01585. ಯಾರೆ? ಅವನಾರೆ?


01585. ಯಾರೆ? ಅವನಾರೆ?

_____________________________

ಯಾರೆ? ಅವನಾರೆ?

ಮರೆಸಿಬಿಟ್ಟನಲ್ಲ ನಾನಾರೆ?

ಮೋಹ ಪರವಶ ಮೈಮರೆಸಿ ಕಾಡಿದನೆ

ಪರಿವೆಯಿಲ್ಲ ಜಾರಿದ ಸೆರಗು ತುಂಬಾ ಅವನೆ ! ||

ಅರಿವಿದ್ದರೇನು ಪ್ರಾಯ?

ನೆಲೆ ನಿಲ್ಲದೇಕೊ ಅರಿವೆ ಮಾಯ

ತಡೆಯಬಲ್ಲದೆ ತೆಳು ಅರಿವೆ ಒತ್ತಾಯ?

ಯೌವ್ವನದ ಭಾರ ಹಾರಿ ತಂಗಾಳಿಗು ಹೃದಯ ! ||

ಬಳ್ಳಿಗಾಸರೆ ಮರ ತಾನೆ?

ಬಳ್ಳಿಯಾಗಿ ಒರಗಿ ಅಪ್ಪಿದೆ ನಾನೆ

ಅವನಲ್ಲ ಬಲ್ಲೆ ಅವನೆಂದುಕೊಂಡ ಸ್ಮೃತಿ

ಅವನಿಲ್ಲದೆಡೆಯಲ್ಲು ಅವನ ಕಾಣುವ ವಿಸ್ಮೃತಿ ||

ವನರಾಶಿ ನಡುವೆ ಲಲನೆ

ಪ್ರಕೃತಿಯೊಳಗೆ ಪ್ರಕೃತಿ ಮೇನೆ

ನಿಸ್ತೇಜಕೊಂದು ಹೊಸ ತೇಜ ಕಣ್ಣಲಿರೆ

ಜಗಮಗಿಸಿ ಪರಿಸರದೆ ಕಾಂತಿಯ ಬಸಿರೆ ||

ಮಾತು ಕೊಟ್ಟನೆಂದು ಸೋತೆ

ಶರಣಾಗಿ ಹೋದೆ ಅವನದಾಗಿ ಕವಿತೆ

ಅವನಿಲ್ಲದೆಡೆಯು ಅವನ ಚಿತ್ತಾರ ಮುಸುಕೆ

ಕಾದವನ ಬರುವಿಕೆಗೆ ವನರಾಣಿ ನಾ ಅವನಾಕೆ! ||

– ನಾಗೇಶ ಮೈಸೂರು

(Nagesha Mn)

(Picture source internet / social media received via Muddu Dear – thank you madam 🙏👍😊)

(ಮುದ್ದು)

