01591. ಮಿಂದರೊ ನೆಂದರೊ ಭಾವ ಸರೋವರದೆ..


01591. ಮಿಂದರೊ ನೆಂದರೊ ಭಾವ ಸರೋವರದೆ..

_______________________________________________

ನೋಡವಳೆ ಪ್ರಕೃತಿ ಅಮಲ ಶ್ವೇತ

ತುಂಬು ಯೌವನ ಹರಿದ ಜಲಪಾತ

ತಾಳಲಾಗದೆ ವಿರಹ ಬಿಸಿಯ ಬೇಗೆ

ತಂಪಾಗಲೆಂದೆ ನೀರಿಗಿಳಿದ ಸೊಬಗೆ ! ||

ಹೊದ್ದ ತೆಳುವಸ್ತ್ರ ಪಾರದರ್ಶಿ ಪ್ರಾಯ

ಹೊದಿಸದಿರೆ ಅರಿವ ಅರಿವೇ ಅಪಾಯ

ಕೊರಕಲಲಿ ಸಿಕ್ಕು ನರಳುವ ಮೊದಲೆ

ಬಂದನಲ್ಲ ಸದ್ಯ ಪುರುಷನವನೆ ಕಡಲೆ ||

ತಡವಾಯಿತೆಂದು ತಡವರಿಸದೆ ಸುಳಿದ

ಎಗ್ಗು ಸಿಗ್ಗಿಲ್ಲದೆ ಕಾಲ ಬುಡ ತಬ್ಬಿ ಕುಸಿದ

ಶರಣಾದನೊ ಆದಳೊ ನಿಲುಕುವ ಮುನ್ನ

ಜುಮ್ಮೆನಿಸಿ ಮೈಮರೆಸಿ ಭಾವದೆ ಮಜ್ಜನ ||

ಪ್ರಣಯ ಸಂಭಾವನೆ ಧಾರೆಯೆರೆದ ಕೋಟಿ

ಒಡ್ಡುಗಟ್ಟಿದ ಕೋಟೆ ತೆರವಾಗುತೆಲ್ಲ ಲೂಟಿ

ಕೊರೆವ ಜಲದೆ ನಿಶ್ಚಲ ತನ್ಮಯತೆ ಜೋಡಿ

ಉಕ್ಕುವಾಸೆ ಜ್ವಾಲೆ ಬೆಚ್ಚಗಾಗಿಸಿ ಮನಚಂಡಿ ||

ಗಿರಿ ಶಿಖರ ಗಗನ ಚಂದ್ರ ತಾರೆ ಮೆರವಣಿಗೆ

ದಟ್ಟೈಸಿ ನಿಂತಿವೆ ರತಿಮನ್ಮಥ ಚಕ್ಕಂದ ನಗೆಗೆ

ಮುದುಡಿದಾ ತಾವರೆಗು ಕುತೂಹಲ ಕೆರಳಿ

ಸಾಕ್ಷಿಯಾದವೆ ಮಿಲನಕೆ ಇರುಳಲೂ ಅರಳಿ ||

– ನಾಗೇಶ ಮೈಸೂರು

೦೩.೦೨.೨೦೧೮

01590. ಲಕ್ಷ್ಮೀದುರ್ಗಾ ಮಾತೆ


01590. ಲಕ್ಷ್ಮೀದುರ್ಗಾ ಮಾತೆ

______________________________

ಪ್ರಪುಲ್ಲ ವದನೆ ಮಾತೆ

ಅಷ್ಟಾದಶ ಕರ ಸಹಿತೆ

ಕಿರೀಟ ಮುಕುಟಧಾರಿಣಿ

ಹೇಮಾಲಂಕೃತ ಭವಾನಿ ||

ಸಿಂಹವಾಹಿನಿ ಜಗತೀ

ಮಹಿಷನ ಮೆಟ್ಟಿದ ಸತಿ

ಸಿರಿ ಸಂಪದದ ಆಗರ್ಭ

ವರದಾತೆ ಲಕ್ಷ್ಮೀದುರ್ಗಾ ||

ಕಮಂಡಲ ಸೌಮ್ಯ ಬಲ

ತ್ರಿಶೂಲ ಜತೆ ಹಿಡಿದವಳ

ಕತ್ತಿಗುರಾಣಿ ದಂಡಾಂಕುಶ

ಶಂಖಚಕ್ರ ಸಹಿತ ಗಧಾವೇಶ ||

ಆಯುಧಾವೃತ್ತ ಸಮರ ಸಿದ್ಧ

ಕುಸುಮ ಕರ ಮೃದು ಸರ್ವದಾ

ದುಷ್ಟದಮನ ಪಾದದಡಿಯಲೆ

ಶಿಷ್ಠರಕ್ಷಣೆ ಸಂತೈಸುತ ಕಣ್ಣಲೆ ||

ಲಕ್ಷ್ಮೀ ದುರ್ಗಾ ಘನ ಸಂಗಮ

ಸರ್ವಾಂಗ ಬಲ ಬೆರೆತ ನಾಮ

ರೇಶಿಮೆ ವಸ್ತ್ರ ನಗ ಜತೆ ತೊಟ್ಟು

ನಿಂತಳೆ ಜನನಿ ಕಿರುನಗೆಯುಟ್ಟು ||

– ನಾಗೇಶ ಮೈಸೂರು

೦೪.೦೨.೨೦೧೮

ಚಿತ್ರ: ಮೊಬೈಲಲ್ಲಿ ವೀರಮ್ಮ ಕಾಳಿಯಮ್ಮ ದೇವಸ್ಥಾನ, ಸಿಂಗಪುರದಲ್ಲಿ ತೆಗೆದಿದ್ದು