಕು ಮುನಿಸು

ತಕ್ಕಡಿ ತಟ್ಟೆಗ್ಹಾಕಿದ ಕಪ್ಪೆ ಮನ

ಚಿಂತನೆಗೆಲ್ಲ ಚಿಂತೆಯ ಲೇಪನ ||

ಖೇದವೆಂದರೆ ಖೇದ ವಿಷಾದ

ಮೋದವೆನ್ನೆ ವಿನೋದ ಸಂಪದ

ಎರಡರ ನಡುವಿನದಲ್ಲದ ತ್ರಿಶಂಕು

ಯಾವುದಲ್ಲದಾ ಎಡಬಿಡಂಗಿ ತುಕ್ಕುq ||

ಉದಾಸವಾಗೆ ಉಲ್ಲಾಸ ಒಳಿತು

ಆಗುವ ಬಗೆ ಅರಿವಾಗದ ವಸ್ತು

ಸುಸ್ತಾದರು ಕಾಯೆ ಮೌನ ಹೊತ್ತು

ಬೇಡಿಕೊಳ್ಳುತ ಆಗಲೆಂದು ತುರ್ತು ! ||

– ನಾಗೇಶ ಮೈಸೂರು

Nagesha Mn

(Picture source: Internet / social media)

01629. ಗೊಮ್ಮಟನಿಗೊಂದು..


01629. ಗೊಮ್ಮಟನಿಗೊಂದು..

______________________________

ಅಕಟಕಟ ಗೊಮ್ಮಟ

ನೀನೆಂಥಾ ಕರ್ಮಠ !

ಏನಿದು ನಿನ್ನಾ ಕಮ್ಮಟ ?

ಮಸ್ತಕಾಭಿಷೇಕದದ್ಭುತ! ||

ನೀ ವಿವಸ್ತ್ರನಿದ್ದೂ ಸಜ್ಜನ

ನಿನಗೇನೇನೆಲ್ಲಾ ಮಜ್ಜನ !

ಹಾಲೂ ನೀರು ಅರಿಶಿನ

ಕುಂಕುಮದಾ ಕೆನ್ನೀರಣ್ಣ ||

ರಾಜ್ಯ ತ್ಯಜಿಸಿ ನಡೆದರೆಷ್ಟೊ

ಗೆದ್ದು ನಡೆದೆಯೇಕೆ ಒಗಟು !

ಗೆದ್ದಾಗರಿತೆಯ, ಎಲ್ಲಾ ನಶ್ವರ ?

ಎಚ್ಚರಾಯ್ತೆ, ಗುದ್ದಾಡೆ ಸೋದರ ? ||

ಬಿಟ್ಟೆಲ್ಲ ಸೋತ ಭರತಗೆ

ವಿರಕ್ತಿ ಹಾದಿಗಿಟ್ಟೇ ಲಗ್ಗೆ ..

ಬಾಹುಬಲಿ ನೀನೆಂಥ ನಮ್ರ

ತಪ ಧಿಮಂತಿಕೆ, ದಿಗಂಬರ ! ||

ನೋಡುವೀ ಜಗವೇಕೊ ಕ್ರೂರ

ನಿನ್ನಾಗಿಸಿವೆ ದೈವ ದೈತ್ಯಾಕಾರ

ಬಿಟ್ಟೆಲ್ಲ ನಿಂತವಗದೆ ಕೊಟ್ಟರಲ್ಲ !

ಬಿಟ್ಟಿದ್ದದೇ ಭೋಗ ಶಿರದಿಂ ಪದತಲ !!

– ನಾಗೇಶ ಮೈಸೂರು

(Nagesha Mn)

(Picture source : Internet / social media received via Prasanna Prasanna sir – thank you ! 🙏👍😊)

01628. ನಿದಿರಿಸದ ನಯನಕೆ..


01628. ನಿದಿರಿಸದ ನಯನಕೆ..

_________________________________

ಯಾಕಿನಿತು ವಿರಮಿಸದೆ

ಚಡಪಡಿಸಿರುವೆ ಸಮನೆ ?

ನಸುಕಿನ ಮುಸುಕ ತೆರೆವ

ಹೊತ್ತಾಯ್ತು ಏನಿನ್ನು ಗಣನೆ ? ||

ಬಾರದೇಕಿನ್ನು ತೂಕಡಿಕೆ ?

