01589. ಕವನದ ಕಾರ್ಖಾನೆ..


01589. ಕವನದ ಕಾರ್ಖಾನೆ..

_________________________

ಮನಸೊಂದು ಕವನದ ಕಾರ್ಖಾನೆ

ನಾ ಮಾಲೀಕ ಕಾರಕೂನ ಗ್ರಾಹಕ

ದುರ್ಬಲ ವ್ಯಾಪಾರಿ ಮಾರಬರದು

ಕುಕ್ಕೆಯಲ್ಹೊತ್ತ ಹಣ್ಣಮ್ಮ ಬೀದಿಯಲಿ ||

ಕೂಗಲು ಸಂಕೋಚ ‘ಹಣ್ಣಮ್ಮ ಹಣ್ಣು‘

ಮಾರುವುದೆಂತು ಕೂಸ ಹೆತ್ತ ಮಡಿಲು

ತೋರುವ ಆಶಯ ಚಂದದ ಕಂದನ

ಮಾರದೆ ಮತ್ತೆ ಮುಚ್ಚಿ ಬಟ್ಟೆಯ ಹೊದಿಸೆ ||

ಬೆಳೆಯೊ ಫಸಲೊ ಸಂತಾನ ಸತತ

ಎಳ್ಳೊ ಜೊಳ್ಳೊ ಅಬಾಧಿತ ಶಿಶು ಜನನ

ಹಸುಳೆಗಳಾಕ್ರಂದನ ತೋರಲೆ ಮುಕ್ತಾ

ಬುಟ್ಟಿಗೆ ತುಂಬಿಟ್ಟು ಪ್ರದರ್ಶನ ಫಲಪುಷ್ಪ ||

ನೋಡೀ ಮುಟ್ಟುವ ಕೊಳ್ಳುವ ಸಹೃದಯ

ಆಸ್ವಾದಿಸಿ ನಲ್ನುಡಿಯನಾಡುವ ಘನತೆ

ತುಂಬಿ ಬಂದೆದೆಗೊರಗಿ ಆಹ್ಲಾದ ಮಧುರ

ಬಿಚ್ಚಿಡಲದೆ ನವಿಲ ಗರಿ ಮತ್ತೆ ಧಾರಾಕಾರಕೆ ||

ಬರುವುದೆಲ್ಲ ಬರಲಿ ನಿರಂತರ ಉತ್ಪಾದನೆ

ಯಾರಿಗೆ ಯಾರೊ ಆಗುವ ಕವಿತೆಯೊಳದನಿ

ಪ್ರಕಟವಾಗಿ ನಿರಾಳ ಅನಾವರಣ ಅಂತರಾಳ

ಭಾವನೆ ಬವಣೆ ಕಲ್ಪನೆ ಚಿತ್ತ ವಿಲಾಸದ ಕೃಷಿ ||

– ನಾಗೇಶ ಮೈಸೂರು

(Nagesha Mn)

(Picture credit : http://www.shutterstock.com)

01588. ಭೃಂಗಿ ಬರಲಿಲ್ಲವಿನ್ನು..


01588. ಭೃಂಗಿ ಬರಲಿಲ್ಲವಿನ್ನು..

