01594. ಜಗಳ…!


01594. ಜಗಳ…!

____________________

ಜಗಳ

ಪದದಗಲ

ಮಾತಾಗಿಸಿ ಚೆಲ್ಲೆ

ಭುಗಿಲೆದ್ದು ಕೊಚ್ಚಿ ಕೊಲ್ಲೆ ! ||

ಜಗಳ

ಜಗದಗಲ

ಆಡದವರಿಲ್ಲ ನಿತ್ಯ

ಆಡದಿರೆ ನಿಸ್ಸಾರ ಸತ್ಯ ! ||

ಜಗಳ

ಮೊಗದಗಲ

ಖಳ ಮೋರೆ ಖೂಳ

ಕ್ರೋಧ ಮುಟ್ಟಿಸಿ ಪಾತಾಳ ||

ಜಗಳ

ದಂಪತಿ ತಾಳ

ನೀರಸ ಸಮರ್ಪಕತೆ

ಮುನಿಸು ಹೆಚ್ಚಿಸೊ ರಸಿಕತೆ ||

ಜಗಳ

ನಿನದೆಂತ ಜಾಲ!

ಬಿಡದೆ ಹಾಕೆಲ್ಲಗು ಗಾಳ

ವಿನೋದಿಪೆ ತೊಡಿಸಿ ಖೋಳ ||

– ನಾಗೇಶ ಮೈಸೂರು

(Nagesha Mn)

Picture source from :

1. https://image.shutterstock.com/z/stock-vector-bad-business-team-conflict-in-office-business-fight-cartoon-cloud-illustration-isolated-on-138440339.jpg)

2. http://clipart-library.com/clipart/kTMKzz5xc.htm

3. http://clipart-library.com/clipart/730913.htm

Advertisements

01593. ನಿರಾಳವಾಗಲಿ ಮನ…


01593. ನಿರಾಳವಾಗಲಿ ಮನ…

_______________________________

ಹಚ್ಚಿಬಿಡು ಕಿಚ್ಚು

ಸುಟ್ಟುಹೋಗಲಿ ಒಮ್ಮೆಗೆ

ಸಿಟ್ಟು ಸೆಡವು ರೋಷ

ಅಸಹಾಯಕತೆ ಕೊರಗು… || ೦೧ ||

ಹೆಚ್ಚಿಬಿಡು ಗೋಳ

ಹೋಳಾಗಿ ಹೋಗಲಿ ಎಲ್ಲಾ

ಚೆಂಡು ಪುಟಿಯದ ತುಂಡು

ಚದುರಿ ಚೆಲ್ಲಾಪಿಲ್ಲಿ ದುರ್ಬಲ.. || ೦೨ ||

ಸೋಲಿನಾ ಮುತ್ತಿಗೆಗೆ

ಎದೆ ಸೆಟೆಸುತ ನಿಲ್ಲು ಬೆಚ್ಚದೆ

ಮೆಟ್ಟಲು ಮೆಟ್ಟಿಲದರಲ್ಲೆ

ಮುತ್ತಿಗೆ ಮುತ್ತಾಗಿ ಜಯಮಾಲೆ || ೦೩ ||

ಮತ್ತಿಗಿಡು ಅಂಕುಶ

ನಿರಂಕುಶ ಪಾತಾಳ ಸ್ವಾರ್ಥ

ಅಹಮಿಕೆ ಗತ್ತಿನ ಸುತ್ತ

ವಿನಯದ ಕೋಟೆ ಪರುಷ || ೦೪ ||

ಚಿಂತೆಗಾಗಲಿ ಚಿತೆ

ಚಿಂತನೆಯ ಉರುವಲಲಿ

ಮಥನ ಮಂಥನ ಸತ್ವ

ಅಧಿಗಮಿಸೆ ಮೊತ್ತ ನಿರಾಳತೆ || ೦೫ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01592. ಬಂದುಬಿಡಿದೊಂದು ಬಾರಿ….


01592. ಬಂದುಬಿಡಿದೊಂದು ಬಾರಿ….

___________________________________

ನಿನ್ನ ಚಂದದ ಚಿತ್ರ

ನಿದ್ದೆ ಕೆಡಿಸಿದೆ ಯಾಕೊ

ಚಂದಾ ಕಟ್ಟುವೆ ಒಲವಲಿ

ಚಂದ್ರಿಕೆಯಾಗು ಬಾ ಚಕೋರಿ! ||

ಎಲ್ಲ ಸಂಧಾನಕು ಸಿದ್ಧ

ಬದ್ಧ ಸಂದಾಯವೇನಿದ್ದರು

ನೀನೊಬ್ಬಳೆ ಸಾಕು ವರದಕ್ಷಿಣೆ

ವಧುರಕ್ಷಣೆ ಸುಸಂಬದ್ಧ ಬದುಕು ||

ಚಿತ್ರದಿಂದೆದ್ದೆದ್ದು ಬಂದು

ನುಗ್ಗೆಬ್ಬಿಸಿ ಗದ್ದಲ ಕನಸಲು

ಸಿಕ್ಕರು ಸಿಗದ ಜಲರಾಶಿ ಸ್ವಪ್ನ

ಕುಡಿಯಲಾಗದಲ್ಲ ಸಾಗರದ ನೀರೆ ||

ಸಕ್ಕರೆ ತುಟಿಯಷ್ಟು ಸಿಹಿ

ರುಚಿಗಷ್ಟು ಲವಣವಿಹ ಮಾತಲಿ

ತುಸು ಬಿಂಕ ಬಿನ್ನಾಣ ಕಲಶಪ್ರಾಯ

ನಡೆ ನುಡಿಯಾಗಿ ಮಾದರಿ ಸಮುದಾಯ ||

ಬಂದುಬಿಡಿದೊಂದು ಬಾರಿ

ಕನಸಾಗದ ನನಸಿನ ಯಾತ್ರೆಗೆ

ಬಿಡು ಯಾವುದೊ ಜನುಮದ ಮಾತ

ಬಂದಿರು ಜತೆ ಅರೆಗಳಿಗೆಯಾದರು ಸರಿಯೆ! ||

– ನಾಗೇಶ ಮೈಸೂರು

೦೩.೦೨.೨೦೧೮