ಹತ್ತಿರ ಸುಳಿಯದ ನಿದಿರೆ

ಸಾಕಾಗಲಿಲ್ಲೇನು ಹಗಲೆಲ್ಲ ?

ದಣಿದ ದೇಹದ ಕಾಗುಣಿತ ||

ತೋಚದೊಂದೂ ಕಾರಣ

ಯಾರೂ ಕಾಡಲಿಲ್ಲ ಗೌಣ

ಘಟಿಸಲಿಲ್ಲವಲ್ಲ ಹಿತಾಹಿತ

ಯಾಕಿನ್ನು ಇಲ್ಲ ಮುಹೂರ್ತ? ||

ಕಣ್ಣೆಳೆದಿತ್ತಲ್ಲ ಅನಿವಾರ್ಯ ?

ಉಂಡೂಟ ಕಾಯ ತೇಗಿಸಿ

ಏನಿರಲಿಲ್ಲ ಸೂಚನೆ ಸುಳಿವು

ಮಾಯವಾದಂತೆಲ್ಲ ಮಾಯೆ ||

ಕಟ್ಟೆಚ್ಚರದಲಿ ಕಾದಿಹೆಯೇನ ?

ಮುಂಜಾವಿನ ದೇಗುಲ ಸದ್ದ ?

ಜಾಗೃತದಲದೇನೊ ಕುರುಹನು

ನೀಡಿಹುದೇನು? ನೀನೆ ಅರುಹು! ||

– ನಾಗೇಶ ಮೈಸೂರು

(Nagesha Mn)

(Picture source- from Pinterest: https://goo.gl/images/THAf9C)

01627. ಬಾ ರಾಧೆ ಹೋಗಿಬಿಡುವ..


01627. ಬಾ ರಾಧೆ ಹೋಗಿಬಿಡುವ..

___________________________

ಬಾ ರಾಧೆ ಹೋಗಿಬಿಡುವ

ಬಿಟ್ಟು ಈ ಭೂಲೋಕವಾ..

ನೀಡುವರೆಲ್ಲಾ ಪರಿಪರಿ ಕಾಟ

ನನ್ನ ನಿನ್ನ ಏಕಾಂತಕೆ ಬಿಡದೆ ! ||

ಹೌದಲ್ಲೊ ಮುರಳಿಲೋಲ

ನುಡಿಸೆ ಸಾಕು ಗೋಪೀ ಸ್ವರ

ಬಿಡದಲ್ಲೊ ಗೋವುಗಳ ಗಣ

ಬಾ ಎಲ್ಲಾದರು ಸರಿ ಹೋಗುವ ||

ಬರಿ ದ್ವಾಪರದ ಮಾತಲ್ಲವೆ

ಕಲಿಯುಗದಲ್ಲು ಅದೆ ಸೊಲ್ಲು

ಬಿಡದೆ ಕಾಡಿಹರೆಮ್ಮ ಸ್ವಗತ

ಕಾವ್ಯ ಗಾನ ಆರಾಧನೆ ಬಿಡದೆ ||

ದೂಷಿಸಲೆಂತದನೊ ಮಾಧವ ?

ಸ್ನೇಹ, ಪ್ರೇಮಭಾವ ನಿರ್ವಾಜ

ಅದ್ವಿತೀಯ ಅಚಂದ್ರಾರ್ಕ ಮುದ್ರೆ

ಕುರುಹಾಗುಳಿದರು ಈ ಕಹಿಯೇಕೆ ? ||

ನೋಡಿದೇ ರಾಧೆ, ವಿಪರ್ಯಾಸ

ಹೆಸರಾಗಿಬಿಡೆ ಹೆಸರೊಂದೆ ಸಹ್ಯ

ಮಿಕ್ಕೆಲ್ಲಕು ಹೊಂದಾಣಿಕೆ ಬೇಕೆ

ಸ್ವಂತಕೂ ಚಂದ್ರಿಕೆ ಸಿಗದ ಕೊರಗೆ ||

ರಾಧಾಮಾಧವ ವಿನೋದ ಹಾಸ

ಹಾಡುವರೆಲ್ಲ ಬಿಡದೆ ಬರಿ ಮೋಸ

ಬಿಡಬಾರದೆ ಅವರನ್ನವರ ಪಾಡಿಗೆ ?