01584. ಸಂಗಾತಿ ಸಾಂಗತ್ಯ…


01584. ಸಂಗಾತಿ ಸಾಂಗತ್ಯ…

_______________________________

ಮರದ ನೆರಳು ಮುಸ್ಸಂಜೆ ಕೊರಳು

ಹರಿಯುವ ನದಿ ಬಳಸುತ ನಡುಗಡ್ಡೆ

ಚೆಲ್ಲಾಡಿದ ರಂಗು ಆಗಸ ರಂಗೋಲೆ

ಮೈ ಮರೆತ ಜೋಡಿ ಅಪ್ಪುತ ಕೂತಲ್ಲೆ ||

ಹಕ್ಕಿಗಳ ಕಲರವ ಬಚ್ಚಿಕ್ಕಿ ಪಿಸುಮಾತ

ಪಿಸುಗುಟ್ಟುವ ಗುಟ್ಟ ಹೆಕ್ಕಿ ಮೌನದಾಟ

ಭಾವಯಾನ ಪರವಶ ಪ್ರೇಮ ಕರವಶ

ಮಡಿಲಲಪ್ಪಿ ಕಾಪು ಜಾರಬಿಡ ಸ್ವಾರ್ಥ ||

ನೀರಾಟ ನಟನೆ ತೆಳುವಲೆ ಸಂಚಲನೆ

ತನ್ನೊಡಲಲ್ಲವಿತನೆ ತನ್ನಲ್ಲೆ ಫ್ರತಿಫಲನೆ

ಜಗಮಗಿಸೆಲ್ಲ ಸುತ್ತ ಹೊನ್ನತೇರ ಫಲಿತ

ಕರುಣಿಸಿ ಪ್ರೇಮಿಗಳ ಕತ್ತಲಲಿರಿಸಿ ಸ್ವಸ್ಥ ||

ಬೆರೆತಿಹ ಮನಗಳಲಿ ವಿಸ್ಮಯ ಸಂಹಿತೆ

ಒತ್ತೊತ್ತು ಕೂತ ಸಲಿಗೆ ಅಡಿಗಡಿಗೆ ಕವಿತೆ

ಸಾಮೀಪ್ಯದ ಸಾಂಗತ್ಯ ಮರೆಸಿದೆ ಜಗವ

ನೆಮ್ಮದಿ ನಿರಾಳತೆ ದಡ ಸೇರಿಸಿದ ಭಾವ ||

ಯಾರಿಗುಂಟು ಭಾಗ್ಯ? ಸಿಗದೆಲ್ಲಗು ಲಭ್ಯ

ಸಿಕ್ಕರೆ ನಿಧಿ ಬಂಗಾರ ಸಂಭಾಳಿಸೆ ಪೂರ

ಸಾಂಗತ್ಯದಾ ಮೊತ್ತ ಸಂಗಾತಿ ಅನುರಕ್ತ

ಕಟ್ಟಿಕೊಳ್ಳೆ ಬದುಕು ಸುಖದುಃಖ ಸಹಿತ ||

– ನಾಗೇಶ ಮೈಸೂರು

(Nagesha Mn)

(Picture source internet / social media received via FB friends – thank you 🙏👍😊)

(Second poem for the same picture)

01583. ಆ ದಿವ್ಯ ಗಳಿಗೆ


01583. ಆ ದಿವ್ಯ ಗಳಿಗೆ

_________________________

ಅಪ್ಪಿ ಕೂತಾ ಗಳಿಗೆ

ಒಡ್ಡಿ ಮೈ ತಂಗಾಳಿಗೆ

ಕೂತಾಗಿ ನಾವೆ ನಿಸರ್ಗ

ಅಂಗೈಯಲರಳಿ ಸ್ವರ್ಗ! ||

ಮರ ಚಾಮರ ಪುಳಕ

ಚಿಲಿ ಪಿಲಿ ಹಕ್ಕಿ ಜಳಕ

ಮಂದಮಾರುತ ಚಂದ

ಬಿಗಿಯಾಗಿಸುತ ಬಂಧ ! ||

ಜುಳುಜುಳು ನದಿಗಾನ

ಅಡ್ಡ ನಡುಗಡ್ಡೆ ಸಮ್ಮಾನ

ದೂರದಲರುಣನ ಹಾಸ

ಅರಿಶಿನ ಕುಂಕುಮ ಸ್ಪರ್ಶ! ||

ಮಾತುಗಳಾಗಿವೆ ಮೌನ

ಮೌನವದಾಗಿ ಗಾಯನ

ಬಣ್ಣಿಸಲೆಂತು ದಿವ್ಯ ಕ್ಷಣವ ?

ಕಿನ್ನರ ಗಂಧರ್ವ ಕಲರವ ! ||

ಏಕಾಂತ ಬಿಚ್ಚಿ ಅಗುಳಿ

ನಿರಾಳ ಮನ ಕಚಗುಳಿ

ಸಿಗ್ಗು ಸೋಗೆಲ್ಲ ಮಾಯ

ಎರಡೊಂದಾದ ಸಮಯ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 😊🙏👍

– one more poem will follow)