_______________________________

ದುಷ್ಯಂತನ ಶಕುಂತಲೆ

ಕಾತರದಿ ಕಾದು ನಿಂತಳೆ

ಯಾಕೊ ಬರಲಿಲ್ಲವಿನ್ನೂ ದುಂಬಿ

ಬರದೆ ಬರನಲ್ಲ ಮನಸೆಲ್ಲ ದೊಂಬಿ ! ||

ಜಾರುತಿದೆ ಸುಸಮಯ

ಸಿಂಬಿ ಸುತ್ತಿದ ಸುಮ ಕಾಯ

ನೆಪಕೆ ಹಿಡಿದ ಕೊಡದಲಿಲ್ಲ ನೀರು

ಖಾಲಿಖಾಲಿ ಮನ ಕಸಿವಿಸಿ ತಕರಾರು ||

ಮರೆಯೊಡ್ಡಲಿದೆ ಜಲಪಾತ

ಮರಗಿಡ ಪೊದೆ ಬಳ್ಳಿ ಸುತ್ತಮುತ್ತ

ಬಾ ಭೃಂಗಿ ಬಹರಾರು ಸಖಿಯರಿಲ್ಲಿಗೆ

ನೀ ಬಂದರೆ ಅವ ಬಂದೇ ಬರುವ ರಕ್ಷೆಗೆ ||

ನಿಂತು ಸೋಲುತಿದೆ ಕಾಲು

ನಿನ್ನ ಸುಳಿವಿಲ್ಲದೆಲೆ ಕಂಗಾಲು

ಬರಿ ತಂಗಾಳಿ ತಣಿಸಲೆಂತು ಹರೆಯ

ಅವನಿಲ್ಲದೆ ಜತೆ ನಡೆಯಲೆಂತು ಪ್ರಣಯ? ||

ಬಂದುಬಿಡೆ ತಡಮಾಡದಿನ್ನು

ಬರದಿರೆ ಕಚ್ಚಿ ಗುದ್ದಿ ಕಳಿಸವನನ್ನು

ಕಾಯುವವಳ ಬವಣೆ ಮೋಹಕೆ ತಡವೆ

ಭರತನಾ ದೇಶಕೆ ಮುನ್ನುಡಿ ಬರೆಯಬೇಡವೆ ? ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Nandini Krishnakumar – thank you 🙏👍😊)

01587. ನೋಡಲ್ಲೊಂದು ಗರುಡಾ..!


01587. ನೋಡಲ್ಲೊಂದು ಗರುಡಾ..!

___________________________________

ಗರುಡಾ, ಗಗನದೆ ತೇಲೊ ಗರುಡ

ನಿನ್ನ ಕೊರಳಾ ಬಿಳುಪದೆಷ್ಟು ಗಾಢ !

ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು

ಹಗುರ ನೌಕೆ ನೀ ಗಗನದ ಬಯಲಲ್ಲು ||

ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ

ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ

ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ ?

ಶ್ವೇತ ಸಿಂಹಾಸನ ಸನ್ನದ್ಧ ಸ್ವಾಮಿಕಾರ್ಯ! ||

ಸ್ವಚ್ಚಂದ ತೇಲುವ ಹಡಗು ನೀ ಬಾನಲಿ

ಕಂಡಾಗ ಕೈಜೋಡಿಸಿ ನಮಿಸೊ ಜಗವಿಲ್ಲಿ

ನೀನೆಂದರೆ ಪೂಜನೀಯ ಕೃಷ್ಣನವತಾರವೆ

ವ್ಯೋಮಾಶ್ವ ವಿಶ್ವಯಾನ ಮಿತಿ ಬ್ರಹ್ಮಾಂಡವೆ ! ||

ಶುದ್ಧ ಹಾರಾಡುವ ಪಟ ನೀ ಅದೃಶ್ಯಸೂತ್ರ

ಶೂನ್ಯ ಗುರುತ್ವವಿದ್ದಂತಿದೆ ನಿನ್ನದಲ್ಲಿ ಪಾತ್ರ

ನಿರ್ಲಿಪ್ತ ಅವನಂತೆ ನೀ ರಣಹದ್ದಲ್ಲದ ಹದ್ದು

ಹದ್ದು ಮೀರದ ಸಿದ್ಧಿ ದೈವವಾಗಿಸಿತೆ ಖುದ್ಧು ? ||

ನಾ ಕಲಿಯುಗ ನೀ ದೈವಿಕ ಸೇತು ನಡುವೆ

ಪಾಪ ಪುಣ್ಯದ ಬಾಕಿ ಜನ್ಮಾಂತರ ಗೊಡವೆ

ಮೊನೆಚು ಕೊಕ್ಕಲಿ ಕುಕ್ಕಿಬಿಡು ತೀರಲಿ ಕಡ

ಪುರುಸೊತ್ತಲಿ ನಮ್ಮ ಹರಿಯತ್ತ ಹೊತ್ತುಬಿಡ ! ||

– ನಾಗೇಶ ಮೈಸೂರು

೦೩.೦೨.೨೦೧೮

ಚಿತ್ರ : ನಾಗರಾಜ್. ಎಸ್ (ಧನ್ಯವಾದಗಳು Nagaraj Subba Rao 🙏👍😊)