ಎನ್ನುವಾ ಹಾಡಲು ಬಿಡದದೆ ದ್ವಂದ್ವ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 🙏😊👍)

01626. ದೇವುಡಾ, ದೇವುಡಾ ! 😞


01626. ದೇವುಡಾ, ದೇವುಡಾ ! 😞

_________________________________

ಪದಿನಾರು ವಯದಿನಿಲೆ

ಹದಿಹರೆಯಕದೆಷ್ಟು ಲೀಲೆ

ಕೊಚ್ಚಿದೆಳನೀರಿನ ಬುರುಡೆ

ಜಾರಿತೆಲ್ಲೊ ಕಾಣದ ಜಾಡೆ ! ||

ಸುಪರಮಣಿ ಸುಪರಮಣಿ

ಅಂದಿತ್ತಲ್ಲ ಮುದ್ದಿನರಗಿಣಿ

ಗಿಣಿಮೂಗವಳಿ ಮಾತಂಗಿ

ಸಿಡಿಲತೊಡೆ ಬಿರುದಿನಂಗಿ ||

ದೇವುಡ, ದೇವುಡಾ ಜಪಂ

ಜಪಿಸಿತ್ತಲ್ಲ ಜನ ಕ್ಷಣಕ್ಷಣಂ

ಏನಿದೀ ಅವಲಕ್ಷಣ ಸೂತ್ರ

ವಯಸಿನ್ನು ಸಾವಿಗೆ ಅಪಾತ್ರ ||

ಚಾಂದಿನಿಯಾಗಿ ಜೀವಂತ

ಮಿಸ್ಟರಿಂಡಿಯಾದೆ ಅನಂತ

ದಕ್ಷಿಣದಿಂದುತ್ತರಕು ಧಾಳಿ

ಎಬ್ಬಿಸಿದಳೆಂತ ಬಿರುಗಾಳಿ ! ||

ಇಂಗ್ಲಿಷ್ ವಿಂಗ್ಲಿಷ್ ಅನ್ನುತ್ತ

ಮತ್ತದೆ ವೈಭವ ಬರಬೇಕಿತ್ತ..

ಅವನಾಸ್ಥಾನದಲಿತ್ತೇನುಕೊರತೆ ?

ಭಾರಿ ಮೋಸ, ಚಂದದ್ದೆ ಹೆಕ್ಕುತ್ತೆ ! ||

– ನಾಗೇಶ ಮೈಸೂರು

೨೫.೦೨.೨೦೧೮

(Nagesha Mn)

(Picture source : Internet news / social media)

01625. ಯಕ್ಷ ಪ್ರಶ್ನೆ..


01625. ಯಕ್ಷ ಪ್ರಶ್ನೆ..

______________________

ಮೊಗವೆತ್ತಿ ಮುಗಿಲತ್ತ

ನೋಡಿದೆಯೇನೊ ಚಿತ್ತ

ಗಗನದಲೂ ಹಗಲಿಲ್ಲ

ಇರುಳಿನದೆ ಸಾಮ್ರಾಜ್ಯ ||

ತಾರೆಗಳೆಷ್ಟೊ ಅನಂತ

ಆಕಾಶಕಾಯದ ಗ್ರಂಥ

ದಿಟ್ಟಿಸುತಲಿವೆ ಅವಳತ್ತ

ಏನೀ ಸೃಷ್ಟಿಚಿತ್ತದಿಂಗಿತ ? ||

ನಡೆದಲ್ಲೇನೊ ಸಂವಹನ

ನಡೆದಿಹುದೇನು ಗುಣಗಾನ ?

ಮೊರೆಯಿಕ್ಕಿದೆಯೆ ಆರ್ತತೆ

ಅನಂತಕದೇನೊ ಕೋರುತೆ ? ||

ಕೊಟ್ಟಿಹಳೇನೊ ಮುತ್ತಂತೆ

ಪಡೆದು ನೀಳ ಕೇಶದ ಕಂತೆ

ನಿಗೂಢವನೆ ಹೆಣೆದವರಿಬ್ಬರು

ಗುಪ್ತಾಲೋಚನೆ ನಡೆಸಿಹರು ! ||

ಸೃಷ್ಟಿಚಿತ್ತ ಸೌಂದರ್ಯ ಮೂರ್ತ

ಸಾಲದೆನ್ನೊ ಅಹವಾಲನಿಡುತ್ತ

ಕೇಳಿಹಳೇನೊ ಚಿತ್ತದ ಚಿತ್ತವನೆ

ಉತ್ತರ ಸಿಕ್ಕೀತೇನು? ಯಕ್ಷಪ್ರಶ್ನೆ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via FB friends – thank you 🙏😊👍)